ಹುಬ್ಬಳ್ಳಿ: ಶಿರಡಿನಗರದ ಬಳಿಯ ಸಾಯಿಬಾಬಾ ಮಂದಿರದ ಹತ್ತಿರ ನಿನ್ನೆ ಸಾಯಂಕಾಲ ೬ರ ಸುಮಾರಿಗೆ ಸ್ಥಳೀಯರು ಚಿರತೆಯನ್ನು ಕಂಡಿದ್ದು, ಅದನ್ನು ಹಿಡಿಯಲು ಕಾರ್ಯಾಚರಣೆ ಮುಂದುವರಿದಿದೆ.
ತನ್ಮಧ್ಯೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಇಲ್ಲಿನ ಕೇಂದ್ರೀಯ ವಿ.ವಿ.ಯ ರೂ.ನಂ ೨೩ರಲ್ಲಿ ಮಹತ್ವದ ಸಭೆ ಕರೆದಿದ್ದು, ಮುಂದೇನು ಕ್ರಮಗಳನ್ನು ಕೈಗೊಳ್ಳಬೇಕೆಂಬುದನ್ನು ಚರ್ಚಿಸಲಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳಾದ ಯಶಪಾಲ ಕ್ಷೀರ ಸಾಗರ, ತಹಶೀಲ್ದಾರ ಶಶಿಧರ ಮಾಡ್ಯಾಳ, ಪೊಲೀಸ ಅಧಿಕಾರಿಗಳು ಸ್ಥಳೀಯ ಪ್ರಮುಖರಾದ ಸಿದ್ದು ಮೊಗಲಿಶೆಟ್ಟರ್, ವೀರಣ್ಣ ಸವಡಿ, ಸಂತೋಷ ಚವ್ಹಾಣ, ಮುಂತಾದವರು ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದಾರೆ.
ಶನಿವಾರ ರಾತ್ರಿ, ರವಿವಾರ ಬೆಳಗಿನ ಜಾವ ಕಾಣಿಸಿಕೊಂಡಿದ್ದ ಚಿರತೆ ಮತ್ತೆ ಕಾಣಿಸಿಕೊಂಡಿರಲಿಲ್ಲ. ಸೋಮವಾರ ಸಂಜೆ ಚಿರತೆ ನೋಡಿರುವುದಾಗಿ ಅಲ್ಲಿನ ನಿವಾಸಿಗಳು ಹೇಳಿದ ಕಾರಣ ಅರಣ್ಯ ಇಲಾಖೆ ಸಿಬ್ಬಂದಿ ಜನವಸತಿ ಪ್ರದೇಶದಿಂದ ಅದನ್ನು ದೂರ ಓಡಿಸುವ ಯತ್ನವನ್ನು ತಡರಾತ್ರಿವರೆಗೂ ನಡೆಸಿದರೂ ಹಿಡಿಯುವಲ್ಲಿ ಯಶಸ್ವಿಯಾಗಿಲ್ಲ.
ಫಾರೆಸ್ಟ ಕಾಲನಿ, ಶಿರಡಿನಗರ ಹಾಗೂ ಅರಣ್ಯ ಪ್ರದೇಶದ ಮಧ್ಯೆ ತೆಗ್ಗುಗಳನ್ನು ಸಹ ತೋಡಲಾಗಿದೆ.
ಶಿರಡಿ ನಗರದಲ್ಲಿ ಚಿರತೆ ಹಂದಿಯನ್ನು ಕಚ್ಚಿಕೊಂಡು ಹೋಗಿದ್ದನ್ನು ನೋಡಿದ್ದು ಸುತ್ತಮುತ್ತಲಿನ ಪ್ರದೇಶದಲ್ಲಿ ಆತಂಕ ಮುಂದುವರಿದಿದೆ.
ಧಾರವಾಡ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ ಸ್ಥಳೀಯರಿಂದ ಮಾಹಿತಿ ಪಡೆದು, ಕಾರ್ಯಾಚರಣೆ ನಡೆಸಿದ್ದು, ಸಂಜೆ ದರ್ಪಣದೊಂದಿಗೆ ಮಾತನಾಡಿದ ಅವರು ’ಚಿರತೆಯ ಸೆರೆಗೆ ಇದುವರೆಗೆ ಐದು ಬೋನುಗಳನ್ನು ಇಡಲಾಗಿದೆ. ಮೂರು ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಚಿರತೆ ಹಿಡಿಯಲು ಅವಸರ ಮಾಡಿದರೆ ಅದು ಕೆರಳುವ ಸಾಧ್ಯತೆ ಸಹ ಇದ್ದು ತಾಳ್ಮೆಯಿಂದ ಕಾರ್ಯಾಚರಣೆ ನಡೆಸುತ್ತಿದ್ದೇವೆ’ ಎಂದಿದ್ದಾರೆ.
