ಹುಬ್ಬಳ್ಳಿ: ವರ್ಷಾಂತ್ಯಕ್ಕೆ ಅವಿಭಾಜ್ಯ ಧಾರವಾಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ಪರಿಷತ್‌ಗೆ ಚುನಾವಣೆ ನಡೆಯಲ್ಲಿ ಟಿಕೆಟ್‌ಗಾಗಿ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ತೀವ್ರ ಪೈಪೋಟಿ ನಡೆಯುವುದು ನಿಶ್ಚಿತವಾಗಿದೆ.
ಈಗಾಗಲೇ ಕಾಂಗ್ರೆಸ್ ಪಕ್ಷ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿದ್ದು, ಹಲವರ ಹೆಸರೂ ಮುಂಚೂಣಿಗೆ ಬಂದಿವೆ.ಕಳೆದ ಬಾರಿ ಗೆಲುವು ಸಾಧಿಸಿದ್ದ ಶ್ರೀನಿವಾಸ ಮಾನೆ ಈ ಬಾರಿ ಸ್ಪರ್ಧಿಸುವುದಿಲ್ಲವೆಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.
ಅವಿಭಾಜ್ಯ ಧಾರವಾಡ ಜಿಲ್ಲೆ ವ್ಯಾಪ್ತಿಯಲ್ಲಿ ಶಿಗ್ಗಾವಿ, ಹು.ಧಾ.ಪಶ್ಚಿಮ ಸಾಮಾಜಿಕ ನ್ಯಾಯದಡಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿದರು ಗೆಲುವು ಮರೀಚಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಪರಿಷತ್ ಟಿಕೆಟ್ ಅಲ್ಪಸಂಖ್ಯಾತರಿಗೆ ನೀಡಬೇಕೆಂಬ ವಾದವೂ ಮುನ್ನೆಲೆಗೆ ಬಂದಿದೆ.
ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಪಶ್ಚಿಮ ಕ್ಷೇತ್ರದ ಪ್ರಭಾವಿ ಮುಖಂಡ ಇಸ್ಮಾಯಿಲ್‌ತಮಾಟಗಾರ, ಅವಳಿನಗರ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಅಂಜುಮನ್ ಹುಬ್ಬಳ್ಳಿ ಅಧ್ಯಕ್ಷ ಎಂ.ಸಿ.ಸವಣೂರ, ಪಾಲಿಕೆಯ ಹಿರಿಯ ಸದಸ್ಯರಾಗಿದ್ದ ಅಲ್ತಾಫ್ ನವಾಜ ಕಿತ್ತೂರ, ಮಾಜಿ ಸಂಸದ ಪ್ರೋ.ಐ.ಜಿ.ಸನದಿ, ಶಾಕೀರ ಸನದಿ, ಸುಭಾನಿ ಚೂಡಿಗಾರ ಮುಂತಾದವರ ಹೆಸರುಗಳು ಅಲ್ಪಸಂಖ್ಯಾತರಕೋಟಾದಡಿ ಕೇಳಿ ಬರಲಾರಂಬಿಸಿದ್ದು ಇದಿನ್ನುಆರಂಭಿಕ ಹಂತವಾಗಿದೆ.
