ಹುಬ್ಬಳ್ಳಿ-ಧಾರವಾಡ ಸುದ್ದಿ

22ನೇ ಮೇಯರ್: ಬಹುಸಂಖ್ಯಾತರಿಗೆ ನೀಡಲು ಬಿಜೆಪಿ ಚಿಂತನೆ

ಸಂಜೆಯೊಳಗೆ ಅಖೈರು, ಜ್ಯೋತಿ, ಮೀನಾಕ್ಷಿ ಮಧ್ಯೆ ಪೈಪೋಟಿ

ಮತ್ತೊಮ್ಮೆ ಪ್ರಥಮ ಪ್ರಜೆ ಧಾರವಾಡ ಪಾಲು?

ಸಂಖ್ಯಾಬಲಕ್ಕೆ ಕೈ ಕಸರತ್ತು

ಸಂಕನೂರ ಮತಕ್ಕೆ ಅವಕಾಶ 

ವಿನಯ್ ಧಾರವಾಡ ಎಂಟ್ರಿಗೆ ಅವಕಾಶವಿಲ್ಲ

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯ 22ನೇ ಮೇಯರ್ ಹಾಗೂ ಉಪಮೇಯರ್ ಆಯ್ಕೆಗಾಗಿ ನಾಳೆ ಚುನಾವಣೆ ನಡೆಯಲಿದ್ದು ಆಡಳಿತಾರೂಢ ಬಿಜೆಪಿಯೇ ಅಧಿಕಾರದ ಗದ್ದುಗೆ ಹಿಡಿಯಲು ಮುಂಚೂಣಿಯಲ್ಲಿದ್ದು ಬಹುಸಂಖ್ಯಾತ ಸಮುದಾಯದವರು ಹಾಗೂ ಪಶ್ಚಿಮ ಕ್ಷೇತ್ರದವರು ಮೇಯರ್ ಆಗುವುದು ಪಕ್ಕಾ ಎನ್ನಲಾಗುತ್ತಿದೆ.


ಕಾಂಗ್ರೆಸ್ ಆಮಿಷದ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಅವರಿಗೆ ಬೆಂಬಲ ನೀಡಿರುವ ಪಕ್ಷೇತರ ಸದಸ್ಯರು ದಾಂಡೇಲಿಯ ರೆಸಾರ್ಟನಲ್ಲಿ ವಾಸ್ತವ್ಯ ಹೂಡಿದ್ದು ಮಧ್ಯಾಹ್ನ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಗಮಿಸಿದ ನಂತರ ಚಟುವಟಿಕೆ ವೇಗ ಪಡೆಯಲಿದೆ.
ಅಧಿಕಾರ ಹಿಡಿಯಲು ಕಾಂಗ್ರೆಸ್ ಕಸರತ್ತು ನಡೆಸಿದೆಯಾದರೂ 42ರ ಗಡಿ ದಾಟುವ ಸಾಧ್ಯತೆಯಿಲ್ಲ. ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಮತ ಚಲಾವಣೆಗೂ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿರುವ ಹಿನ್ನೆಲೆಯಲ್ಲಿ ಅಲ್ಲದೇ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮತ ಹಾಕಬಹುದಾಗಿದ್ದು ಕೇಸರಿ ಪಡೆ ಒಟ್ಟು 48 ಸದಸ್ಯರ ಬಲದ ಲೆಕ್ಕಾಚಾರ ಹೊಂದಿದ್ದು ದೊಡ್ಡ ಪವಾಡವೇ ನಡೆದಲ್ಲಿ ಮಾತ್ರ ಏರುಪೇರಾಗಬಹುದು. ಇಲ್ಲದಿದ್ದರೆ ಪ್ರಸಕ್ತ ಅವಧಿಯ ಎರಡನೇ ಬಾರಿಯೂ ಕಮಲ ಬಾವುಟ ಹು.ಧಾ.ಪಾಲಿಕೆ ಕಚೇರಿ ಮೇಲೆ ಹಾರುವುದು ನಿಶ್ಚಿತ.


ಕಳೆದ ರಾತ್ರಿ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಸಹ ರೆಸಾರ್ಟ್‌ನಲ್ಲಿ ತಂಗಿರುವ ತಮ್ಮ ಪಕ್ಷದ ಸದಸ್ಯರನ್ನು ಭೇಟಿಯಾಗಿ ಈ ಬಾರಿ ಪಶ್ಚಿಮ ಕ್ಷೇತ್ರದವರಿಗೆ ಪಟ್ಟ ಕಟ್ಟುವಂತೆ ಬಿಗಿ ಪಟ್ಟು ಹಿಡಿದಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ಬಾರಿ ಬಹುಸಂಖ್ಯಾತ ಲಿಂಗಾಯತ ಸಮುದಾಯಕ್ಕೆ ಮಣೆ ಹಾಕುವ ಸೂತ್ರಕ್ಕೆ ಬಂದಿದೆ ಎನ್ನಲಾಗಿದ್ದು,ಈ ಸೂತ್ರದ ಅಡಿಯೇ ಮುಂದಿನ ತಂತ್ರಗಾರಿಕೆ ನಡೆಯಲಿದೆ.


