ಹುಬ್ಬಳ್ಳಿ-ಧಾರವಾಡ ಸುದ್ದಿ

50 ಲಕ್ಷ ಕಾಂಗ್ರೆಸ್ ಸದಸ್ಯತ್ವದ ಗುರಿ: ಸಲೀಮ್

ಧಾರವಾಡ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ ಸದಸ್ಯತ್ವ ನಡೆಯುತ್ತಿದ್ದು, 50 ಲಕ್ಷ ಸದಸ್ಯತ್ವ ಮಾಡುವ ಗುರಿ ಇದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೂತ್ ಮಟ್ಟದಲ್ಲಿ ಪಕ್ಷ ಗಟ್ಟಿಮಾಡುವ ಕೆಲಸ ನಡೆದಿದೆ. ಇದೀಗ ಡಿಜಿಟಲ್ ಸದಸ್ಯತ್ವ ಮಾಡುತ್ತಿದ್ದೇವೆ. ಒಟ್ಟು 60 ಸಾವಿರ ಬೂತ್ ಗಳಿದ್ದು, ಇವುಗಳಿಗೆ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ. ಮೈಕ್ರೋ ಮ್ಯಾನೇಜ್‌ಮೆಂಟ್ ಮೂಲಕ ಪಕ್ಷದ ಸಂಘಟನೆ ಮಾಡಲಿದ್ದೇವೆ. ಜೊತೆಗೆ ರಾಜ್ಯ, ಜಿಲ್ಲಾ, ಬ್ಲಾಕ್, ಬೂತ ಮಟ್ಟದಲ್ಲಿ ತರಬೇತಿ ಶಿಬಿರ ಹಮ್ಮಿಕೊಳ್ಳಲಿದ್ದೇವೆ. ಕೇಂದ್ರದ ಮಾಜಿ ಸಚಿವ ಸುದರ್ಶನ ನಾಚಿ ಸದಸ್ಯತ್ವ ನೊಂದಣಿ ಪರಿಶೀಲನೆಗೆ ಬರಲಿದ್ದಾರೆ ಎಂದರು.
ಇಂದು ನಗರದಲ್ಲಿ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರ ಜೊತೆ ಚರ್ಚೆ ನಡೆಸಿರುವೆ. ಬಳಿಕ ರೈತ ಸಂಘದ ಪದಾಧಿಕಾರಿಗಳು ಡಿ.ಕೆ.ಶಿವಕುಮಾರ ಮತ್ತು ಸಿದ್ದರಾಮಯ್ಯ ರನ್ನು ಭೇಟಿ ಮಾಡಲಿದ್ದಾರೆ. ರೈತ ಸಮಸ್ಯೆಗಳನ್ನು ಮುಂದಿನ ಚುನಾವಣೆಯ ಪ್ರಣಾಳಿಕೆಗೆ ಸೇರಿಸಲಾಗುವುದು. ಈ ಮೂಲಕ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ರಾಜ್ಯದಲ್ಲಿನ ಆಡಳಿತಾರೂಢ ಬಿಜೆಪಿ ಬಗ್ಗೆ ಜನ ಭ್ರಮನಿರಸನಗೊಂಡಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸಂಘಟನೆ ಮತ್ತು ಹೋರಾಟಗಳ ಮೂಲಕ ಜನರನ್ನು ತಲುಪಲಿದ್ದೇವೆ. ಇಡೀ ವರ್ಷ ಸರ್ಕಾರದ ವೈಫಲ್ಯತೆ, ಭ್ರಷ್ಟಾಚಾರವನ್ನು ಜನರಿಗೆ ತಲುಪಿಸಲಿದ್ದೆವೆ. ಹೀಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು.