ಧಾರವಾಡ: ನಗರದ ಪ್ರಮುಖ ಮಾರುಕಟ್ಟೆಯಾಗಿರುವ ಸುಪರ್ ಮಾರ್ಕೆಟ್ ಅಭಿವೃದ್ಧಿ ಹಂತದಲ್ಲಿ ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸಬೇಕು. ಈ ಹಿನ್ನೆಲೆಯಲ್ಲಿ ಸೂಕ್ತ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕು ಎಂದು ಪ್ರಗತಿಪರ ಚಿಕ್ಕ ವರ್ತಕರ ಸಂಘದ ವತಿಯಿಂದ ಗುರುವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಪಾಲಿಕೆ ಅಧಿಕಾರಿಗಳ ಸುಪರ್ ಮಾರ್ಕೆಟ್ನಲ್ಲಿನ ಬೀದಿ ಬದಿ ವ್ಯಾಪಾರಸ್ಥರ ಮೇಲೆ ನಿಯಮಗಳನ್ನು ಉಲ್ಲಂಘಿಸಿ ಅಂಗಡಿ ತೆರವು ಇನ್ನಿತರ ಕಾರ್ಯಾ ಚರಣೆ ಕೈಕೊಳ್ಳುವ ಮೂಲಕ ದಬ್ಬಾಳಿಕೆ ನಡೆಸುತ್ತಿದ್ದಾರೆ. ಈ ವಿಷಯದಲ್ಲಿ ಸಂಘವು ನ್ಯಾಯಾಲಯದ ಮೆಟ್ಟಿಲೇರಿದಾಗ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಸೂಕ್ತ ನಿರ್ದೇಶನ ಕೂಡ ನೀಡಿದೆ. ಆದರೆ. ಪಾಲಿಕೆ ಅಧಿಕಾರಿಗಳು ನ್ಯಾಯಾಲಯದ ಆದೇಶ ಉಲ್ಲಂಘಿಸಿ ಸಣ್ಣ ಪುಟ್ಟ ವ್ಯಾಪಾರ ಸ್ಥರಿಗೆ ಕಿರಿಕಿರಿ ಮಾಡುತ್ತಿದ್ದಾರೆ. ಆದ್ದರಿಂದ ನ್ಯಾಯಾಲಯದ ಆದೇಶ ಪಾಲಿಸುವಂತೆ ಪಾಲಿಕೆಯ ಅಧಿಕಾರಿಗಳಿಗೆ ಸೂಚಿಸಬೇಕು. ಈ ಕುರಿತು ಸಂಘದ ಪ್ರತಿನಿಧಿಗಳ ಜೊತೆ ಚರ್ಚಿಸಲು ಸಭೆ ಕರೆಯಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಯಿತು.
ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು, ಸಂಘದ ಮನವಿಗೆ ಪೂರಕವಾಗಿ ಕಾರ್ಯ ಕೈಕೊಳ್ಳಲು ಸೂಚಿಸಿದರು.
ಮುಖಂಡರಾದ ಪಿ.ಎಚ್.ನೀರಲಕೇರಿ, ಇಸ್ಮಾಯಿಲ್ ತಮಟಗಾರ ಮತ್ತು ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.