ಹುಬ್ಬಳ್ಳಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವ ತವರು ಜಿಲ್ಲೆ ಹುಬ್ಬಳ್ಳಿಯ ಪಶ್ಚಿಮ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಸರ್ಕಾರಕ್ಕೆ ಕಟ್ಟಬೇಕಾದ ಲಕ್ಷಾಂತರ ರೂ ದಂಡದ ಹಣವನ್ನು ’ಗುಳುಂ’ ಮಾಡಿ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ.
ಕಳೆದ ಮೇ ತಿಂಗಳವರೆಗಿನ ಸುಮಾರು 15ರಿಂದ 20 ಲಕ್ಷ ದಂಡದ ಹಣ ದುರ್ಬಳಕೆಯಲ್ಲಿ ಡಿಎಸ್‌ಎ ಹಾಗೂ ಖಜಾನೆ ವಿಭಾಗದ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಾಣುವಂತಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಅನೇಕ ಸಂಶಯಗಳನ್ನು ಹುಟ್ಟು ಹಾಕಿದೆ.
ಏಪ್ರಿಲ್‌ನಿಂದ ಈಚೆಗೆ ಸ್ಮಾರ್ಟ್ ಕಾರ್ಡ್ ಶುಲ್ಕ ದಾಖಲೆಗಳನ್ನು ಹೊಂದದಿರುವ ಹಾಗೂ ಸೀಜ್ ಮಾಡಿದ ವಾಹನಗಳ ಬಿಡುಗಡೆಗೆ ವಾಹನಗಳ ಮಾಲಿಕರಿಂದ ಕಟ್ಟಿಸಿಕೊಂಡ ದಂಡದ ಹಣವನ್ನು ಖಜಾನೆಗೆ ಕಟ್ಟದೇ ವಂಚಿಸಲಾಗಿದೆ.
ಸರ್ಕಾರದ ನಿಯಮದಂತೆ ದಂಡ ಸಂಗ್ರಹಿಸಿದ ದಿನವೇ ಅದನ್ನು ಖಜಾನೆಗೆ ಪಾವತಿಸಬೇಕು. ಆದರೆ, ದಂಡದ ಹಣವನ್ನು ವಾಹನಗಳ ಮಾಲಿಕರಿಗೆ ಹಿಂತಿರುಗಿಸಲಾಗುವುದು ಎಂದು ಅಧಿಕಾರಿಗಳು ಸಬೂಬು ಹೇಳುತ್ತಲೇ ಬಂದಿದ್ದು, ಹಣ ಸರ್ಕಾರಕ್ಕೂ ಸಂದಾಯವಾಗದೇ, ಇತ್ತ ಮಾಲಿಕರಿಗೂ ಮುಟ್ಟಿಲ್ಲವಾಗಿದೆ.
15ರಿಂದ 20 ಲಕ್ಷ ಗುಳುಂ ಮಾಡಲಾಗಿದ್ದರೂ ಒಟ್ಟು ಮೊತ್ತ ಪಾವತಿಸದೇ ಕೇವಲ ರೂ. 3.5ಲಕ್ಷ ಪಾವತಿಸಿ ಪ್ರಕರಣ ಇತ್ಯರ್ಥಪಡಿಸಿಕೊಳ್ಳುವಂತೆ ಅಧಿಕಾರಿಗಳು ಸೂಚಿಸಿದಾಗ ಅದಕ್ಕೆ ಅದೇ ಕಚೇರಿಯ ಸಹಾಯಕ ಅಧಿಕಾರಿಯೊಬ್ಬರು ವಿರೋಧ ವ್ಯಕ್ತಪಡಿಸಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ.
