ಹುಬ್ಬಳ್ಳಿ-ಧಾರವಾಡ ಸುದ್ದಿ
ಸಾರಿಗೆ ನೌಕರರ ಇತರ ಬೇಡಿಕೆ ಈಡೇರಿಸಿ: ಪಿ.ಎಚ್.ನೀರಲಕೇರಿ ಮನವಿ

ಸಾರಿಗೆ ನೌಕರರ ಇತರ ಬೇಡಿಕೆ ಈಡೇರಿಸಿ: ಪಿ.ಎಚ್.ನೀರಲಕೇರಿ ಮನವಿ

ಧಾರವಾಡ: ಸಾರಿಗೆ ಸಂಸ್ಥೆಯ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸುವುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಸರಕಾರ ಈಡೇರಿಸಬೇಕು ಎಂದು ವಾಕರಾರ ಸಂಸ್ಥೆಯ ನೌಕರರ ಕೂಟದ ಗೌರವ ಅಧ್ಯಕ್ಷ ಪಿ.ಎಚ್.ನೀರಲಕೇರಿ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.


ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕು ವರ್ಷಗಳಿಂದ ಸಂಸ್ಥೆಯ ನೌಕರರು ತಮ್ಮ ವಿವಿಧ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹೋರಾಟ ಮಾಡುತ್ತ ಬಂದಿದ್ದಾರೆ. ಸರಕಾರ ತಮ್ಮ ಬೇಡಿಕೆಗಳನ್ನು ಈಡೇರಿಸದ ಪರಿಣಾಮ ಇತ್ತೀಚೆಗೆ ಮುಷ್ಕರ ಕೂಡ ನಡೆಸಿದ್ದರು.
ಈ ಸಂದರ್ಭದಲ್ಲಿ ಸರಕಾರದಿಂದ ನೌಕರರ ವರ್ಗಾವಣೆ, ಅಮಾನತ್ ಮತ್ತು ವಜಾ ಕೂಡ ಮಾಡಲಾಗಿತ್ತು. ಅಲ್ಲದೇ ಮುಷ್ಕರನಿರತ ಕೆಲವು ನೌಕರರ ಮೇಲೆ ಪೊಲೀಸ್ ಪ್ರಕರಣಗಳನ್ನು ದಾಖಲಿಸಲಾಗಿದೆ. ಇದರಿಂದ ನೌಕರರು ಮತ್ತಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಈ ಕುರಿತು ಹಲವು ಬಾರಿ ಮನವಿ ಸಹ ಮಾಡಲಾಗಿತ್ತು. ಜೊತೆಗೆ ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಹುಬ್ಬಳ್ಳಿಯಲ್ಲಿ ಭೇಟಿ ಮಾಡಿ, ನೌಕರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗಿತ್ತು.
ನಮ್ಮ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ನೌಕರರ ಸಮಸ್ಯೆಗಳಿಗೆ ಆದ್ಯತೆ ನೀಡುವಂತೆ ಸಾರಿಗೆ ಸಚಿವರಾದ ಬಿ.ಶ್ರೀರಾಮುಲು ಅವರಿಗೆ ಸೂಚಿಸಿದ್ದರು. ಮುಖ್ಯಮಂತ್ರಿಗಳ ಸೂಚನೆಯ ಜೊತೆಗೆ ಹೆಚ್ಚಿನ ಮುತುವರ್ಜಿವಹಿಸಿದ ಸಚಿವರು ಈಗಾಗಲೇ ಅಧಿಕಾರಿಗಳ ಮಟ್ಟದಲ್ಲಿ ಹಲವು ಸುತ್ತಿನ ಸಭೆಗಳನ್ನು ನಡೆಸಿದ್ದಾರೆ.