ಮೇಕದಾಟು ಯೋಜನೆ ಅನುಷ್ಠಾನಕ್ಕೆ ನಾವು ಹೋರಾಟ ಮಾಡುತ್ತಿದ್ದೇವೆ. ಮೂರು ವರ್ಷವಾದರೂ ಪರಿಸರ ಸಚಿವಾಲಯದ ಅನುಮತಿ ಪಡೆಯಲು ಸರಕಾರಕ್ಕೆ ಆಗಿಲ್ಲ.25 ಸಂಸದರಿದ್ದರೂ ಪರಿಸರ ಸಚಿವಾಲಯದ ಕ್ಲಿಯರೆನ್ಸ್ ಪಡೆಯಲು ಆಗಿಲ್ಲ. ಡಬಲ್ ಇಂಜಿನ್ ಸರ್ಕಾರ ಅಂತಾ ಹೇಳಿಕೊಂಡರೂ ಇವರಿಗೆ ಆ ಅನುಮತಿ ಪಡೆಯಲು ಆಗಿಲ್ಲ ಎಂದು ಛೇಡಿಸಿದರು. ಜಿಪಂ, ತಾಪಂ ಚುನಾವಣೆ ಬೇಗ ಮಾಡಬೇಕಿತ್ತು. ಆದರೆ, ಬಿಜೆಪಿಗೆ ಧೈರ್ಯವಿಲ್ಲ. ಈ ವಿಷಯದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಜನರ ವಿಶ್ವಾಸ ಕಳೆದುಕೊಂಡ ಪರಿಣಾಮ ಪಲಾಯನವಾದ ಮಾಡುತ್ತಿದ್ದಾರೆ ಎಂದರು. ಪರ್ಸೆಂಟೇಜ್ ಬಗ್ಗೆ ಗುತ್ತಿಗೆದಾರರು ಪ್ರಧಾನಿಗೆ ಬರೆದಿದ್ದರು. ಆದರೂ ಪ್ರಧಾನಿ ಒಂದೇ ಒಂದು ಪ್ರತಿಕ್ರಿಯೆ ಕೊಟ್ಟಿಲ್ಲ.ಮುಂದಿನ ದಿನಗಳಲ್ಲಿ ಈ ಸರ್ಕಾರವನ್ನು ನಾವು ಬೆತ್ತಲೆ ಮಾಡುತ್ತೇವೆ ಎಂದು ಗುಡುಗಿದರು.
ಪಂಚ ರಾಜ್ಯ ಫಲಿತಾಂಶ ಏನೇ ಆಗಲಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದರಲ್ಲದ ಭದ್ರಾವತಿ ಕ್ಷೇತ್ರದಲ್ಲಿ ಸೋತ ಸಿ.ಎಂ.ಇಬ್ರಾಹಿಂ ಅವರನ್ನು ಯೋಜನಾ ಆಯೋಗದ ಉಪಾಧ್ಯಕ್ಷ ಹಾಗೂ ಎರಡು ಸಲ ಎಂಎಲ್‌ಸಿ ಮಾಡಲಾಯಿತು. ಆದಾಗ್ಯೂ ಎಸ್.ಆರ್. ಪಾಟೀಲರನ್ನು ತೆಗೆದು ಪರಿಷತ್ ಪ್ರತಿಪಕ್ಷ ನಾಯಕ ಮಾಡಲು ಕೇಳಿದರು. ಪಕ್ಷ ಒಪ್ಪಲಿಲ್ಲ. ನಂತರ ಅಂದಿನಿಂದ ಎರಡು ವರ್ಷದಿಂದ ಅವರು ಪಕ್ಷದ ಚಟುಚಟಿಕೆಗಳಲ್ಲಿ ಪಾಲ್ಗೊಳ್ಳುತ್ತಿಲ್ಲ. ಆದರೂ ಅವರು ನಮ್ಮ ಪಕ್ಷದಲ್ಲಿಯೇ ಇರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ, ಕೆಪಿಪಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್.ನೀಲಕೇರಿ, ವಿಧಾನಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಬಸವರಾಜ ಗುರಿಕಾರ, ಮಾಜಿ ಮೇಯರ ದಾದನಪ್ಪ ಕಬ್ಬೇರ, ಮಾಜಿ ಯುವ ಕಾಂಗ್ರೆಸ್ ಅಧ್ಯಕ್ಷ ಸದಾನಂದ ಡಂಗನವರ ಇನ್ನಿತರರು ಸುದ್ದಿಗೋಷ್ಟಿಯಲ್ಲಿದ್ದರು.

administrator

Related Articles

Leave a Reply

Your email address will not be published. Required fields are marked *