ಸ್ಥಳೀಯರ ಕಣ್ಣಿಗೆ ಚಿರತೆ ಕಂಡಿದ್ದರಿಂದ ಶಿರಡಿನಗರ, ಕೇಂದ್ರೀಯ ವಿ.ವಿ. ಸುತ್ತಮುತ್ತದ ನಿವಾಸಿಗಳು ತೀವ್ರ ಆತಂಕದಲ್ಲಿದ್ದರೂ, ಕ್ಯಾಮೆರಾದಲ್ಲಿ ಮಾತ್ರ ಚಿರತೆ ಓಡಾಡಿರುವ ದೃಶ್ಯ ಸೆರೆಯಾಗಿಲ್ಲವಾಗಿದೆ.
’ಚಿರತೆ ಬಂದು ವಾರಕ್ಕೂ ಹೆಚ್ಚು ಕಾಲವಾಗಿದೆ. ಕೇಂದ್ರೀಯ ಶಾಲೆ ಹಿಂಭಾಗದಲ್ಲಿ ನಾಯಿಗಳು ಬೊಗಳುತ್ತಿದ್ದವು. ವಾರದ ಹಿಂದೆ ಕೆಲವು ನಾಯಿಗಳು ಆ ಪ್ರದೇಶದಿಂದ ಬೊಗಳುತ್ತ ನಮ್ಮತ್ತ ಓಡಿ ಬಂದವು. ಮಾರನೇ ದಿನ ಕಪ್ಪು ನಾಯಿಯ ಮೃತ ದೇಹ ಗಿಡಗಂಟಿಯಿರುವ ಪ್ರದೇಶದಲ್ಲಿ ಪತ್ತೆಯಾಗಿದೆ ಎಂದು ಕೇಂದ್ರೀಯ ವಿದ್ಯಾಲಯದ ಭದ್ರತಾ ಸಿಬ್ಬಂದಿ ಹನುಮಂತಪ್ಪ ಮಡಿವಾಳ ಹೇಳುತ್ತಾರೆ.
ಕವಲಗೇರಿ ಬಳಿ ಚಿರತೆ ಹೆಜ್ಜೆ ಗುರುತು!
ಧಾರವಾಡ: ತಾಲೂಕಿನ ಕವಲಗೇರಿ ಗ್ರಾಮದ ಬಳಿ ಸೋಮವಾರ ಸಂಜೆ ಚಿರತೆ ಕಾಣಿಸಿಕೊಂಡಿದ್ದು, ಕವಲಗೇರಿ ಹಾಗೂ ಸುತ್ತಲಿನ ಗ್ರಾಮಗಳ ಜನರಲ್ಲಿ ಆತಂಕ ಮೂಡಿಸಿದೆ.
ಇತ್ತೀಚೆಗೆ ಹುಬ್ಬಳ್ಳಿಯ ನೃಪತುಂಗ ಬೆಟ್ಟದ ಬಳಿ ಸಾರ್ವಜನಿಕರಿಗೆ ಕಬ್ಬಿನ ಗದ್ದೆಯಲ್ಲಿ ಕಂಡಿದ್ದ ಚಿರತೆ, ಇದೀಗ ಅಲ್ಲಿಂದ ಕವಲಗೇರಿ ಕಡೆಗೆ ಬಂದಿಉ ಬಹುದು ಎಂದು ಅನುಮಾನ ವ್ಯಕ್ತವಾಗಿದೆ.
ನಿನ್ನೆ ಸಂಜೆ ಕವಲಗೇರಿ ಗ್ರಾಮದ ಸಮೀಪ ಇಬ್ಬರಿಗೆ ಚಿರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ದೌಡಾಯಿಸಿದ್ದಾರೆ.
ಪ್ರತ್ಯಕ್ಷದರ್ಶಿಗಳ ಮಾಹಿತಿ ಆಧರಿಸಿ ಅರಣ್ಯ ಇಲಾಖೆಯ ಧಾರವಾಡ ವಲಯ ಅರಣ್ಯ ಸಂರಕ್ಷಣಾಧಿಕಾರಿ ಆರ್.ಎಸ್.ಉಪ್ಪಾರ ನೇತೃತ್ವದಲ್ಲಿ ಸಿಬ್ಬಂದಿ ಚಿರತೆ ಶೋಧನೆಯಲ್ಲಿ ತೊಡಗಿದ್ದಾರೆ.
ಗ್ರಾಮದ ಪ್ರತ್ಯಕ್ಷದರ್ಶಿಗಳ ಪ್ರಕಾರ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಚಿರತೆಯ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದು, ಚಿರತೆಯ ಸಂಚಾರವನ್ನು ಖಚಿತ ಪಡಿಸಿದೆ ಎಂದು ಉಪ್ಪಾರ ತಿಳಿಸಿದ್ದಾರೆ. ಗ್ರಾಮದ ಬಳಿಯ ಕಬ್ಬಿನ ಗದ್ದೆಯಲ್ಲಿ ಚಿರತೆ ಕಾಣಿಸಿಕೊಂಡಿರುವ ಕಾರಣ ಎಚ್ಚರಿಕೆಯಿಂದ ಇರುವಂತೆಯೂ ಅರಣ್ಯ ಇಲಾಖೆಯ ಅಧಿಕಾರಿಗಳು ಜನರಿಗೆ ಸೂಚನೆ ನೀಡಿದ್ದಾರೆ.