ಧಾರವಾಡ: ಕೋವಿಡ್ ಸಾಂಕ್ರಾಮಿಕ ರೋಗ ತಡೆಯಲು ಲಸಿಕೆ ರಾಮಬಾಣವಾಗಿದೆ. ಸಾಂಕ್ರಾಮಿಕ ರೋಗದಿಂದ ಶೈಕ್ಷಣಿಕ ಪ್ರಗತಿಗೆ ಕುಂಠಿತಗೊಂಡಿದೆ. ಶಿಕ್ಷಣ ವ್ಯವಸ್ಥೆ ಮತ್ತೆ ಮೊದಲನೆ ಸ್ಥಿತಿಗೆ ಮರಳ ಬೇಕಾದರೆ ಎಲ್ಲ ವಿದ್ಯಾರ್ಥಿಗಳು ಲಸಿಕೆ ಹಾಕಿಸಿಕೊಂಡು ತರಗತಿಗಳಿಗೆ ಹಾಜರಾಗಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಜೆಎಸ್‌ಎಸ್ ವಿತ್ತಾಧಿಕಾರಿ ಡಾ.ಅಜಿತ ಪ್ರಸಾದ ಹೇಳಿದರು.
ನಗರದ ಜೆಎಸ್‌ಎಸ್ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಆಯೋಜಸಿದ್ದ ಕೋವಿಡ್ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಆದ್ಯತೆ ಮೇಲೆ ಸರಕಾರ ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಅದರ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಶೀಘ್ರದಲ್ಲಿ ತರಗತಿಗಳು ಆರಂಭವಾಗುತ್ತಿದ್ದು, ಆರೋಗ್ಯಕರ ಶೈಕ್ಷಣಿಕ ವಾತಾವರಣದಲ್ಲಿ ಶೈಕ್ಷಣಿಕ ಚಟುವಟಿಕೆಗಳು ನಡೆಯಲಿ ಎಂದು ಅಜಿತ ಪ್ರಸಾದ ಹಾರೈಸಿದರು.
ಮಹಾವೀರ ಉಪಾದ್ಯೆ, ಡಾ.ಸೂರಜ್ ಜೈನ್, ಜಿನೇಂದ್ರ ಕುಂದಗೋಳ, ವಿ.ಎನ್.ದೇಸಾಯಿ ಇನ್ನಿತರರು ಉಪಸ್ಥಿತರಿದ್ದರು. ಮದಾರಮಡ್ಡಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಅರುಣಾ, ತಾಲೂಕಾ ಆರೋಗ್ಯಾಧಿಕಾರಿ ಡಾ.ತನುಜಾ, ಆರೋಗ್ಯ ಸಹಾಯಕಿಯರು ಮತ್ತು ಸಿಬ್ಬಂದಿ ಲಸಿಕಾ ಕರ್ತವ್ಯ ನಿರ್ವಹಿಸಿದರು.