ಹುಬ್ಬಳ್ಳಿ-ಧಾರವಾಡ ಸುದ್ದಿ

ಬಿಜೆಪಿ ಸುಳ್ಳಿನ ಸರಮಾಲೆಗೆ ಡಿಕೆಶಿ ಲೇವಡಿ; ಬಿಆರ್‌ಟಿಎಸ್ ಗುಟ್ಟು ಬೆಲ್ಲದ ಬಳಿಯಿದೆ

 

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ, ಬೆಳಗಾವಿ, ಕಲಬುರ್ಗಿ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆಸ್ತಿ ತೆರಿಗೆಯಲ್ಲಿ ಶೇ50ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.


ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್‌ನಿಂದಾಗಿ ಜನರು ತೀವ್ರ ಸಂಕಷ್ಟದಲ್ಲಿದ್ದಾರೆ. ಇಂತಹ ಸಮಯದಲ್ಲಿ ಅವರಿಗೆ ನೆರವು ನೀಡುವುದು ನಮ್ಮ ಕರ್ತವ್ಯ. ಗುಜರಾತ್ ಹಾಗೂ ತೆಲಂಗಾಣದಲ್ಲಿ ಈಗಾಗಲೇ ಆಸ್ತಿ ತೆರಿಗೆ ವಿನಾಯಿತಿ ಘೋಷಿಸಲಾಗಿದೆ. ಆದರೆ ರಾಜ್ಯದಲ್ಲಿ ಮಾತ್ರ ಅಂತಹ ಕ್ರಮ ಕೈಗೊಂಡಿಲ್ಲ. ಜನರು ಬಿಜೆಪಿಯ ಸುಳ್ಳು ಭರವಸೆ ಗಳಿಗೆ ಮರುಳಾಗದೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಕೇಂದ್ರದಲ್ಲಿ ಬಿಜೆಪಿ ಸರ್ಕಾರ, ರಾಜ್ಯದಲ್ಲಿ ಇವರದ್ದೆ ಸರ್ಕಾರ, ಕಳೆದ 15 ವರ್ಷಗಳಿಂದ ಪಾಲಿಕೆಯಲ್ಲಿ ಅಧಿಕಾರ ಇದ್ದರೂ, ಹುಬ್ಬಳ್ಳಿ-ಧಾರವಾಡವನ್ನು ಅಭಿವೃದ್ದಿ ಮಾಡಿಲ್ಲ. ಜನರಿಗೆ ಬಿಜೆಪಿ ಸುಳ್ಳಿನ ಸರಮಾಲೆ ಕೊಟ್ಟಿದೆ ಎಂದರಲ್ಲದೇ ಕಳೆದ ಬಾರಿ ಪ್ರಣಾಳಿಕೆಯಲ್ಲಿ ನೀಡಿದ ಒಂದೂ ಭರವಸೆ ಈಡೇರಿಸಿಲ್ಲ ಎಂದರು.


ಇಲ್ಲಿರುವಂತಹ ಬಿಜೆಪಿ ಸ್ನೇಹಿತರು ಹಾಗೂ ಕೇಂದ್ರ ಸಚಿವರು ಇದಕ್ಕೆ ಉತ್ತರ ಕೊಡಬೇಕು.ಸುಳ್ಳು ಹೇಳಿ ಜನರ ದಾರಿ ತಪ್ಪಿಸುವ ಕೆಲಸ ಏಕೆ ಮಾಡ್ತಾ ಇದೀರಾ..? ನಿಮಗೆ ಜನ್ರು ಏಕೆ ಮತ ಹಾಕಬೇಕು ಎಂದು ಪ್ರಶ್ನಿಸಿದರು.
ಹುಬ್ಬಳ್ಳಿ-ಧಾರವಾಡ ನಗರ ಗುಂಡಿಗಳ ನಗರವಾಗಿದೆ. ಇಲ್ಲಿ ಡ್ಯಾನ್ಸ್ ಕಲಿಯಬೇಕಾಗಿಲ್ಲ, ಹುಬ್ಬಳ್ಳಿ-ಧಾರವಾಡದ ರಸ್ತೆಗಳು ಡ್ಯಾನ್ಸ್ ಹೇಳಿಕೊಡ್ತವೆ.
ಜಗದೀಶ್ ಶೆಟ್ಟರ್, ಪ್ರಹ್ಲಾದ ಜೋಶಿ,ಮುಖ್ಯಮಂತ್ರಿ ಸಾಹೇಬರು ಇತ್ತ ಕಡೆ ನೋಡಬೇಕು. ಇಲ್ಲಿ ನೀವು ಬಂದು ಕೆಲಸ ಮಾಡೋದು ಬೇಡ, ನಿಮ್ಮ ಅಧಿಕಾರಿಗಳನ್ನ ಕಳುಹಿಸಿ ಕೆಲಸ ಮಾಡಿ. ಎಂದರು.