ಪಶ್ಚಿಮ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 19ನೇ ವಾರ್ಡಿನ ಜ್ಯೋತಿ ಪಾಟೀಲ, ಸೆಂಟ್ರಲ್ ವ್ಯಾಪ್ತಿಯ ಮೀನಾಕ್ಷಿ ವಂಟಮೂರಿ(57) ಇವರ ನಡುವೆ ಪೈಪೋಟಿಯಿದ್ದು ಅಂತಿಮ ಕ್ಷಣದಲ್ಲಿ ಶಾಸಕ ಮಹೇಶ ಟೆಂಗಿನಕಾಯಿಯವರ ವಾರ್ಡ್ ಆಗಿರುವ 49ನೇ ವಾರ್ಡಿನ ವೀಣಾ ಭರದ್ವಾಡರ ಹೆಸರು ಪರಿಗಣನೆಗೆ ಬಂದರೂ ಅಚ್ಚರಿಯಿಲ್ಲ. ಸ್ವತಃ ಶಾಸಕ ಬೆಲ್ಲದ ಜ್ಯೋತಿ ಪಾಟೀಲ ಪರ ಬ್ಯಾಟಿಂಗ್ ಮಾಡಿದ್ದು, ಹಾಲಿ ಮೇಯರ್ ಈರೇಶ ಅಂಚಟಗೇರಿ ಅವರು ಓಕೆ ಎನ್ನಬಹುದಾಗಿದ್ದು ಜೋಶಿಯವರ ನಿರ್ಧಾರದ ಮೇಲೆ ನಿಶ್ಚಯವಾಗಲಿದೆ.
ಇಂದು ದಾಂಡೇಲಿ ರೆಸಾರ್ಟನಲ್ಲೇ ಬಿಜೆಪಿ ಸಭೆ ನಡೆಯಲಿದ್ದು ನಾಳೆ ನಾಮಪತ್ರ ಸಲ್ಲಿಸುವ ವೇಳೆಗೆ ಧಾರವಾಡ ಪಾಲಿಕೆಗೆ ಕಮಲ ಸದಸ್ಯರು ಕಾಲಿಡುವಂತೆ ಎಲ್ಲ ಸಿದ್ದತೆ ಮಾಡಿಕೊಳ್ಳಲಾಗಿದೆ.

ಸಂಖ್ಯಾಬಲಕ್ಕೆ ಕೈ ಕಸರತ್ತು

ಕಾಂಗ್ರೆಸ್ ಪಾಳೆಯವು ಪಾಲಿಕೆ ವಶಕ್ಕೆ ಕಸರತ್ತು ನಡೆಸಿದ್ದು ಇಂದು ಸ್ವತಃ ಉಸ್ತುವಾರಿ ಸಚಿವ ಸಂತೋಷ ಲಾಡ ನೇತೃತ್ವದಲ್ಲಿ ಸಂಖ್ಯಾ ಬಲ ಹೊಂದಾಣಿಕೆಯ ಲೆಕ್ಕಾಚಾರ ನಡೆದಿದ್ದು ಎಲ್ಲ ಪಾಲಿಕೆ ಸದಸ್ಯರ ಅಭಿಪ್ರಾಯ ಆಲಿಸಲಾಗುತ್ತಿದೆ. ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರೂ ಭಾಗವಹಿಸಲಿದ್ದಾರೆನ್ನಲಾಗಿದೆ.


