ಹುಬ್ಬಳ್ಳಿ : ಶಂಕರ ಪಾಟೀಲ ಮುನೇನಕೊಪ್ಪ ರಾಜ್ಯದ ಸಚಿವರಾಗುವುದರೊಂದಿಗೆ ಧಾರವಾಡ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ನಿಯುಕ್ತಿಗೊಳ್ಳುವುದರೊಂದಿಗೆ ಜಿಲ್ಲೆಯಲ್ಲಿ ಹೊಸ ಇತಿಹಾಸ ಆರಂಭವಾಗಿದೆ.
ಸಂಪುಟ ವಿಸ್ತರಣೆಗೂ ಮೊದಲೆ ಸರ್ಕಾರದಲ್ಲಿ ತಾವಿರುವುದಿಲ್ಲ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಸ್ಪಷ್ಟ ಪಡಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯ ಚುಕ್ಕಾಣಿ ಯಾರ ಕೈಗೆ ಎಂಬ ನಿರೀಕ್ಷೆಗೆ ಮುನೇನಕೊಪ್ಪ ಸಚಿವರಾಗುವುದರೊಂದಿಗೆ ಪೂರ್ಣವಿರಾಮ ಬಿದ್ದಿದೆ.
ರೈತ ಸಮುದಾಯದಿಂದ ಬಂದು ಸಾಮಾಜಿಕ ಚಟುವಟಿಕೆಗಳ ಮೂಲಕವೆ ಮನೆ ಮಾತಾಗಿ ರಾಜಕೀಯ ಇನ್ನಿಂಗ್ಸ್ ಆರಂಭಿಸಿ ಎರಡನೇ ಬಾರಿಗೆ ಶಾಸಕರಾದ ೫೨ ವರ್ಷ ವಯಸ್ಸಿನ ಮುನೇನಕೊಪ್ಪ ನೇಮಕಗೊಂಡಿರುವುದರಿಂದ ಈ ಭಾಗದ ರೈತರಲ್ಲಿ ಹೊಸ ಆಶಾಕಿರಣ ಮೂಡಿದೆ. ತಮ್ಮ ನವಲಗುಂದ ಕ್ಷೇತ್ರದಲ್ಲಿ ಅಭಿವೃದ್ಧಿಯ ಮಳೆಯನ್ನೇ ಗೈದಿರುವ ಇವರ ಕಾರ್ಯವೈಖರಿಯನ್ನು ಅನ್ನದಾತರು ಅಕ್ಷರಶಃ ನೋಡಿದ್ದು, ಹಾಗಾಗಿ ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದೆ.
ಮಹದಾಯಿಗಾಗಿ ಮಿಡಿದ ಅಲ್ಲದೇ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಜತೆ ಪಾದಯಾತ್ರೆಯಲ್ಲೂ ಹೆಜ್ಜೆ ಹಾಕಿದ್ದ ಮುನೇನಕೊಪ್ಪ ಅವರಿಗೆ ಇದು ಈ ಭಾಗದ ಜೀವದಾಯಿನಿಯಾಗಲಿದೆ ಎಂಬ ಅರಿವಿದ್ದು ಆ ಹಿನ್ನೆಲೆಯಲ್ಲಿ ಅದಕ್ಕಾಗಿ ಪ್ರಾಮಾಣಿಕ ಯತ್ನ ನಡೆಸುತ್ತಲೇ ಬಂದಿದ್ದಾರೆ.
ಬಿಜೆಪಿ ಸರ್ಕಾರ ಬಂದಾಗಲೆಲ್ಲಾ ಹಿರಿತನದ ಹಿನ್ನೆಲೆಯಲ್ಲಿ ಮುರುಗೇಶ ನಿರಾಣಿ ಬಿಟ್ಟರೆ ಜಗದೀಶ ಶೆಟ್ಟರ್ ಹೊರತಾಗಿ ಬೇರಾರಿಗೂ ಮಂತ್ರಿಭಾಗ್ಯ ಹಾಗೂ ಉಸ್ತುವಾರಿ ಭಾಗ್ಯ ಎರಡೂ ದೊರೆತಿರಲಿಲ್ಲ. ಆದರೆ ಈ ಬಾರಿ ಶೆಟ್ಟರ್ ಸಂಪುಟಕ್ಕೆ ಸೇರದ ಹಿನ್ನೆಲೆಯಲ್ಲಿ ಹಿರಿತನ, ಗ್ರಾಮೀಣ ಪ್ರದೇಶದವರಿಗೆ ನೀಡಬೇಕೆಂಬ ಕೂಗು, ಎಲ್ಲರೊಂದಿಗೆ ಬೆರೆವ ಸ್ವಭಾವ ಅಲ್ಲದೇ ಪ್ರಾಮಾಣಿಕವಾಗಿ ಜಿಲ್ಲೆಯ ಅಭಿವೃದ್ಧಿ ಪಡಿಸಬೇಕೆಂಬ ದೂರದೃಷ್ಟಿ ಹೊಂದಿರುವ ಮುನೇನಕೊಪ್ಪಗೆ ವರವಾಗಿ ಪರಿಣಮಿಸಿ ಉಸ್ತುವಾರಿ ದೊರೆತಿದೆ. ಕಾಂಗ್ರೆಸ್ ಸರ್ಕಾರವಿದ್ದಾಗ ಸಿದ್ದರಾಮಯ್ಯ ಸಂಪುಟದಲ್ಲಿ ವಿನಯ ಕುಲಕರ್ಣಿ ಸಚಿವರಾಗಿ ಜಿಲ್ಲಾ ಉಸ್ತುವಾರಿಯಾಗಿದ್ದರು. ಅವರೂ ಮೂಲತಃ ನವಲಗುಂದ ಮೂಲದವರಾಗಿದ್ದರು. ಈಗ ಮತ್ತೆ ಉಸ್ತುವಾರಿ ನವಲಗುಂದದ ಪಾಲಾಗಿದೆ.
ಶೆಟ್ಟರ್ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಬಳಗದಲ್ಲಿ ಗುರುತಿಸಿಕೊಂಡಿರುವ ಅಲ್ಲದೇ ಸಿಎಂ ಬೊಮ್ಮಾಯಿ ಜತೆ ಉತ್ತಮ ಬಾಂಧವ್ಯವನ್ನು ಹೊಂದಿರುವ ಬಹುಸಂಖ್ಯಾತ ಪಂಚಮಸಾಲಿ ಸಮುದಾಯದ ಮುನೇನಕೊಪ್ಪ ಈ ಹಿಂದೆ ಸಂಸಧೀಯ ಕಾರ್ಯದರ್ಶಿಯಾಗಿ, ಅಲ್ಲದೇ ಮಹತ್ವದ ಹಣಕಾಸು ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಹಾಗಾಗಿ ಸಿಕ್ಕ ಅವಕಾಶ ಮರಳಿ ಬಯಸಿದರೂ ಸಿಗದು ಎಂಬ ಮಾತನ್ನು ಅರಿತಿರುವ ಅವರು ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಚಿಂತನೆ ನಡೆಸಿ ಈ ಭಾಗದ ರೈತರ ಆಶಾಕಿರಣವಾಗಬೇಕಿದೆ.