ಹುಬ್ಬಳ್ಳಿ-ಧಾರವಾಡ ಸುದ್ದಿ
ಶಾಸಕ ಬೆಲ್ಲದ, ಅಧಿಕಾರಿಗಳ ನಡೆಗೆ ತಮಾಟಗಾರ ಆಕ್ರೋಶ

ಶಾಸಕ ಬೆಲ್ಲದ, ಅಧಿಕಾರಿಗಳ ನಡೆಗೆ ತಮಾಟಗಾರ ಆಕ್ರೋಶ

ಧಾರವಾಡ: ನೆಲಸಮಗೊಳಿಸಿರುವ ಇಲ್ಲಿನ ಸುಪರ್ ಮಾರ್ಕೆಟ್‌ನಲ್ಲಿ ಅಂಗಡಿಗಳ ಪುನಃನಿರ್ಮಾಣ ಕಾಮಗಾರಿಯನ್ನು ಮಹಾನಗರ ಪಾಲಿಕೆಯು ೧೫ ದಿನಗಳೊಳಗೆ ಆರಂಭಿಸದಿದ್ದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಾಟಗಾರ ಎಚ್ಚರಿಸಿದರು.

ನಗರದ ಸುಪರ್ ಮಾರ್ಕೆಟ್‌ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ವಿಷಯದಲ್ಲಿ ಸ್ಥಳೀಯ ಶಾಸಕರ ಮತ್ತು ಪಾಲಿಕೆ ಅಧಿಕಾರಿಗಳ ಬೇಜಬ್ದಾರಿತನವನ್ನು ಖಂಡಿಸಿದರು.


ತರಕಾರಿ ಮತ್ತಿತರ ಸಣ್ಣ-ಪುಟ್ಟ ವ್ಯವಹಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದವರ ಅಂಗಡಿಗಳನ್ನು ಕಳೆದ ಜುಲೈ 12 ರಂದು ಪಾಲಿಕೆ ಅಧಿಕಾರಿಗಳು ನೆಲಸಮಗೊಳಿಸಿದರು. ಎಲ್ಲ ವ್ಯಾಪಾರಸ್ಥರಿಗೆ ಶೀಘ್ರ್ರದಲ್ಲಿಯೇ ಅಂಗಡಿಗಳನ್ನು ನಿರ್ಮಿಸಿಕೊಡುವುದಾಗಿ ಪಾಲಿಕೆ ಅಧಿಕಾರಿಗಳು ವ್ಯಾಪಾರಸ್ಥರಿಗೆ ಆಗ ಭರವಸೆ ನೀಡಿದ್ದರು. ಅಧಿಕಾರಿಗಳ ಮಾತು ನಂಬಿದ ವ್ಯಾಪಾರಸ್ಥರಿಗೆ ಇದುವರೆಗೂ ಅಂಗಡಿ ಕಟ್ಟಿಸಿಕೊಡಲು ಪಾಲಿಕೆ ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ಇದರಿಂದ 250 ಕ್ಕೂ ಹೆಚ್ಚು ಸಣ್ಣ ವ್ಯಾಪಾರಸ್ಥರು ಆರ್ಥಿಕವಾಗಿ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಕೆಲವರು ಬ್ಯಾಂಕು ಮತ್ತಿತರ ಕಡೆಗಳಲ್ಲಿ ಸಾಲ ತಂದು ಅಂಗಡಿ ನಿರ್ಮಿಸಿಕೊಂಡಿದ್ದರು.

ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈಗ ಸಾಲ ತಂದವರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಪರಿಸ್ಥಿತಿಯನ್ನು ಶಾಸಕರು ಮತ್ತು ಅಧಿಕಾರಿಗಳ ಗಮನಕ್ಕೆ ತಂದರೂ ಯಾರೂ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ.
ಸಧ್ಯ ನೆಲಸಮಗೊಳಿಸಿದ ಅಂಗಡಿಗಳ ಜಾಗೆಯಲ್ಲಿ ಹಂದಿಗಳು ತಿರುಗಾಡುತ್ತಿವೆ. ಜೊತೆಗೆ ಮಲ-ಮೂತ್ರ ವಿಸರ್ಜನೆಯ ತಾಣವಾಗಿ ಮಾರ್ಪಟ್ಟಿದೆ. ಇದರಿಂದ ಸುತ್ತಲಿನ ಅಂಗಡಿಯವರು ಕೂಡ ಕಿರಿಕಿರಿ ಅನುಭವಿಸುವಂತಾಗಿದೆ. ಆದಾಗ್ಯೂ ಅಧಿಕಾರಿಗಳು ಕಣ್ಣೆತ್ತಿ ನೋಡುತ್ತಿಲ್ಲ.


ಶಾಸಕ ಅರವಿಂದ ಬೆಲ್ಲದ ಅವರು ಸಣ್ಣ ವ್ಯಾಪಾರಸ್ಥರ ಗೋಳು ಕೇಳುವ ಮನಸ್ಸು ಮಾಡುತ್ತಿಲ್ಲ. ಈ ಬಗ್ಗೆ ಆಸಕ್ತಿ ತೋರಿಸದ ಶಾಸಕ ಅರವಿಂದ ಬೆಲ್ಲದ ಅವರಿಗೆ ಬಡಜನರ ಶಾಪ ಖಂಡಿತ ತಟ್ಟಲಿದೆ ಎಂದು  ಹೇಳಿದರು.
ಈಗ ನೆಲಸಮಗೊಳಿಸಿರುವ ಅಂಗಡಿಗಳ ಜಾಗೆಯಲ್ಲಿ ಮಹಾನಗರ ಪಾಲಿಕೆಯವರು ಅಂಗಡಿಗಳ ನಿರ್ಮಾಣ ಕಾಮಗಾರಿಯನ್ನು 15 ದಿನದೊಳಗೆ ಆರಂಭಿಸಬೇಕು. ಇಲ್ಲದಿದ್ದರೆ ವ್ಯಾಪಾರಸ್ಥರೇ ತಮ್ಮ ಅಂಗಡಿಗಳನ್ನು ನಿರ್ಮಿಸಿಕೊಳ್ಳಲಿದ್ದಾರೆ. ಆಗ ಪಾಲಿಕೆಯವರು ತಡೆಯಲು ಯತ್ನಿಸಿದರೆ ಉಗ್ರ ಹೋರಾಟ ನಡೆಸುವುದಾಗಿ ತಮಟಗಾರ ಎಚ್ಚರಿಸಿದರು.


ಪಾಲಿಕೆ ಸದಸ್ಯ ಶಂಭುಗೌಡ ಸಾಲಮನಿ, ಕಾಂಗ್ರೆಸ್ ಮುಖಂಡ ಪರಮೇಶ್ವರ ಕಾಳೆ, ಜಾವೇದ ಟಿನ್‌ವಾಲೆ ಮತ್ತಿತರರು ಈ ಸಂದರ್ಭದಲ್ಲಿದ್ದರು.

administrator

Related Articles

Leave a Reply

Your email address will not be published. Required fields are marked *