ಕ್ರೆಡೈ ಸಹಿತ ವಿವಿಧ ಸಂಘಟನೆಗಳಿಂದ ಮುತ್ತಿಗೆ-ಪ್ರತಿಭಟನೆ
ಹುಬ್ಬಳ್ಳಿ: ನೂರಾರು ಕೋಟಿ ಆದಾಯ ಮೂಲದ ಹುಬ್ಬಳ್ಳಿಯ ಉತ್ತರ ವಲಯ ನೋಂದಣಿ ಕಚೇರಿಯಲ್ಲಿ ಅಗತ್ಯ ಸೌಲಭ್ಯಗಳಿಲ್ಲದೇ ಜನತೆ ಹಿಡಿ ಶಾಪ ಹಾಕುವಂತಾಗಿದೆಯಲ್ಲದೇ ಇಲ್ಲಿನ ಅಧಿಕಾರಿಗಳ ಮನಸೋ ಇಚ್ಚೆ ವರ್ತನೆ ಹಾಗೂ ಅನಗತ್ಯ ಕಿರುಕುಳದ ವಿರುದ್ದ ಇಂದು ಹುಬ್ಬಳ್ಳಿಯ ಕ್ರೆಡೈ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ,ಇಂಜನೀಯರ್ಸ ಅಸೋಸಿಯೇಶನ್, ಆರ್ಕಿಟೆಕ್ಟ ಸಂಘ, ಬಾಂಡ್ ರೈಟರ್‍ಸ ಅಸೋಸಿಯೇಶನ್, ವಕೀಲರ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ವಿದ್ಯಾನಗರದ ನೇಕಾರ ಭವನದಲ್ಲಿರುವ ಉತ್ತರವಲಯ ನೋಂದಣಿ ಕಚೇರಿಯ ಪ್ರತಿಭಟನಾಕಾರರು ಕೂಡಲೇ ಇಲ್ಲಿನ ಸಾರಿಗೆ ಅಧಿಕಾರಿಗಳಾದ ಕಳೆದ ಎಂಟು ವರ್ಷಗಳಿಂದ ಇದೇ ಹುದ್ದೆಯಲ್ಲಿರುವ ಪ್ರತಿಭಾ ಬೀಡಿಕರ ಹಾಗೂ ಸೌಮ್ಯಲತಾ ಇವರನ್ನು ಕೂಡಲೇ ಬದಲಿಸುವಂತೆ ಆಗ್ರಹಿಸಿದರು.
ಕೇವಲ ನಾಲ್ಕು ಕಂಪ್ಯೂಟರ್‌ಗಳಿದ್ದು, ದಿನಕ್ಕೆ 50 ಅರ್ಜಿಗಳು ಮಾತ್ರ ವಿಲೇವಾರಿಯಾಗುತ್ತಿದ್ದು, ನಿತ್ಯ ಈ ಕಚೇರಿಗೆ ನೂರಾರು ಜನ ಆಗಮಿಸುತ್ತಿದ್ದು, ತಾಸುಗಟ್ಟಲೆ ನಿಲ್ಲಬೇಕಾದ ಪ್ರಮೇಯವಿದ್ದು, ಸಾರ್ವಜನಿಕರಿಗೆ ಅನಗತ್ಯ ಕಿರುಕುಳ ನೀಡಲಾಗುತ್ತದೆ ಎಂದು ಆರೋಪಿಸಿದರು.
ಅಲ್ಲದೇ ಇಕ್ಕಟ್ಟಾದ ಸ್ಥಳದಲ್ಲಿ ನಿತ್ಯ ಜಗಳ, ನೂಕು ನುಗ್ಗಲು ಮಾಮೂಲಾಗಿದ್ದು, ಇಲ್ಲಿ ಇರುವ ಕಂಪ್ಯೂಟರ್‌ಗಳನ್ನು ಹೆಚ್ಚಿಸಲು ವಿವಾಹ ನೋಂದಣಿ, ವಾಟನಿ, ಬೆಳೆ ಸಾಲ, ಭೂಮಿ ನೋಂದಣಿ ಸೇರಿದಂತೆ ಸಾರ್ವಜನಿಕರ, ರೈತರ ಸಮಸ್ಯೆಗಳ ಪರಿಹಾರ ಕಲ್ಪಿಸುವ ಕಚೇರಿಯಲ್ಲಿ ಕನಿಷ್ಟ ಕುಡಿಯುವ ನೀರಿನ ಸೌಲಭ್ಯವೂ ಇಲ್ಲದಂತಾಗಿದ್ದು ದೊರಕಿಸಲು ಆಗ್ರಹಿಸಲಾಯಿತು. ಸಂಜೆ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳಿಗೂ ನೋಂದಣಿ ಅಧಿಕಾರಿಗಳ ದುಂಡಾವರ್ತಿ ವರ್ತನೆ ಕುರಿತು ಮನವಿ ಸಲ್ಲಿಸಲು ಕ್ರೆಡೈ ಸಹಿತ ಎಲ್ಲ ಸಂಘಟನೆಗಳ ಪದಾಧಿಕಾರಿಗಳು ತೀರ್ಮಾನಿಸಿದ್ದಾರೆ.
ಈಗಾಗಲೇ ಬೆಂಗಳೂರಿನಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಇಲ್ಲಿನ ನೋಂದಣಿ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಕ್ರೆಡೈ ರಾಜ್ಯ ಉಪಾಧ್ಯಕ್ಷ ಪ್ರದೀಪ ರಾಯ್ಕರ್, ಹುಬ್ಬಳ್ಳಿ ಘಟಕದ ಅಧ್ಯಕ್ಷ ಸಾಜೀದ್ ಫರಾಶ, ಇಸ್ಮಾಯಿಲ್ ಸಂಶಿ, ಸುರೇಶ ಶೇಜವಾಡಕರ,ಪ್ರಕಾಶ ಕೊಠಾರಿ, ಇಂಜನೀಯರ್ಸ ಅಸೋಸಿಯೇಶನ್ನಿನ ಶ್ರೀಕಾಂತ ಪಾಟೀಲ,ಬಾಂಡ್ ರೈಟರ್‍ಸ ಸಂಘದ ಶಾಂತರಾಜ ಪೋಳ, ಕೃಷ್ಣಾ ಬದ್ದಿ, ವಕೀಲರ ಸಂಘದ ಸದಾನಂದ ದೊಡ್ಡಮನಿ ಸೇರಿದಂತೆ ಅನೇಕರಿದ್ದರು.