ಹುಬ್ಬಳ್ಳಿ : ಜೆಡಿಎಸ್ ಮತ್ತು ಬಿಜೆಪಿಯ ಕೆಲ ಘಟಾನುಘಟಿ ನಾಯಕರು, ಹಾಲಿ ಶಾಸಕರು ಶೀಘ್ರ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆಂಬ ಗುಸು ಗುಸು ಮಧ್ಯೆಯೇ ಧಾರವಾಡ ಜಿಲ್ಲೆಯಲ್ಲಿ ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಅವರೂ ಕೆಲವೇ ದಿನಗಳಲ್ಲಿ ತೆನೆಯ ಭಾರ ಇಳಿಸಲಿದ್ದಾರೆನ್ನಲಾಗುತ್ತಿದೆ.
ಈ ಕುರಿತು ಈಗಾಗಲೇ ಕಾಂಗ್ರೆಸ್ ನಾಯಕರೊಂದಿಗೆ ಕೋನರಡ್ಡಿ ಅವರು ಒಂದು ಸುತ್ತಿನ ಮಾತುಕತೆ ಕೂಡ ನಡೆಸಿದ್ದಾರೆ ಎನ್ನಲಾಗಿದೆ. ಜೆಡಿಎಸ್ ಪಕ್ಷದಲ್ಲಿ ಸಂಘಟನೆಯಲ್ಲಿನ ಕೊರತೆ ಮತ್ತು ಉತ್ತರ ಕರ್ನಾಟಕದಲ್ಲಿ ಪಕ್ಷಕ್ಕೆ ಗಟ್ಟಿ ನೆಲೆ ಇಲ್ಲದ ಹಿನ್ನಲೆಯಲ್ಲಿ ಕೋನರಡ್ಡಿಯವರು ಈ ತೀರ್ಮಾನಕ್ಕೆ ಬಂದಿದ್ದಾರೆನ್ನಲಾಗಿದೆ.
ಇತ್ತೀಚೆಗೆ ನಡೆದ ಹು-ಧಾ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಜಾ.ದಳ ಹೀನಾಯವಾಗಿ ಸೋತಿತ್ತು. ಈ ಸೋಲಿನ ನೆಪವೊಡ್ಡಿ ಕೋನರಡ್ಡಿಯವರು ಜಾ.ದಳ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ಕೂಡ ಸಲ್ಲಿಸಿದ್ದರು. ಪಕ್ಷ ತೊರೆಯುವ ಭಾಗವಾಗಿಯೇ ಕೋನರಡ್ಡಿಯವರು, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೊಂದಿಗೆ ಇಂದಿಗೂ ಕೋನರೆಡ್ಡಿ ಉತ್ತಮ ಬಾಂಧವ್ಯ ಹೊಂದಿದ್ದು, ಅವರ ಮೂಲಕ ಕಾಂಗ್ರೆಸ್ ಸೇರುವುದು. ಮತ್ತು ಮುಂಬರುವ ಚುನಾವಣೆಯಲ್ಲಿ ನವಲಗುಂದ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸುವ ಚಿಂತನೆ ನಡೆಸಿದ್ದಾರೆನ್ನಲಾಗಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ನವಲಗುಂದ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಕೋನರಡ್ಡಿ ಸೋಲನುಭಿಸಿದ್ದರು. ಮತ್ತೇ ವಿಧಾನಸಭೆ ಪ್ರವೇಶಿಸುವ ಹವಣಿಕೆಯಲ್ಲಿರುವ ಅವರಿಗೆ ಜೆಡಿಎಸ್‌ನಲ್ಲಿನ ಸಂಘಟನೆ ಮತ್ತು ಕಾರ್ಯಕರ್ತರ ಕೊರತೆ ಬಲವಾಗಿ ಕಾಡುತ್ತಿದೆ. ಇನ್ನೊಂದೆಡೆ ಉತ್ತರ ಕರ್ನಾಟಕ ಭಾಗದಲ್ಲಿ ಜಾ.ದಳ ವರಿಷ್ಠರು ಪಕ್ಷ ಸಂಘಟನೆಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿಲ್ಲ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ತಾವು ಜಾ.ದಳದಿಂದ ಕಣಕ್ಕಿಳಿದರೂ ಗೆಲ್ಲುವ ಸಾಧ್ಯತೆ ಕೂಡ ಕಡಿಮೆ ಎಂಬ ಭಾವನೆಯಿದೆ.