ಮಾಜಿ ಪರಿಷತ್ ಸಭಾಪತಿ ವೀರಣ್ಣ ಮತ್ತಿಗಟ್ಟಿ ಸಹೋದರ ಶರಣಪ್ಪಕೊಟಗಿ ಈಗಾಗಲೇ ೧ ಲಕ್ಷಡಿ.ಡಿಯೊಂದಿಗೆಅರ್ಜಿ ಸಲ್ಲಿಸಿದ್ದು, ಅರವಿಂದಕಟಗಿ, ಸದಾನಂದ ಡಂಗನವರ, ಶಿರಹಟ್ಟಿ ಮಾಜಿ ಶಾಸಕ ಗಡ್ಡದೇವರಮಠರ ಪುತ್ರ ಆನಂದ ಗಡ್ಡದೇವರಮಠ, ಡಿ.ಆರ್.ಪಾಟೀಲರ ಪುತ್ರ ಸಚಿನ್ ಪಾಟೀಲ, ಮಾಜಿ ಸಚಿವ ಬಸವರಾಜ ಶಿವಣ್ಣವರ, ಬ್ಯಾಡಗಿಯ ಎಸ್.ಆರ್.ಪಾಟೀಲ, ಎಂ.ಎಂ.ಹಿರೇಮಠ ಮುಂತಾದವರು ಆಕಾಂಕ್ಷಿಗಳಾಗಿದ್ದು ಈಗಾಗಲೇ ಈ ನಿಟ್ಟಿನಲ್ಲಿಯತ್ನ ನಡೆಸಿದ್ದಾರೆ.
ಡಿಸೆಂಬರ್‌ನಲ್ಲಿ ಬಹುಶಃ ಚುನಾವಣೆ ಖಚಿತವಾಗಿದ್ದು, ಒಬ್ಬರಿಗೆ ಟಿಕೆಟ್ ನೀಡುವರೋ ಅಥವಾ ಇಬ್ಬರಿಗೆ ನೀಡುವರೋ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.
ಬಿಜೆಪಿಯಲ್ಲೂಇದೆ ತುರುಸು
ಬಿಜೆಪಿಯಲ್ಲಿ ಹಾಲಿ ಪ್ರದೀಪ ಶೆಟ್ಟರ್ ಸದಸ್ಯರಾಗಿದ್ದು ಅವರಿಗೆ ಟಿಕೆಟ್ ನೀಡಲಾಗುವುದು ಎಂಬ ಮಾತು ಕೇಳಿ ಬರುತ್ತಿದ್ದರೂ ಹಾವೇರಿಯ ಮಾಜಿ ಶಾಸಕ ಶಿವರಾಜ ಸಜ್ಜನರ, ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ಮುಂತಾದವರು ಆಕಾಂಕ್ಷಿಗಳಾಗಿದ್ದಾರೆ. ಪ್ರದೀಪ ಶೆಟ್ಟರ್ ಕಲಘಟಗಿಯತ್ತ ಉತ್ಸುಕರಾಗಿದ್ದಾರೆಂಬ ಮಾತೂಗಳು ಕೇಳಿ ಬರುತ್ತಿವೆ.
ಈ ಚುನಾವಣೆ ಪ್ರಕ್ರಿಯೆ ಸಂಬಂಧ ಇಂದು ಬೆಂಗಳೂರಿನಲ್ಲಿ ಬಿಜೆಪಿ ಸಭೆಯೊಂದು ಸಹ ನಡೆಯಲಿದೆಎಂದು ತಿಳಿದುಬಂದಿದೆ.
ಕಾಂಗ್ರೆಸ್ ನಡೆ ನೋಡುವ ತಂತ್ರ
ಬಿಜೆಪಿ ಸಹ ಕಾಂಗ್ರೆಸ್ ನಡೆಯನ್ನು ಅವಲೋಕಿಸುತ್ತಿದ್ದು ಒಬ್ಬರನ್ನು ಕಣಕ್ಕಿಳಿಸಬೇಕೋ, ಇಬ್ಬರನ್ನು ಹುರಿಯಾಳಾಗಿಸಬೇಕೆಂಬ ಬಗ್ಗೆ ಚಿಂತನೆ ನಡೆಸಿದೆ. ಕಾಂಗ್ರೆಸ್ ಅಲ್ಪಸಂಖ್ಯಾತರೊಬ್ಬರನ್ನು ಕಣಕ್ಕಿಳಿಸಿದಲ್ಲಿ ಇಬ್ಬರನ್ನು ಅಖಾಡಾಕ್ಕಿಳಿಸುವ ಪ್ಲಾನ್‌ರೂಪಸುತ್ತಿದೆ ಎನ್ನಲಾಗುತ್ತಿದೆ.