ಹುಬ್ಬಳ್ಳಿ : ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಪತ್ನಿ ಶಿಲ್ಪಾ ಶೆಟ್ಟರ್ ಆಪ್ತ ವಲಯದಲ್ಲಿ ಗುರುತಿಸಿಕೊಂಡು ಅವರಿಂದಲೇ ಬಿಜೆಪಿ ಟಿಕೆಟ್ ಗಿಟ್ಟಿಸಿಕೊಂಡಿದ್ದ ಮೂವರೂ ಮಹಿಳೆಯರು ಈ ಬಾರಿ ಮಹಾನಗರಪಾಲಿಕೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಾರ್ಡ ನಂ 44ರಲ್ಲಿ ಉಮಾ ಮುಕುಂದ, 47ರಲ್ಲಿ ಸೆಂಟ್ರಲ್ ಮಹಿಳಾ ಮೋರ್ಚಾ ಅಧ್ಯಕ್ಷೆ ರೂಪಾ ಶೆಟ್ಟಿ ಹಾಗೂ 57ರಲ್ಲಿ ನಗರಾಭಿವೃದ್ಧಿ ಪ್ರಾದಿಕಾರದ ಸದಸ್ಯೆ ಮೀನಾಕ್ಷಿ ವಂಟಮೂರಿ ಮೂವರು ಗೆಲುವು ಸಾಧಿಸಿದ್ದಾರೆ.
ಮೀಸಲಾತಿ ಘೋಷಣೆಯಾದಾಗಲೇ ಶಿಲ್ಪಾ ಶೆಟ್ಟರ್ ಆಪ್ತರಾದ ರೂಪಾ ಶೆಟ್ಟಿ, ಉಮಾ ಮುಕುಂದ ಅವರಿಗೆ ಟಿಕೆಟ್ ಪಕ್ಕಾ ಆಗಿತ್ತು. ದೇಶಪಾಂಡೆ ನಗರ ಒಳಗೊಂಡ ೫೭ರಲ್ಲಿ ಮಾತ್ರ ತೀವ್ರ ಪೈಪೋಟಿಯಿತ್ತಾದರೂ ಜಿಲ್ಲಾ ವಕ್ತಾರ ರವಿ ನಾಯಕ ಪತ್ನಿ ಕಲ್ಪನಾ ನಾಯಕ ಅವರನ್ನು ಹಿಂದಕ್ಕೆ ಹಾಕಿ ನಾಮಪತ್ರ ಸಲ್ಲಿಸಲು ಕೊನೆಯ ದಿನದಂದು ಮೀನಾಕ್ಷಿ ವಂಟಮೂರಿಯವರಿಗೆ ಅಂತಿಮಗೊಳಿಸಿದ್ದರು.
ಬಿಜೆಪಿ ಭದ್ರಕೋಟೆಯಾಗಿದ್ದರೂ 47ರಲ್ಲಿ ಲಕ್ಷ್ಮಿ ಉಪ್ಪಾರರ ವ್ಯಾಪಕ ಪ್ರಭಾವ ಹಾಗೂ ದೇಶಪಾಂಡೆನಗರದಲ್ಲಿ ಬೇರು ಮಟ್ಟದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸರಸ್ವತಿ ಕುಲಕರ್ಣಿ ನಡೆಸಿದ ಕಸರತ್ತನ್ನು ಹಿಮ್ಮೆಟ್ಟಿಸಿ ಸ್ವತಃ ಶಿಲ್ಪಾ ಶೆಟ್ಟರ್ ಅಖಾಡಾಕ್ಕಿಳಿದು ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.44ರಲ್ಲಿ ಮಾತ್ರ ಉಮಾ ಮುಕುಂದಗೆ ಹೇಳಿಕೊಳ್ಳುವ ಪ್ರತಿರೋಧ ಇರಲಿಲ್ಲ.
ತಾವೂ ಟಿಕೆಟ್ ಕೊಡಿಸಿದ ಕಿಚನ್ ಕ್ಯಾಬಿನೆಟ್ ಸದಸ್ಯರಾದ ಮೂವರಿಗೂ ಗೆಲ್ಲಿಸಿ ಮೇಡಂ ಶೆಟ್ಟರ್ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ.