29 ನೇ ಮಾದ್ವ ತತ್ವಜ್ಞಾನ ಸಮ್ಮೇಳನ ಉದ್ಘಾಟನೆ
ಹುಬ್ಬಳ್ಳಿ; ವಿವಿಧ ಮಠಗಳು, ಸಂಪ್ರದಾಯ, ಆಚರಣೆಗಳಿದ್ದರೂ ವಿವಿಧ ಮಾಧ್ವ ಮತಗಳು ಸಮಗ್ರವಾಗಿ ಒಂದಾಗಿ ಮದ್ವಾಚಾರ್ಯರು ಪ್ರತಿಪಾದಿಸಿದ ದ್ವೈತ ಸಿದ್ಧಾಂತ ಪ್ರಚಾರ ಮಾಡುವಲ್ಲಿ ಮುಂದಾಗಬೇಕು ಎಂದು ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳ ಮಠಾಧೀಶ ಸುಬುಧೇಂದ್ರ ತೀರ್ಥ ಸ್ವಾಮೀಜಿ ಇಂದಿಲ್ಲಿ ಕರೆ ನೀಡಿದರು.
ಅಖಿಲ ಭಾರತ 29 ನೇ ಮಾಧ್ವ ತತ್ವಜ್ಞಾನ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಧ್ವಮತ ಅನುಯಾಯಿಗಳ ನಡುವೆ, ಮಠ ಹಾಗೂ ಶಿಷ್ಯರ ನಡುವೆ ವಿನಾಕಾರಣ ವೈಮನಸ್ಸು, ವಿವಾದಗಳನ್ನು ಹುಟ್ಟು ಹಾಕಲಾಗುತ್ತಿದ್ದು, ಅವುಗಳಿಗೆ ತಕ್ಕ ಉತ್ತರವನ್ನು ಸಮಾಜವು ಒಂದಾಗಿ ಉತ್ತರ ಕೊಡಬೇಕು ಎಂದರು.
ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠವು ನೂರಾರು ಪಂಡಿತರನ್ನು ತಯಾರು ಮಾಡಿದೆ. ಅವರು ದೇಶಾದ್ಯಂತ ವಿವಿಧೆಡೆ ಸುಧಾ ಪಾಠ ಹಾಗೂ ಮಧ್ವಮತ ಪ್ರಚಾರದಲ್ಲಿ ತೊಡಗಿದ್ದಾರೆ. ಇವರು ಉದ್ಯೋಗವಿಲ್ಲ ಎಂಬ ಅಭದ್ರತೆ ಅನುಭವಿಸಬಾರದು ಹಾಗಾಗಿ ಇಂಥ ವಿದ್ಯಾರ್ಥಿಗಳು ಮತ್ತು ಪಂಡಿತರಿಗೆ ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳ ಮಠವು ಒಂದು ಲಕ್ಷ ರೂಗಳನ್ನು ಸಹಾಯ ಧನವಾಗಿ ಕೊಡುವುದು ಎಂದು ಶ್ರೀಗಳು ಈ ಸಂದರ್ಭದಲ್ಲಿ ಪ್ರಕಟಿಸಿದರು.
ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ತೀರ್ಥರು, ಸೋದೆ ವಾದಿರಾಜ ಮಠದ ವಿಶ್ವವಲ್ಲಭ ತೀರ್ಥ ಶ್ರೀಪಾದರು, ಅದಮಾರು ಮಠದ ಈಶಪ್ರಿಯ ತೀರ್ಥ ಶ್ರೀಪಾದರು, ಬನ್ನಂಜೆ ರಾಘವೇಂದ್ರ ತೀರ್ಥರು ಉಪಸ್ಥಿತರಿದ್ದರು.ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಇದ್ಧರು.
ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ವಿದ್ವಾನ್ ಎ.ಹರಿದಾಸ ಭಟ್ ಸಮ್ಮೇಳನಾ ಧ್ಯಕ್ಷರ ಭಾಷಣ ಮಾಡಿದರು. ಸಿ.ಬದರೀನಾಥಾಚಾರ್ಯ ಕಾರ್ಯಕ್ರಮ ನಿರೂಪಿಸಿದರು. ರಾಮವಿಠ್ಠಲಾಚಾರ್ಯ ಸ್ವಾಗತಿಸಿದರು.
ತತ್ವಜ್ಞಾನ ಸಮ್ಮೇಳನ- ಭವ್ಯ ಶೋಭಾಯಾತ್ರೆ
ಮೆರಗು ತಂದ ಭಜನೆ, ಕೋಲಾಟ
ಹುಬ್ಬಳ್ಳಿ : ಮಧ್ವಾಚಾರ್ಯರ ಬೋಧಿಸಿದ ಮಾಧ್ವ ತತ್ವಗಳನ್ನು ಪ್ರಚುರಪಡಿಸಲು ಮತ್ತು ಅವುಗಳ ಬೆಳಕಿನಲ್ಲಿ ಇಂದಿನ ಬದುಕನ್ನು ಹಸನುಗೊಳಿಸಲು ಉಡುಪಿಯ ಪೇಜಾವರ ಮಠದ ಪ್ರಸ್ತುತ ಮಠಾಧೀಶರಾದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆಯುತ್ತಿರುವ 29 ನೇ ತತ್ವಜ್ಞಾನ ಸಮ್ಮೇಳನಕ್ಕೂ ಮೊದಲು ಮಧುರಾ ಕಾಲನಿಯ ಬನ್ನಿಗಿಡದಿಂದ ಸಮ್ಮೇಳನದ ಸ್ಥಳ ಶ್ರೀನಿವಾಸ ಕಲ್ಯಾಣಮಂಟಪದವರೆಗೂ ಭವ್ಯ ಶೋಭಾಯಾತ್ರೆ ನಡೆಯಿತು.
ದಾರಿಯುದ್ದಕ್ಕೂ ಕುಂಭ, ಕಳಶ ಹೊತ್ತ ಮಹಿಳೆಯರು ಮೆರವಣಿಗೆಯಲ್ಲಿದ್ದರು. ವಿವಿಧ ಮಹಿಳಾ ಮಂಡಳಗಳ ಭಜನೆ ಹಾಗೂ ಕೋಲಾಟಗಳು ಶೋಭಾಯಾತ್ರೆಗೆ ಮೆರಗು ತಂದವು. ದಾಸವೇಷಧಾರಿಯೊಬ್ಬರು ಯಾತ್ರೆಯುದ್ದಕ್ಕೂ ಏಕತಾರಿ ಮತ್ತು ತಾಳ ನುಡಿಸುತ್ತ ದಾಸರ ಪದಗಳನ್ನು ಹಾಡುತ್ತ ಕುಣಿದಿದ್ದು ವಿಶೇಷವಾಗಿತ್ತು.
ಚಂಡೆವಾದನದ ಹಿನ್ನೆಲೆಯಲ್ಲಿ ಕಾರ್ಯಕರ್ತರು ಪತಾಕೆಗಳನ್ನು, ಧ್ವಜಗಳನ್ನೂ ಹಿಡಿದು ಸಾಗಿದರು. ಕೊನೆಗೆ ಅಲಂಕರಿಸಿದ ರಥದಲ್ಲಿ ಆಸೀನರಾಗಿದ್ದ ಉಡುಪಿ ಪೇಜಾವರ ಮಠಾಧೀಶ ಹಾಗೂ ಸಮ್ಮೇಳನ ರೂವಾರಿ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಗಳನ್ನು ಮೆರವಣಿಗೆಯಲ್ಲಿ ಸಮ್ಮೇಳನ ನಡೆಯುವ ಸ್ಥಳಕ್ಕೆ ಕರೆದೊಯ್ಯಲಾಯಿತು.