ಈಗಾಗಲೇ ಜೆಡಿಎಸ್‌ನ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ, ಒಕ್ಕಲಿಗ ಸಮುದಾಯ ಪ್ರಭಾವಿ ಮುಖಂಡ ಜಿ.ಟಿ.ದೇವೆಗೌಡ ಜೆಡಿಎಸ್ ತೊರೆಯಲು ತೀರ್ಮಾನಿಸಿ, ಘೋಷಿಸಿಯೂ ಆಗಿದೆ. ಇದೀಗ ಕೋಲಾರ ಶಾಸಕ ಶ್ರೀನಿವಾಸಗೌಡ ಅವರು ಜೆಡಿಎಸ್ ತೊರೆಯಲು ಸಜ್ಜಾಗಿದ್ದಾರೆ. ಅಲ್ಲದೇ ಗುಬ್ಬಿ ಶಾಸಕ ಕೆ.ಎಚ್.ಶ್ರೀನಿವಾಸ ಸಹ ಜಾ.ದಳದಿಂದ ನಿರ್ಗಮಿಸಲು ಇಚ್ಚಿಸಿದ್ದಾರೆ.
ಇನ್ನೊಂದೆಡೆ ೨೦೨೩ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲೇ ಬೇಕೆಂದು ಪಣ ತೊಟ್ಟಿರುವ ಹಾಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು, ಹಳೆ ಮೈಸೂರು ಪ್ರಾಂತ್ಯದ ಜಾ.ದಳದ ಹಾಲಿ ಹಾಗೂ ಮಾಜಿ ಶಾಸಕರನ್ನು ಕಾಂಗ್ರೆಸ್‌ನತ್ತ ಸೆಳೆಯಲು ತೆರೆಮರೆಯಲ್ಲಿ ಕಸರತ್ತು ನಡೆಸಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಬಂದರೆ, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ನೀಡಲಾಗುವುದು ಎಂಬ ಡಿಕೆಶಿಯವರು ಭರವಸೆಯ ಮಾತುಗಳನ್ನಾಡುತ್ತಿರುವುದು ಜೆಡಿಎಸ್ ಮುಖಂಡರ ಆಸೆಯನ್ನು ಚಿಗುರಿಸಿದ್ದು ಅಲ್ಲದೇ ನವಲಗುಂದದಲ್ಲಿ ತಮ್ಮದೇ ಕಾರ್ಯಕರ್ತರ ಪಡೆಯನ್ನು ಕೋನರೆಡ್ಡಿ ಹೊಂದಿದ್ದಾರೆ.
ಈ ದೃಷ್ಠಿಕೋನದಿಂದಲೇ ತಮ್ಮ ರಾಜಕೀಯ ಭವಿಷ್ಯ ಕಂಡುಕೊಳ್ಳಲು ಬಯಸಿರುವ ಕೋನರಡ್ಡಿ ಅವರು ಪಕ್ಷ ತೊರೆದರೂ ಅಚ್ಚರಿಯಿಲ್ಲ. ಒಂದು ವೇಳೆ ಕೋನರಡ್ಡಿಯವರು ಪಕ್ಷ ತೊರೆದರೆ ಜಾ.ದಳ. ಜಿಲ್ಲೆಯಲ್ಲಿ ಮತ್ತಷ್ಟು ನೆಲಕ್ಕಚ್ಚುವುದಂತೂ ಖಾತ್ರಿ.