ಹುಬ್ಬಳ್ಳಿ: ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ, ವಿದ್ಯುತ್ ದರ ಹೀಗೆ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಖಂಡಿಸಿ ನಗರದಲ್ಲಿಂದು ಜೆಡಿಎಸ್ ವತಿಯಿಂದ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ತೈಲ ದರ ಏರಿಕೆ ಮಾಡಿದ್ದರಿಂದ ಬಡಬಗ್ಗರ, ದೀನ ದಲಿತರ, ಕೂಲಿ ಕಾರ್ಮಿಕರು, ಅಸಂಘಟಿತ ವರ್ಗ, ರೈತರಿಗೆ ಬೆಲೆಗಳನ್ನು ಗಗನಕ್ಕೆ ಏರಿಸಿ ಸಾಮಾನ್ಯರ ಹಾಗೂ ಮಧ್ಯಮ ವರ್ಗದವರಿಗೆ ತೊಂದರೆಯಾಗಿದ್ದು, ಕೂಡಲೇ ದರ ಏರಿಕೆಯನ್ನು ಹಿಂಪಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಮೊದಲನೇ ಹಾಗೂ ಎರಡನೇ ಅಲೆಗಳಲ್ಲಿ ಮೃತರಾದ ಎಲ್ಲ ಕುಟುಂಬಗಳಿಗೆ ಯಾವುದೇ ಶರತ್ತು ವಿಧಿಸದೇ ೫ ಲಕ್ಷ ರೂ. ಪರಿಹಾರ ನೀಡಬೇಕೆಂದು ಆಗ್ರಹಿಸಿ ತಹಶೀಲ್ದಾರ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ, ರಾಜ್ಯ ಉಪಾಧ್ಯಕ್ಷ ಗುರುರಾಜ ಹುಣಸಿಮರದ, ಜಿಲ್ಲಾ ಅಧ್ಯಕ್ಷ ಬಿ.ಬಿ. ಗಂಗಾಧರಮಠ, ಅಪ್ರೋಜ ಮಂಚಿನಕೊಪ್ಪ, ಸಾಧಿಕ ಹಕೀಮ್, ಇರ್ಷಾದ ಭದ್ರಾಪುರ, ಶಂಕರ ಪವಾರ, ನವೀನ ಮಡಿವಾಳರ, ಇಮ್ತಿಯಾಜ್ ಖತೀಬ, ಭಾಷಾ ಮುದಗಲ್, ನಿಯಾಜ, ಇತರರು ಪ್ರತಿಭಟನೆಯಲ್ಲಿದ್ದರು.