ಹುಬ್ಬಳ್ಳಿ: ಕಳೆದ ಐದು ದಿನಗಳಿಂದ ನೃಪತುಂಗ ಬೆಟ್ಟದ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾರ್ವಜನಿಕರ ನಿದ್ದೆಗೆಡಿಸಿರುವ ಚಿರತೆ ಸೆರೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದೆ.
ರಾಜನಗರ ಕೇಂದ್ರೀಯ ವಿದ್ಯಾಲಯದ ಹಿಂಭಾಗದಿಂದ ಎರಡು ದಿಕ್ಕುಗಳಲ್ಲಿ ಬೆಳಿಗ್ಗೆಯಿಂದ ಸಶಸ್ತ್ರಧಾರಿ ತಲಾ ೧೦ರಿಂದ ೧೫ ಸಿಬ್ಬಂದಿಗಳಿರುವ ತಂಡ ಕಾರ್ಯಾಚರಣೆಗೆ ಇಳಿದಿದೆ ಎಂದು ಡಿಸಿಎಫ್ ಯಶಪಾಲ್ ಕ್ಷೀರಸಾಗರ ಹೇಳಿದ್ದಾರೆ.
ಸಂಜೆ ದರ್ಪಣದೊಂದಿಗೆ ಮಾತನಾಡಿದ ಅವರು ಅರವಳಿಕೆ ತಜ್ಞರ ತಂಡ ಸಹ ಜೊತೆಯಲ್ಲಿದ್ದು, ಚಿರತೆಯ ಕುರುಹುಗಳು, ಅಲ್ಲದೇ ಮೃತ ಹಂದಿಯ ದೇಹ ದೊರೆತಿರುವುದರಿಂದ ಕಾರ್ಯಾಚರಣೆ ಯಶಸ್ವಿಯಾಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಡಳಿತ,ಪೊಲೀಸರು ಅಲ್ಲದೇ ಮಹಾನಗರಪಾಲಿಕೆ ಎಲ್ಲ ನೆರವನ್ನೂ ನೀಡುತ್ತಿದ್ದು ಚಿರತೆ ನೆಲೆಸಿತ್ತೆನ್ನಲಾದ ಕೇಂದ್ರೀಯ ವಿದ್ಯಾಲಯದ ಹಳೆಯ ಕಟ್ಟಡದ ತೆರವು ಕಾರ್ಯಾಚರಣೆ ಸಹ ನಿನ್ನೆಯಿಂದಲೇ ಆರಂಭಗೊಂಡಿದೆ.
ನಿನ್ನೆ ಜಿಲ್ಲಾಧಿಕಾರಿಗಳ ನೇತೃತ್ವದ ಸಭೆಯಲ್ಲಿ ಚಿರತೆ ಹಿಡಿಯುವಲ್ಲಿ ವಿಳಂಭವಾಗುತ್ತಿರುವುದಕ್ಕೆ ವ್ಯಾಪಕ ವಿರೋಧ ಸ್ಥಳೀಯರಿಂದ ವ್ಯಕ್ತವಾಗಿರುವುದರಿಂದ ಇಂದಿನಿಂದಲೇ ಕೂಂಬಿಂಗ್ ಪ್ರಾರಂಭಿಸಲಾಗಿದೆ.
ಅರಣ್ಯ ಪ್ರದೇಶಕ್ಕೆ ಹತ್ತಿಕೊಂಡು ಜನವಸತಿ ಪ್ರದೇಶಗಳಿದ್ದು, ಜನರಿಗೆ ಯಾವುದೇ ರೀತಿಯ ರಕ್ಷಣೆ ಇಲ್ಲವಾಗಿದ್ದು ಜನತೆ ಮನೆಯೊಳಗಿಂದ ಹೊರಬರದ ಸ್ಥಿತಿ ನಿರ್ಮಾಣವಾಗಿದ್ದು ಸುತ್ತಮುತ್ತಲಿನ 12 ಶಾಲೆಗಳಿಗೂ ರಜೆ ಘೋಷಣೆ ಮಾಡಲಾಗಿದೆ.