ಧಾರವಾಡ: ಆಝಾದಿ ಕಾ ಅಮೃತ ಮಹೋತ್ಸವ ಮತ್ತು ಭಾರತೀಯ ಜೀವ ವಿಮಾ ನಿಗಮದ 65ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಶನಿವಾರ ನಗರದಲ್ಲಿ ಫಿಟ್ ಇಂಡಿಯಾ 75 ಫ್ರೀಡಂ ರನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಎಲ್‌ಐಸಿಯ ವಿಭಾಗೀಯ ಕಚೇರಿಯ ನೇತೃತ್ವದಲ್ಲಿ ಕರೀಯರ ಏಜೆಂಟ್ಸ್ ಶಾಖೆ, ಸಿಎಲ್‌ಐಎ ಉಪಗ್ರಹ ಶಾಖೆ ಮತ್ತು ಗುಂಪು ಮತ್ತು ಪಿಂಚಣಿ ವಿಮಾ ಯೋಜನೆ ಶಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಫಿಟ್ ಇಂಡಿಯಾ ರನ್ ಕಾರ್ಯಕ್ರಮಕ್ಕೆ ಹಿರಿಯ ವಿಭಾಗಾಧಿಕಾರಿ ಎಮ್. ಮನೋಹರನ್ ಚಾಲನೆ ನೀಡಿದರು.
ಕರ್ನಾಟಕ ಕಾಲೇಜು ರಸ್ತೆಯಲ್ಲಿನ ವಿಭಾಗೀಯ ಕಚೇರಿಯಿಂದ ಪ್ರಾರಂಭವಾದ ಓಟ, ಜ್ಯೂಬಿಲಿ ವೃತ್ತ, ಕಲಾಭವನ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ಬಿಆರ್‌ಟಿಎಸ್. ವೃತ್ತ ಮತ್ತಿತರ ಕಡೆಗಳಲ್ಲಿ ಸಾಗಿತು. ಓಟವು ನಾಗರೀಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
ಅತ್ಯಂತ ಉತ್ಸಾಹದಿಂದ ಪಾಲ್ಗೊಂಡ ಫಿಟ್ ಇಂಡಿಯಾ 75 ಫ್ರೀಡಂ ರನ್ ಮೂಲಕ ಎಲ್‌ಐಸಿ ತನ್ನ 65ನೇ ವಾರ್ಷಿಕೋತ್ಸವವನ್ನು ಸಡಗರದಿಂದ ಆಚರಿಸಿತು. ಹಿರಿಯ ವಿಭಾಗಾಧಿಕಾರಿ ಎಮ್. ಮನೋಹರನ್, ಮಾರುಕಟ್ಟೆ ಪ್ರಬಂಧಕ ವಿ.ಆರ್.ಮುರಲೀಧರ್ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿ ಜೊತೆಗೆ 200 ಕ್ಕೂ ಹೆಚ್ಚು ಸಾರ್ವಜನಿಕರು ಭಾಗವಹಿಸಿದ್ದರು.