ದುರುಪಯೋಗ ಮೇಲ್ನೋಟಕ್ಕೆ ಕಂಡುಬಂದಲ್ಲಿ ಸಂಬಂಧಿತ ನೌಕರರನ್ನು ಅಮಾನತ್ತು ಮಾಡಿ ವಿಚಾರಣೆ ಮಾಡಬೇಕಾಗಿದ್ದರೂ ಆರೋಪದ ಸುಳಿಯಲ್ಲಿ ಸಿಲುಕಿರುವ ಓರ್ವರಿಗೆ ಖಜಾನೆ ಕರ್ತವ್ಯ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.
ಹಣಕಾಸಿನ ಹಾಗೂ ವಿಭಾಗ ಹಂಚಿಕೆ ವಿಚಾರದಲ್ಲಿ ನವನಗರದ ಕಚೇರಿಯಲ್ಲೇ ಸಹ ಸಿಬ್ಬಂದಿಯೋರ್ವರ ಜತೆ ಕಿತ್ತಾಡಿದ ಹಿನ್ನೆಲೆಯಲ್ಲಿ ಮೇಲಧಿಕಾರಿಗಳು ಓರ್ವ ಮಹಿಳಾ ಅಧಿಕಾರಿಯನ್ನು ಅಮಾನತು ಸಹ ಮಾಡಿದ್ದರು. ಆ ಮಹಿಳಾ ಅಧಿಕಾರಿಯ ಅಮಾನತು ರದ್ದುಗೊಂಡು ಬೈಲಹೊಂಗಲಕ್ಕೆ ವರ್ಗಾವಣೆ ಮಾಡಲಾಗಿದ್ದರೂ ಪುನಃ ಹುಬ್ಬಳ್ಳಿಯಲ್ಲೇ ಮುಂದುವರಿಯಲು ಶಪಥ ಮಾಡಿದ್ದಾಳೆನ್ನಲಾಗಿದೆ.
ಹಿರಿಯ ಅಧಿಕಾರಿಗಳು ಸಿಬ್ಬಂದಿ ವಿರುದ್ಧ ಕ್ರಮ ಕೈಗೊಂಡಿಲ್ಲವಾಗಿದ್ದು ಪ್ರಕರಣವನ್ನು ಮುಚ್ಚಿ ಹಾಕುವ ಯತ್ನವೂ ನಡೆದಿತ್ತು ಎಂಬ ಮಾತೂ ಕೇಳಿ ಬರುತ್ತಿದ್ದು ಒಟ್ಟಿನಲ್ಲಿ ಪಶ್ಚಿಮ ಪ್ರಾದೇಶಿಕ ಸಾರಿಗೆ ಕಚೇರಿಯ ಅವ್ಯವಹಾರದ ಕುರಿತು ಸರಿಯಾದ ತನಿಖೆ ನಡೆದಲ್ಲಿ ಕೆಲ ಗುಳುಂ ಕುಳಗಳು ನೌಕರಿ ಕಳೆದುಕೊಳ್ಳುವುದು ಖಚಿತ.
ಈಗ ಸಾರಿಗೆ ಆಯುಕ್ತರಾಗಿರುವ ಎನ್ ಶಿವಕುಮಾರ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದವರಾಗಿದ್ದು ಕಳೆದ ಅನೇಕ ವರ್ಷಗಳಿಂದ ಬೀಡು ಬಿಟ್ಟು ಗುಳುಂ ವ್ಯವಹಾರದಲ್ಲಿ ’ಪಿಎಚ್‌ಡಿ’ ಪಡೆದವರಾಗಿದ್ದು, ಪ್ರಸಕ್ತ ದಂಡದ ಹಣದ ಪ್ರಕರಣದಲ್ಲಿ ಕೆಲವರ ವಿರುದ್ಧ ಖಡಕ್ ಕ್ರಮ ಕೈಗೊಂಡಲ್ಲಿ ಪರಿಸ್ಥಿತಿ ಸ್ವಲ್ಪವಾದರೂ ಹತೋಟಿಗೆ ಬಂದೀತು.
