ಧಾರವಾಡ: ಕತಾರ್‌ನ ದೋಹಾದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ ಏಷ್ಯಾ ವಲಯದ ಪ್ರಾಥಮಿಕ ಹಂತದ ಪಂದ್ಯಗಳಿಗೆ ವೈದ್ಯಾಧಿಕಾರಿಯಾಗಿ ಧಾರವಾಡದ ಕಿರಣ ಕುಲಕರ್ಣಿ ಅವರು ನೇಮಕವಾಗಿದ್ದಾರೆ.
ಕರ್ನಾಟಕದ ಫುಟ್ಬಾಲ್ ಇತಿಹಾಸದಲ್ಲಿ ಮೊದಲ ಬಾರಿ ರಾಜ್ಯದವರೊಬ್ಬರನ್ನು ಫಿಫಾ ವೈದ್ಯಕೀಯ ಅಧಿಕಾರಿ ಎಂದು ನೇಮಕ ಮಾಡಿದೆ. ಇದೇ ತಿಂಗಳು ನಡೆಯಲಿರುವ ಎಎಫ್‌ಸಿ ಪಂದ್ಯಗಳಲ್ಲಿ ಕಾರ್ಯನಿರ್ವಹಿಸಲು ಅವರು ದೋಹಾಗೆ ತೆರಳುವರು.
ಅ.7ರಂದು ಇರಾಕ್ ಮತ್ತು ಲೆಬನಾನ್, 12ರಂದು ಇರಾನ್ ಹಾಗೂ ದಕ್ಷಿಣ ಕೊರಿಯಾಗಳ ನಡುವೆ ಪಂದ್ಯ ನಡೆಯಲಿವೆ.
ಡಾ. ಕಿರಣ ಅವರು ಭಾರತ ಫುಟ್‌ಬಾಲ್ ತಂಡದ ವೈದ್ಯಾಧಿಕಾರಿಯಾಗಿ ಕೆಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಉದ್ದೀಪನ ಮದ್ದು ತಡೆ ಘಟಕದ ಸಂಯೋಜಕರೂ ಆಗಿದ್ದಾರೆ.