ಸಮ್ಮೇಳನ ಸಂಚಾಲಕ ಬದರಿನಾಥಾಚಾರ್ಯ, ಕಾರ್ಯಕಾರಿ ಸಮಿತಿ ಗೌರವಾಧ್ಯಕ್ಷ ಶ್ರೀಕಾಂತ ಕೆಮ್ತೂರ, ಗೋಪಾಲಕೃಷ್ಣ ನಾಯಕ ಗುಜ್ಜಾಡಿ, ಪ್ರಧಾನ ಕಾರ್ಯದರ್ಶಿ ಶ್ರೀಪಾದ ಸಿಂಗನಮಲ್ಲಿ, ಕಾರ್ಯದರ್ಶಿ ಅನಂತರಾಜ ಭಟ್, ಹಣಕಾಸು ಸಮಿತಿ ಕಾರ್ಯಾಧ್ಯಕ್ಷ ಎ.ಸಿ.ಗೋಪಾಲ, ಚಕ್ರವರ್ತಿ ಸೂಲಿಬೆಲೆ, ಎ.ಪಿ.ಐತಾಳ, ಗೋಪಾಲ ಕುಲಕರ್ಣಿ,ಮದನ ಕುಲಕರ್ಣಿ,ನರೇಂದ್ರ ಕುಲಕರ್ಣಿ, ಸುನೀಲ ಗುಮಾಸ್ತೆ, ಗುರುರಾಜ ಕೌಜಲಗಿ, ಮನೋಹರ ಪರ್ವತಿ, ವಿಶ್ವನಾಥ ಕುಲಕರ್ಣಿ, ಅಭಿಷೇಕ ಕೌಜಲಗಿ,ರೋಹಿತ ಮಮ್ಮಿಗಟ್ಟಿ, ಪ್ರಮೋದ ಮುನೋಳ್ಳಿ, ಶ್ರೀನಿವಾಸ ಕೊರ್ಲಹಳ್ಳಿ ಸುಶಿಲೇಂದ್ರ ಕುಂದರಗಿ,ಜನಮೇಜಯ ಉಮರ್ಜಿ ಮುಂತಾದವರು ಮುಂಚೂಣಿಯಲ್ಲಿದ್ದರು.
ಸಾಯಂಕಾಲ ಸಭಾ ಕಾರ್ಯಕ್ರಮ ನಡೆಯಲಿದ್ದು ರಾತ್ರಿ ೮ಕ್ಕೆ ಶ್ರೀ ಅನಂತಕುಲಕರ್ಣಿ ಹಾಗೂ ಶ್ರೀ ರಾಯಚೂರು ಶೇಷಗಿರಿದಾಸರುದಾಸವಾಣಿಜುಗಲ್ ಬಂದಿ ಕಾರ್ಯಕ್ರಮ ಪ್ರಸ್ತುತಪಡಿಸುವರು.
ಸೇವೆ ಹಿಂದೂ ಧರ್ಮದ ಅವಿಭಾಜ್ಯ ಅಂಗ
ಹುಬ್ಬಳ್ಳಿ: ಸೇವಾ ಮನೋಭಾವನೆ ಎಂಬ ಅಂತಃಶಕ್ತಿಯಿಂದ ಭಾರತವು ಇಂದು ವಿಶ್ವಗೌರವಿಸುವ ದೇಶವಾಗಿ ಬೆಳೆದಿದೆ ಎಂದು ಪ್ರಸಿದ್ಧ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಇಂದಿಲ್ಲಿ ಹೇಳಿದರು.
ಅಖಿಲ ಭಾರತ ಮಾಧ್ವ ಮಹಾಮಂಡಳ ಇಲ್ಲಿಯ ಶ್ರೀನಿವಾಸ ಗಾರ್ಡನ್‌ದಲ್ಲಿ ಆಯೋಜಿಸಿರುವ 29 ನೇ ಅಖಿಲ ಭಾರತ ಮಾಧ್ವ ತತ್ವಜ್ಞಾನ ಸಮ್ಮೇಳನದ ಮೊದಲ ದಿನ ’ಸೇವಾ ಪರಮೋಧರ್ಮಃ’ ಎಂಬ ವಿಷಯ ಕುರಿತು ಮಾತನಾಡಿದ ಅವರು ತಮ್ಮ ಅನುಭವಗಳ ಹಿನ್ನೆಲೆಯಲ್ಲಿ ಜನಸೇವೆಯೇ ಜನಾರ್ದನ ಸೇವೆ ಎಂಬುದನ್ನು ಒತ್ತಿ ಹೇಳಿದರು.