ದಂಡದ ಹಣ ಖಜಾನೆಗೆ ಪಾವತಿ ಆಗದಿರುವ ಕುರಿತು ವರದಿಯನ್ನು ಬೆಳಗಾವಿ ಜಂಟಿ ಸಾರಿಗೆ ಆಯುಕ್ತರಿಗೆ ಕಳುಹಿಸಲಾಗಿದೆ. ಅವರು ಲೆಕ್ಕ ಪರಿಶೋಧಕರ ತಂಡ ಕಳುಹಿಸುವುದಾಗಿ ತಿಳಿಸಿದ್ದು ಅವರ ವರದಿ ನಂತರ ಎಲ್ಲ ಸತ್ಯವೂ ಹೊರ ಬರಲಿದೆ ಎಂದು ಪಶ್ಚಿಮದ ಪ್ರಾದೇಶಿಕ ಸಾರಿಗೆ ಅಧಿಕಾರಿ ಶಂಕ್ರಪ್ಪ ಹೇಳುತ್ತಾರೆ.
ವಂಚನೆಯಾಗಿದ್ದು ಹೀಗೆ
ವಾಹನ ದಾಖಲೆ ಇಲ್ಲದಿರುವುದು, ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸರಕು ಹಾಕಿರುವುದಕ್ಕೆ ಇಲಾಖೆಯಿಂದ ದಂಡ ಹಾಕಲಾಗುತ್ತದೆ. ತದನಂತರ ಈ ಜಾಲ ವಾಹನಗಳ ಸಂಖ್ಯೆ ಬದಲಾಗಿದೆ ಎಂದು ಖಜಾನೆಗೆ ಪಾವತಿಸದೇ ವಾಹನಗಳ ಮಾಲಿಕರಿಗೆ ನೀಡಲಾಗಿದೆ ಎಂದು ತೋರಿಸುತ್ತದೆ. ದಂಡ ಪಾವತಿಸಿದ ವಾಹನಗಳ ಮಾಲಕರು ರಸೀದಿ ಪಡೆದು ಹೋದ ನಂತರ ಮತ್ತೆ ಇತ್ತ ಮುಖ ಹಾಕುವುದಿಲ್ಲ. ಹಾಗಾಗಿ ಅದು ಖಜಾನೆಗೆ ಪಾವತಿಯಾಯಿತೋ, ಇಲ್ಲವೋ ಎಂಬುದು ಅವರಿಗೆ ಗೊತ್ತಾಗುವುದಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡು ಡಿಎಸ್‌ಎ ಮತ್ತು ಖಜಾನೆ ವಿಭಾಗದ ಸಿಬ್ಬಂದಿ ಗುಳುಂ ಮಾಡಿದ್ದು, ಇದಕ್ಕೆ ಹಿರಿಯ ಅಧಿಕಾರಿಗಳ ಕೃಪೆಯಿಲ್ಲದೆ ನಡೆಯಲು ಸಾಧ್ಯವಿಲ್ಲ ಎಂದು ಕಚೇರಿ ಗೋಡೆಗಳು ಹೇಳುತ್ತಿವೆ.
ದಂಡ ಗುಳುಂ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದ್ದು ಇಷ್ಟರಲ್ಲೇ ಸಾರಿಗೆ ಆಯುಕ್ತರಿಗೆ ವರದಿ ಕಳುಹಿಸಲಾಗುವುದು.
ಶ್ರೀಮತಿ ಶೋಭಾ
ಜಂಟಿ ಆಯುಕ್ತೆ, ಬೆಳಗಾವಿ
ತಮಗೆ ಇದುವರೆಗೆ ಈ ಬಗ್ಗೆ ಯಾವುದೇ ವಿವರ ಬಂದಿಲ್ಲ. ಈ ಬಗ್ಗೆ ವರದಿ ಬಂದ ನಂತರ ಪರಿಶೀಲಿಸಿ ಯಾರೇ ತಪ್ಪು ಮಾಡಿದ್ದರೂ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು
ಎನ್ ಶಿವಕುಮಾರ, ಸಾರಿಗೆ ಆಯುಕ್ತರು, ಬೆಳಗಾವಿ