ಹುಬ್ಬಳ್ಳಿ ಧಾರವಾಡಕ್ಕೆ ಹೊರಗಡೆಯವರು ಬಂದ್ರೆ ದೂಳಿನಿಂದ ಬಟ್ಟೆ ಕಲರ್ ಚೆಂಜ್ ಆಗುತ್ತೆ ಹುಬ್ಬಳ್ಳಿಯಿಂದ ಹೋಗುವಾಗ ಬಟ್ಟೆ ಬಿಚ್ಚಿಟ್ಟು ಹೋಗುವ ಸ್ಥಿತಿಇದೆ ಎಂದು ವ್ಯಂಗ್ಯವಾಡಿದರು.
ಭ್ರಷ್ಟಾಚಾರದಲ್ಲಿ ರಾಜ್ಯವೆ ನಂಬರ್ ಒನ್ ಆಗಿದೆ. ಬಸವಣ್ಣನ ನಾಡಿನಲ್ಲಿ ಸುಳ್ಳಿನ ಸರಮಾಲೆಯ ಪಕ್ಷ ಎಂಬ ಹೆಸರು ತೆಗೆದುಕೊಳ್ಳಬೇಡಿ. ನಾವು ನುಡಿದಂತೆ ನಡೆದಿದ್ದೇವೆ ನಾವು ಪ್ರಾಮಾಣಿಕವಾಗಿ ಜನತೆಯ ಸೇವೆ ಮಾಡಲಿದ್ದೇವೆ ಹು-ಧಾ ಪಾಲಿಕೆಯಲ್ಲಿ ಹೆಚ್ಚು ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಕೋವಿಡ್‌ನಲ್ಲಿ ಬಿಜೆಪಿ ಸರ್ಕಾರದಲ್ಲಿ ಅತ್ಯಂತ ಹೆಚ್ಚಿನ ಭ್ರಷ್ಟಾಚಾರ ನಡೆಯಿತು.

ಬಿಆರ್‌ಟಿಎಸ್ ಗುಟ್ಟು ಬೆಲ್ಲದ ಬಳಿಯಿದೆ

ಬಿಆರ್ ಟಿಎಸ್ ರಸ್ತೆ ನಿರ್ಮಾಣದಲ್ಲಿ ವ್ಯಾಪಕ ಭ್ರಷ್ಟಾಚಾರವಾಗಿದೆ. ಈ ವಿಚಾರದಲ್ಲಿ ಶಾಸಕ ಅರವಿಂದ ಬೆಲ್ಲದ್ ಅವರನ್ನೇ ನಾವು ನಂಬಬೇಕಿದೆ. ಬೆಲ್ಲದ್ ಅವರಿಗೆ ಒಳಗಿನ ಗುಟ್ಟು ಗೊತ್ತಿದೆ ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಬೆಲ್ಲದ ಅವರಿಗಿಂತ ಬೇರೆ ಸಾಕ್ಷಿ ಬೇಕಾಗಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಎಐಸಿಸಿ ವೀಕ್ಷಕ ಕುಲದೀಪ್ ರೈ, ಶಾಸಕ ಆರ್.ವಿ.ದೇಶಪಾಂಡೆ, ಮಾಜಿ ಸಂಸದ ಧ್ರುವನಾರಾಯಣ, ಶಿವಾನಂದ ಪಾಟೀಲ, ಪ್ರಕಾಶ ಬೆಂಡಿಗೇರಿ, ಶಾಕೀರ ಸನದಿ, ಶಾಜಾನ್ ಮುಜಾಹೀದ್ ಇನ್ನಿತರರಿದ್ದರು.

administrator

Related Articles

Leave a Reply

Your email address will not be published. Required fields are marked *