ಶತ್ರುಗಳನ್ನು ಕೂಡ ಮಿತ್ರರಂತೆ ಪ್ರೀತಿಯಿಂದ ನೋಡಿದ ದೇಶ ಭಾರತ. ಕೊರೊನಾ ಸಂದರ್ಭದಲ್ಲಿ ಅಮೆರಿಕದಂತಹ ಶ್ರೀಮಂತ ದೇಶಗಳು ವ್ಯಾಕ್ಸಿನ್‌ಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡಲು ಮುಂದಾಗಿದ್ದವು. ಆದರೆ ಜಗತ್ತು ಬೆರಗಾಗುವಂತೆ ತಾನೂ ವ್ಯಾಕ್ಸಿನ್‌ಗಳನ್ನು ಉತ್ಪಾದಿಸಿದ ಭಾರತ ಅತಿ ಕಡಿಮೆ ಬೆಲೆಗೆ ಮಾರಾಟ ಮಾಡಿತು. ದುಡ್ಡೇ ಇಲ್ಲ ಎಂದ ಬಡದೇಶಗಳಿಗೆ ಲಕ್ಷಾಂತರ ವ್ಯಾಕ್ಸಿನ್‌ಗಳನ್ನು ಉಚಿತವಾಗಿ ನೀಡಿತು. ಭಾರತಕ್ಕೆ ಈ ಸೇವೆ ನೀಡುವ ಶಕ್ತಿ ಬಂದಿದ್ದು ಅದು ರೂಢಿಸಿಕೊಂಡಿರುವ ಅಂತಃಶಕ್ತಿಯಿಂದ ಎಂದು ಚಕ್ರವರ್ತಿ ವಿವರಿಸಿದರು.
ಈಶಾವಾಸ್ಯ ಉಪನಿಷತ್ ಹೇಳಿದಂತೆ ಎಲ್ಲರನ್ನು ಜತೆಯಲ್ಲೆ ವಿಕಾಸದ ದಾರಿಯಲ್ಲಿ ಕರೆದೊಯ್ಯುವುದೇ ಭಾರತದ ಶಕ್ತಿ. ಸೇವೆ ಎಂಬುದೇ ಹಿಂದೂಧರ್ಮದ ಅವಿಭಾಜ್ಯ ಅಂಗ ಎಂದರು.
ಇಂದಿನ ಆಧುನಿಕ ಜೀವನದಲ್ಲಿ ವಾಟ್ಸ್‌ಅಪ್ ಹಾಗೂ ಫೇಸ್‌ಬುಕ್ ಎಂಬ ಮಾಯಾಯಂತ್ರಗಳ ಆಕರ್ಷಣೆಯಲ್ಲಿ ಸಿಲುಕಿರುವ ಮನುಷ್ಯನಿಗೆ ಅಂತಃಶಕ್ತಿ ಎಂಬುದನ್ನು ಗಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಂಥ ಸಂದರ್ಭದಲ್ಲಿ ತತ್ವಜ್ಞಾನ ಸಮ್ಮೇಳನ ಹಮ್ಮಿಕೊಂಡು ಮನುಷ್ಯನಲ್ಲಿ ಅಂತಃಶಕ್ತಿ ಹೆಚ್ಚಿಸಿಕೊಳ್ಳಲು ಪ್ರೇರೇಪಣೆ ನೀಡುವ ಕಾರ್ಯ ಮಾಡುತ್ತಿರುವ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಗಳ ಕಾರ್ಯ ಶ್ಲಾಘನೀಯ ಎಂದರು.