ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಮೇಯರ್ ಚುನಾವಣೆ ಬಹುತೇಕ ನವೆಂಬರ್ ಮೊದಲ ಅಥವಾ ಎರಡನೇ ವಾರದಲ್ಲಿ ನಡೆಯುವ ಸಾಧ್ಯತೆ ದಟ್ಟವಾಗಿದೆ.
ಚುನಾವಣಾ ಆಯೋಗದ ಮಾಹಿತಿಯನ್ವಯ ನಗರಾಭಿವೃದ್ದಿ ಇಲಾಖೆ ಕಾರ್ಯದರ್ಶಿ ಗೆಜೆಟ್ ನೋಟಿಫಿಕೇಶನ್ ಸಚಿವರಿಗೆ, ಮುಖ್ಯಮಂತ್ರಿಗಳಿಗೆ ಕಳಿಸಬೇಕಿದ್ದು ಅಧಿವೇಶನದ ನಂತರ ಕಳುಹಿಸಬಹುದಾಗಿದೆ.
ಮುಖ್ಯಮಂತ್ರಿಯಿಂದ ಅನುಮೋದನೆಗೊಂಡ ನಂತರ ಪ್ರಾದೇಶಿಕ ಆಯುಕ್ತರಿಗೆ ಈ ಗೆಜೆಟ್ ಅನ್ವಯ ಪಾಲಿಕೆ ಚುನಾವಣೆ ನಡೆಸುವಂತೆ ಸೂಚಿಸಲಿದ್ದು ತದನಂತರ ಕನಿಷ್ಠ 21 ದಿನಗಳ ಕಾಲಾವಕಾಶ ಇಟ್ಟು ಚುನಾವಣಾ ಪ್ರಕ್ರಿಯೆ ಪ್ರಕಟಿಸಲಿರುವ ಹಿನ್ನೆಲೆಯಲ್ಲಿ ದೀಪಾವಳಿ ಹಬ್ಬದ ಸನಿಹದಲ್ಲಿ ಅಥವಾ ನಂತರ ನಡೆಯುವ ಸಾಧ್ಯತೆ ದಟ್ಟವಾಗಿದೆ.
ಪಾಲಿಕೆಯಲ್ಲಿ ಅತಿದೊಡ್ಡ ಪಕ್ಷವಾಗಿರುವ ಬಿಜೆಪಿ ಮೇಯರ್ ಹಾಗೂ ಉಪಮೇಯರ್ ಸ್ಥಾನಗಳನ್ನು ಗೆಲ್ಲಲು ಅಗತ್ಯ ಕಾರ್ಯತಂತ್ರ ರೂಪಿಸಿದ್ದು ಪಕ್ಷೇತರವಾಗಿ ಆಯ್ಕೆಯಾದ ದುರ್ಗಮ್ಮ ಬಿಜವಾಡರಿಗೆ ಮಣೆ ಹಾಕಿದೆ.
ಮೇಯರ್ ಸ್ಥಾನ ಹಿಂದುಳಿದ ಎ ವರ್ಗಕ್ಕೆ ಮೀಸಲಾಗಿದ್ದು ಈರೇಶ ಅಂಚಟಗೇರಿ, ತಿಪ್ಪಣ್ಣ ಮಜ್ಜಗಿ, ರಾಮಣ್ಣ ಬಡಿಗೇರ, ಸತೀಶ ಹಾನಗಲ್, ಉಮೇಶ ಕೌಜಗೇರಿ ಮುಂತಾದವರು ಹೆಸರು ಕೇಳಿ ಬಂದಿದ್ದು ಧಾರವಾಡ ಗ್ರಾಮೀಣ ವ್ಯಾಪ್ತಿಗೆ ದಕ್ಕುವ ಸಾಧ್ಯತೆಗಳು ದಟ್ಟವಾಗಿವೆ.