ಮುಷ್ಕರ ಸಂದರ್ಭದಲ್ಲಿ ವರ್ಗಾವಣೆ ಮತ್ತು ಅಮಾನತ್ ಮಾಡಿದ ನೌಕರರ ಮೇಲಿನ ಕ್ರಮಗಳನ್ನು ವಾಪಸ್ ಪಡೆಯಲು ಸಚಿವರು ಕಳೆದ ಸೋಮವಾರ ತೀರ್ಮಾನಿಸಿ ಆದೇಶ ಕೂಡ ಹೊರಡಿಸಿದ್ದಾರೆ. ನೌಕರರ ಹಿತದೃಷ್ಠಿಯಿಂದ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿಗಳು ಮತ್ತು ಸಚಿವರ ಕ್ರಮವನ್ನು ಸ್ವಾಗತಿಸುತ್ತೇವೆ.
ಇದರ ಜೊತೆಗೆ ನೌಕರರನ್ನು ವಜಾಗೊಳಿಸಿದ ಆದೇಶವನ್ನು ಹಿಂಪಡೆಯುವ ಮೂಲಕ ನೌಕರರು ನೆಮ್ಮದಿಯಿಂದ ಕರ್ತವ್ಯ ನಿರ್ವಹಿಸಲು ಅನುಕೂಲ ಮಾಡಿಕೊಡಬೇಕು.
ಹೆಚ್ಚುವರಿ ಸೇವೆ ಭತ್ಯೆಯ ಲಭ್ಯತೆಯ ಬಗ್ಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು. ನೌಕರರ ವಿಮಾ ಕಂತುಗಳನ್ನು ಸಕಾಲಕ್ಕೆ ಪಾವತಿಸುವ ವ್ಯವಸ್ಥೆ ಮಾಡಬೇಕು. ಭವಿಷ್ಯ ನಿಧಿಗೆ ಸಂಸ್ಥೆಯ ವಂತಿಗೆಯನ್ನು ಸಕಾಲಕ್ಕೆ ಭರ್ತಿ ಮಾಡುವ ಜೊತೆಗೆ ದುರುಪಯೋಗವನ್ನು ತಡೆಯಲು ಅಗತ್ಯ ಕ್ರಮ ಕೈಕೊಳ್ಳಬೇಕು. ಸರಕಾರದ ಇತರ ಇಲಾಖೆಯ ನೌಕರರಂತೆ ಸಾರಿಗೆ ಸಂಸ್ಥೆಯ ನೌಕರರನ್ನು ಸಮಾನಾಂತರವಾಗಿ ಪರಿಗಣಿಸಿ, ವೇತನ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಒದಗಿಸಬೇಕು.
ಸಂಸ್ಥೆಯ ನೌಕರರ ಹಿತಕ್ಕೆ ಶ್ರಮಿಸುತ್ತಿರುವ ನೌಕರರ ಎಲ್ಲ ಸಂಘಟನೆಗಳನ್ನು ಯಾವುದೇ ತಾರತಮ್ಯ ಇಲ್ಲದೇ ಒಂದೇ ತೆರನಾಗಿ ಪರಿಗಣಿಸಬೇಕು. ಪ್ರಮುಖವಾಗಿ ನೌಕರರ ಶೋಷಣೆ ತಪ್ಪಿಸುವ ದಿಸೆಯಲ್ಲಿ ಅಧಿಕಾರಿಗಳು ಕಾರ್ಯೋನ್ಮುಖವಾಗಲು ಸಚಿವರು ಸೂಕ್ತ ಆದೇಶ ನೀಡಬೇಕು ಎಂದು ನೀರಲಕೇರಿ ಆಗ್ರಹಿಸಿದರು.
ವಿ.ಜಿ.ಕೊಂಗವಾಡ, ಎ.ಎಚ್.ಜಾಗೀರದಾರ ಸುದ್ದಿಗೋಷ್ಠಿಯಲ್ಲಿದ್ದರು.

 

administrator

Related Articles

Leave a Reply

Your email address will not be published. Required fields are marked *