ಬೆಂಗಳೂರು : ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಬೇಕು. ಸರ್ಕಾರದ ವಸ್ತ್ರ ಸಂಹಿತೆ ನೀತಿಯನ್ನು ಪ್ರಶ್ನಿಸುವಂತಿಲ್ಲ ಎಂದು ಹೈಕೋರ್ಟ್ ಪೂರ್ಣ ಪೀಠ ಇಂದು ಮಹತ್ವದ ತೀರ್ಪು ಪ್ರಕಟಿಸಿದೆ.
“ಕಾಲೇಜು ತರಗತಿಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಬೇಕು” ಎಂಬ ಸಾರ್ವಜನಿಕ ಹಿತಾಸಕ್ತಿ ಮನವಿಗಳನ್ನು ಹೈಕೋರ್ಟ್ ಸಾರಾಸಗಟಾಗಿ ತಿರಸ್ಕರಿಸಿದೆಯಲ್ಲದೇ ಹಿಜಾಬ್‌ಗೆ ನಿರ್ಬಂಧ ವಿಧಿಸಿದ್ದನ್ನು ಪ್ರಶ್ನಿಸಿ ಉಡುಪಿಯ ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಪೀಠ ವಜಾ ಮಾಡಿದೆ.
ಹಿಜಾಬ್ ಧರಿಸುವುದು ಇಸ್ಲಾಂನ ಅತ್ಯಗತ್ಯ ಭಾಗವಲ್ಲ. ಸಮವಸ್ತ್ರ ಸಂಹಿತೆ ಕುರಿತಾಗಿ ಸರ್ಕಾರದ ಆದೇಶ ಕಾನೂನು ಬದ್ಧವಾಗಿದೆ. ಇದನ್ನು ಪ್ರಶ್ನಿಸು ವಂತಿಲ್ಲ ಎಂದು ತೀರ್ಪಿನಲ್ಲಿ ಹೇಳಲಾಗಿದೆ.
ಈ ಕುರಿತಂತೆ ಕಾಯ್ದಿರಿಸಲಾಗಿದ್ದ ತೀರ್ಪನ್ನು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ, ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಹಾಗೂ ನ್ಯಾಯಮೂರ್ತಿ ಜೈಬುನ್ನೀಸಾ ಮೊಹಿಯುದ್ದೀನ್ ಖಾಜಿ ಅವರನ್ನು ಒಳಗೊಂಡ ವಿಸ್ತೃತ ನ್ಯಾಯಪೀಠ ಇಂದು ಬೆಳಿಗ್ಗೆ 10.35ಕ್ಕೆ ಪ್ರಕಟಿಸಿತಲ್ಲದೇ 8 ನಿಮಿಷದಲ್ಲಿ ತೀರ್ಪು ಓದಿ ಮುಗಿಸಿತು.
ಕಾಲೇಜುಗಳಲ್ಲಿ ಹಿಜಾಬ್ ನಿರ್ಬಂಧಿಸಿರುವ ಕ್ರಮ ಹಾಗೂ ಶಿಕ್ಷಣ ಸಂಸ್ಥೆ ಗಳಲ್ಲಿ ವಸ್ತ್ರಸಂಹಿತೆ ಜಾರಿ ಸಂಬಂಧ ಕಳೆದ ಫೆ.೫ರಂದು ಸರ್ಕಾರ ಹೊರಡಿ ಸಿದ್ದ ಆದೇಶ ಪ್ರಶ್ನಿಸಿ 10ಕ್ಕೂ ಅಧಿಕ ಅರ್ಜಿಗಳು ಹಾಗೂ ಮಧ್ಯಂತರ ಅರ್ಜಿಗಳು ಸಲ್ಲಿಕೆಯಾಗಿದ್ದವು. ಸತತ 11 ದಿನ ವಾದ-ಪ್ರತಿವಾದ ಆಲಿಸಿದ್ದ ಪೂರ್ಣಪೀಠ ಫೆ.25ರಂದು ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿತ್ತು. ಇಂದು ತೀರ್ಪು ಪ್ರಕಟಿಸುವ ಮೂಲಕ ಹಿಜಾಬ್ ವಿವಾದಕ್ಕೆ ತಾರ್ಕಿಕ ಅಂತ್ಯ ಹಾಡಿದೆ.