ಹುಬ್ಬಳ್ಳಿ-ಧಾರವಾಡ ಸುದ್ದಿ
‘ಗುಂಡಿಮುಕ್ತ, ಧೂಳುಮುಕ್ತ ಮಹಾನಗರ’: ಕಾಂಗ್ರೆಸ್ ಪ್ರಣಾಳಿಕೆ

‘ಗುಂಡಿಮುಕ್ತ, ಧೂಳುಮುಕ್ತ ಮಹಾನಗರ’: ಕಾಂಗ್ರೆಸ್ ಪ್ರಣಾಳಿಕೆ

ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಅವಳಿನಗರವನ್ನು ಗುಂಡಿ ಮುಕ್ತ ಧೂಳು ಮುಕ್ತ ನಗರವಾಗಿಸುವ ಭರವಸೆಯೊಂದಿಗೆ ಕಾಂಗ್ರೆಸ್ ಪಕ್ಷ ಮಹಾನಗರಪಾಲಿಕೆ ಚುನಾವಣೆಗೆ ಪ್ರತ್ಯೇಕ ಪ್ರಣಾಳಿಕೆಯನ್ನು ರೂಪಿಸಲು ಮುಂದಾಗಿದೆ.
ಈಗಾಗಲೇ ಪಕ್ಷದ ಪ್ರಣಾಳಿಕೆ ಸಮಿತಿ ಹು.ಧಾ ಪಾಲಿಕೆ ಬಗೆಗೆ ಎಲ್ಲರೊಡನೆ ಚರ್ಚಿಸಿ ಇನ್ನೂ ಅನೇಕ ಭರವಸೆಗಳಿರುವ ಪ್ರಣಾಳಿಕೆಯನ್ನು ಸಿದ್ದಪಡಿಸಲಿದೆ ಎನ್ನಲಾಗಿದೆ.
ಇಂದು ಅವಳಿನಗರದಲ್ಲಿ ಸಂಚರಿಸುವ ಜನತೆ ದಿನಾಲು ಹಿಡಿ ಶಾಪ ಹಾಕುತ್ತಲೇ ಪಯಣಿಸುವಂತಹ ಪರಿಸ್ಥಿತಿ ಇದ್ದು ಕಳೆದ ಎರಡು ಅವಧಿಯಲ್ಲಿ ಬಿಜೆಪಿಯ ಆಡಳಿತವೇ ಇದ್ದುದು ಸ್ವತಃ ಬಿಜೆಪಿಯವರಿಗೂ ಇರಿಸುಮುರಿಸು ಆಗುವಂತೆ ಮಾಡಿದೆ. ಈ ಭರವಸೆ ಕೈ ಪಕ್ಷಕ್ಕೆ ಸ್ವಲ್ಪ ಮಟ್ಟಿಗೆ ಅನುಕೂಲಕರವಾಗಿ ಪರಿಣಮಿಸಿದೆ.
ಈಗಾಗಲೇ ಕಾಂಗ್ರೆಸ್ ಮಾಜಿ ಸಚಿವ ಆರ್.ವಿ.ದೇಶಪಾಂಡೆ ನೇತ್ರತ್ವದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ , ತನ್ವೀರ ಸೇಠ ಒಳಗೊಂಡ ಚುನಾವಣಾ ಸಮಿತಿ ರಚಿಸಲಾಗಿದ್ದು, ಈಗಾಗಲೇ ಸ್ಥಳೀಯ ಮುಖಂಡರುಗಳೆಲ್ಲರ ಅಭಿಪ್ರಾಯ ಕ್ರೋಡಿಕರಿಸಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಿದೆ ಎನ್ನಲಾಗಿದೆ.
ನಾಳೆ ಧ್ರುವನಾರಾಯಣ ಸಹಿತ ಸಮಿತಿಯ ಸದಸ್ಯರು ಹುಬ್ಬಳ್ಳಿಗೆ ಆಗಮಿಸಲಿದ್ದು ಸುಮಾರು ೩೭೦ ಆಕಾಂಕ್ಷಿಗಳು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದು, ಅವುಗಳನ್ನು ಪರಿಶೀಲಿಸಲಿದ್ದಾರೆನ್ನಲಾಗಿದೆ.
ಪೂರ್ವ ಕ್ಷೇತ್ರದಲ್ಲಿ ಸ್ವತ: ಶಾಸಕ ಅಬ್ಬಯ್ಯ ಅವರೇ ಎಲ್ಲ ಆಕಾಂಕ್ಷಿಗಳನ್ನು ಖುದ್ದಾಗಿ ಮಾತನಾಡಿ ವಿಶ್ವಾಸಕ್ಕೆ ತೆಗೆದುಕೊಂಡು ಪರಿಸ್ಥಿತಿ ತಿಳಿಯಾಗಿಸಲು ಮುಂದಾಗಿದ್ದರೂ ಒಟ್ಟೂ ವಾರ್ಡಗಳ ಪೈಕಿ ೧೮ ಮಹಿಳೆಯರಿಗೆ ಮೀಸಲಾಗಿರುವುದು ಸಮಸ್ಯೆಯಾಗಿದೆ. ೭೧ ಸಹಿತ ಕೆಲ ವಾರ್ಡಗಳು ತೀವ್ರ ತಲೆ ನೋವಾಗುವ ಸಾಧ್ಯತೆಗಳಿವೆ.
ದಿ.೨೧ರ ರಾತ್ರಿ ಅಥವಾ ೨೨ರ ಬೆಳಿಗ್ಗೆಯೊಳಗೆ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳ್ಳುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯನ್ನು ಈ ಬಾರಿ ಕೈವಶ ಮಾಡಿಕೊಳ್ಳುವ ನಿಟ್ಟಿನಲ್ಲಿ ಎಲ್ಲ ಯತ್ನಗಳು ನಡೆದಿವೆ ಚುನಾವಣಾ ಸಮಿತಿಯ ಅಧ್ಯಕ್ಷ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.

administrator

Related Articles

Leave a Reply

Your email address will not be published. Required fields are marked *