ಧಾರವಾಡ: ಮನುಕುಲಕ್ಕೆ ಮೌಲ್ಯಾಧಾರಿತ ಜೀವನ ವಿಧಾನ ಬೋಧಿಸಿ ಸಾಕ್ಷಾತ್ಕಾರ ಸಂಪಾದನೆಗೆ ಅಗತ್ಯವಾದ ಆಧ್ಯಾತ್ಮ ಚಿಂತನೆಯ ಅನುಭಾವದ ಮಹಾಬೆಳಗನ್ನು ತುಂಬುವ ಭಾರತೀಯ ಸನಾತನ ಸಂಸ್ಕೃತಿಯ ತಾಯಿಬೇರು ಸಂಸ್ಕೃತ ಭಾಷೆಯಾಗಿದೆ ಎಂದು ಕಾಶಿ ಜ್ಞಾನ ಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಪ್ರತಿಪಾದಿಸಿದರು.
ಶಿಗ್ಗಾಂವಿ ತಾಲೂಕಿನ ಬಿಸನಳ್ಳಿ ಗ್ರಾಮದ ಶ್ರೀಪೀಠದ ಶ್ರೀಜಗದ್ಗುರು ಪಂಚಾಚಾರ್ಯ ವೇದ, ಆಗಮ, ಸಂಸ್ಕೃತ, ಸಂಗೀತ ಮತ್ತು ಯೋಗ ಪಾಠಶಾಲೆಯಲ್ಲಿ ವಿಶ್ವ ಸಂಸ್ಕೃತ ದಿನದ ಅಂಗವಾಗಿ ಒಂದು ವಾರ ಕಾಲ ಹಮ್ಮಿಕೊಂಡಿದ್ದ ’ಸಂಸ್ಕೃತ ವಿಲಾಸಿನೀ’ ಕಾರ್ಯಕ್ರಮದ ಸಮಾ ರೋಪ ಸಂದರ್ಭದಲ್ಲಿ ವಾರಣಾಸಿಯ ಜ್ಞಾನಪೀಠದಿಂದ ಅಂತರ್ಜಾಲ ವೇದಿಕೆಯಲ್ಲಿ ಅವರು ಆಶೀರ್ವಚನ ನೀಡಿದರು.
ತಾಯಿ ಭಾಷೆ ಎನಿಸಿರುವ ಸಂಸ್ಕೃತಕ್ಕೆ ಬಹುಪಾಲು ಭಾಷೆಗಳನ್ನು ಶ್ರೀಮಂತಗೊಳಿಸಿದ ಹೆಗ್ಗಳಿಕೆಗೆ ಇದೆ. ಭಾರತೀಯ ಆಧ್ಯಾತ್ಮಿಕ ಘನತೆ ಯನ್ನು ವಿಶ್ವತೋಮುಖಗೊಳಿಸಿರುವ ವೇದ, ಆಗಮ, ಉಪನಿಷತ್ತು, ರಾಮಾಯಣ, ಮಹಾಭಾರತ, ಪಂಚತಂತ್ರ, ಅರ್ಥಶಾಸ್ತ್ರ, ನೀತಿ, ನ್ಯಾಯ, ರಾಜನೀತಿ, ಧರ್ಮ, ನಾಟ್ಯ, ಸಂಗೀತ, ಜ್ಯೋತಿಷ್ಯಶಾಸ್ತ್ರ ವಿಷಯಗಳೆಲ್ಲವೂ ಮೂಲ ಸಂಸ್ಕೃತ ಭಾಷೆಯಲ್ಲಿಯೇ ಇರುವುದು ವಿಶೇಷವಾಗಿದೆ ಎಂದರು.
ಅಂತರ್ಜಾಲ ವೇದಿಕೆಯಲ್ಲಿ ಅನೇಕ ಸಂಸ್ಕೃತ ವಿದ್ವಾಂಸರ ವಿಚಾರ ಗಳನ್ನು ಅರಿಯುವಲ್ಲಿ ’ಸಂಸ್ಕೃತ ವಿಲಾಸಿನೀ’ ಕಾರ್ಯಕ್ರಮ ಸಹಾಯಕ ವಾಗಿದ್ದು, ಈ ಮೂಲಕ ವಿಶ್ವ ಸಂಸ್ಕೃತ ದಿನಾಚರಣೆಯು ಬಿಸನಳ್ಳಿ ಗ್ರಾಮದಲ್ಲಿ ಬಹಳ ಅರ್ಥಪೂರ್ಣವಾಗಿ ಜರುಗಿದೆ ಎಂದೂ ಶ್ರೀಗಳು ಶ್ಲ್ಯಾಘಿಸಿದರು.
ಶಿವಮೊಗ್ಗ ಜಿಲ್ಲೆ ಸಾಲೂರು ಬ್ರಹನ್ಮಠದ ಶ್ರೀಗುರುಲಿಂಗಜಂಗಮ ಶಿವಾಚಾರ್ಯ ಸ್ವಾಮೀಜಿ ಹಾಗೂ ಬಾಗಲಕೋಟ ಜಿಲ್ಲೆ ಗುಳೇದ ಗುಡ್ಡ-ಕೋಟೇಕಲ್ಲ ಅಮರೇಶ್ವರಮಠದ ಶ್ರೀನೀಲಕಂಠ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು.
ಅರುಣಕುಮಾರ ಕಾಳಗಿ ಹಾಗೂ ಮಲ್ಲಿಕಾರ್ಜುನ ಯಳಮಲ್ಲಿಮಠ, ಪಾಠಶಾಲೆಯ ಭೂದಾನಿ ಮುರುಘೇಶ ಆಜೂರ, ಗುರುಶಾಂತಪ್ಪ ನರೇಗಲ್ಲ, ಗದಿಗೆಪ್ಪ ಮಾಮಲೆಪಟ್ಟಣಶೆಟ್ಟರ, ಗಂಗಾಧರ ಬಡ್ಡಿ, ಚೆನ್ನಬಸಪ್ಪ ಅಂಗಡಿ, ಗದಿಗೆಯ್ಯ ಹಿರೇಮಠ, ಮಲ್ಲಯ್ಯ ಕೋಡಿಕೊಪ್ಪ ಮಠ ಇದ್ದರು. ಇದೇ ಸಂದರ್ಭದಲ್ಲಿ ಜಂಗಮ ವಟುಗಳಿಗೆ ಅಯ್ಯಾಚಾರ ಶಿವದೀಕ್ಷಾ ಹಾಗೂ ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮ ಜರುಗಿತು. ಚೆನ್ನಬಸಪ್ಪ ಅಂಗಡಿ ಜಂಗಮ ವಟುಗಳಿಗೆ ನೂತನಾಂಬರ ನೀಡಿದರು.