33ಸದಸ್ಯ ಬಲ ಹೊಂದಿರುವ ಕೈ ಪಡೆಗೆ ಇಬ್ಬರು ಪಕ್ಷೇತರರಾದ ಅಕ್ಷತಾ ಅಸುಂಡಿ, ಚೇತನ ಹಿರೇಕೆರೂರ ಬೆಂಬಲವಿದ್ದು ಮಂಜುನಾಥ ಬುರ್ಲಿ, ಜೆಡಿಎಸ್‌ನ ಲಕ್ಷ್ಮಿ ಹಿಂಡಸಗೇರಿ ಸೇರಿದಲ್ಲಿ 37 ಆಗಲಿದ್ದು ಎಂಐಎಂ ಸಂಪರ್ಕವನ್ನೂ ಮಾಡಿದ್ದು ಅವರ ಮತ ಸೇರಿದಲ್ಲಿ 40 ಆಗಲಿದೆ. ವಿನಯ ಕುಲಕರ್ಣಿಯವರ ಧಾರವಾಡ ಪ್ರವೇಶ ಅರ್ಜಿ ತಿರಸ್ಕೃತಗೊಂಡಿದ್ದು ಪ್ರಸಾದ ಅಬ್ಬಯ್ಯರನ್ನು ಸೇರಿಸಿದಲ್ಲಿ ೪೧ ಆಗಲಿದೆ. ಸುಮಾರು 7 ಮತಗಳು ಕಡಿಮೆಯಾಗಲಿದ್ದು ಒಂದೆರಡು ಮತಗಳನ್ನು ಕದಿಯುವ ಸಾಧ್ಯತೆ ಇದ್ದರೂ 3-4 ಮತಗಳ ಕೊರತೆಯಾಗಬಹುದಾಗಿದೆ. ಮೇಯರ್ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಸುವರ್ಣ ಕಲಕುಂಟ್ಲ ಅಥವಾ ಕವಿತಾ ಕಬ್ಬೇರ ಇಬ್ಬರ ಪೈಕಿ ಒಬ್ಬರು ಕಣಕ್ಕಿಳಿಯುವುದು ಖಚಿತ.

ಸಂಕನೂರ ಮತಕ್ಕೆ ಅವಕಾಶ 
ಹುಬ್ಬಳ್ಳಿ: ನಾಳೆ ನಡೆಯಲಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೇಯರ-ಉಪಮೇಯರ ಆಯ್ಕೆ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರೊ.ಎಸ್.ವಿ.ಸಂಕನೂರ ಅವರಿಗೆ ಮತದಾನ ಮಾಡಲು ಧಾರವಾಡ ಉಚ್ಛ ನ್ಯಾಯಾಲಯ ಅನುಮತಿ ನೀಡಿ ಆದೇಶಿಸಿದೆ.

ನಾಗಾನಂದ ಜಿ. ಜಸ್ಟ್ ಲಾ ಅಸೋಶಿಯೇಟ್ಸ್‌ನ ಹಿರಿಯ ಕೌನ್ಸಿಲರ್ ಶ್ರೀರಂಗ ಅವರ ನೇತೃದಲ್ಲಿ ನ್ಯಾಯವಾದಿಗಳಾದ ಸೋಮಶೇಖರ ಅಂಚಟಗೇರಿ, ಮೃತ್ಯುಂಜಯ ಹಳ್ಳಿಕೇರಿ, ಅರ್ಚನಾ ಜೋಶಿ ವಾದ ಮಂಡಿಸಿದ್ದರು.

ವಿನಯ್ ಧಾರವಾಡ ಎಂಟ್ರಿಗೆ ಅವಕಾಶವಿಲ್ಲ 

ಬೆಂಗಳೂರು : ಧಾರವಾಡ ಪ್ರವೇಶಕ್ಕೆ ಅವಕಾಶ ಕೋರಿ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಸಲ್ಲಿಸಿದ್ದ ಅರ್ಜಿ ಮತ್ತೊಮ್ಮೆ ತಿರಸ್ಕೃತವಾಗಿದ್ದು ಹು.ಧಾ.ಪಾಲಿಕೆ ಚುನಾವಣೆಯಲ್ಲಿ ಮತ ಹಾಕುವ ಅವರ ಆಸೆ ಈಡೇರದಂತಾಗಿದೆ.


ಧಾರವಾಡ ಜಿಲ್ಲಾ ಪ್ರವೇಶ ಕೋರಿ ಜನಪ್ರತಿನಿಗಳ ನ್ಯಾಯಲಯದ ಮುಂದೆ ಇಂದು ವಿಚಾರಣೆಗೆ ಬಂದ ಅರ್ಜಿಯನ್ನು ನ್ಯಾಯಾಲಯ ಮಾನ್ಯ ಮಾಡಿಲ್ಲವಾಗಿದ್ದು ಕ್ಷೇತ್ರಕ್ಕೆ ತೆರಳಲು ಅಲ್ಲದೇ ನಾಳೆ ನಡೆಯುವ ಮೇಯರ್ ಚುನಾವಣೆ ಮತದಾನದಿಂದ ವಂಚಿತರಾಗಬೇಕಿದೆ.

administrator

Related Articles

Leave a Reply

Your email address will not be published. Required fields are marked *