ಲಿಂಗಾಯತರ ಅಗತ್ಯವಿಲ್ಲ – ಬಿಎಸ್‌ವೈ ಚಿರಂಜೀವಿಯಲ್ಲ
ಕೋಲಾಹಲ ಸೃಷ್ಟಿಸಿದ ವಿವಾದಾತ್ಮಕ ಹೇಳಿಕೆ
ಬೆಂಗಳೂರು: ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್ ಪ್ರಣಾಳಿಕೆಯ ಭಜರಂಗದಳ ನಿಷೇಧ ಯಡವಟ್ಟು ಬಿಜೆಪಿಗೆ ಅಸ್ತ್ರ ನೀಡಿರುವ ಬೆನ್ನ ಹಿಂದೆಯೇ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ ಹೇಳಿದ್ದಾರೆನ್ನುವ ಮಾತುಗಳು ಕೋಲಾಹಲ ಸೃಷ್ಟಿಸಿದ್ದು ಇಡೀ ಲಿಂಗಾಯತ ಸಮುದಾಯವೇ ತಿರುಗಿ ಬೀಳುವಂತಹ ವಾತಾವರಣ ಸೃಷ್ಟಿಯಾಗಿದೆ.
ನಾವು ಹಿಂದುತ್ವದಲ್ಲಿ ಮುಂದುವರಿಯುತ್ತೇವೆ. ಬಿಜೆಪಿಗೆ “ಲಿಂಗಾಯಿತ”ರ ಅಗತ್ಯವಿಲ್ಲ..”ಯಡಿಯೂರಪ್ಪ” ಚಿರಂಜೀವಿಯಲ್ಲ. ಪಕ್ಷ ಅವರನ್ನೇ ನಂಬಿ ಕೂರುವುದಿಲ್ಲ.ನಾವು ಇನ್ನೆಷ್ಟು ದಿನ ಲಿಂಗಾಯತರ ಓಲೈಕೆ ಮಾಡಿಕೊಂಡಿರಬೇಕು ಎಂದು ಬೆಂಗಳೂರು ಖಾಸಗಿ ಹೊಟೆಲ್‌ನಲ್ಲಿ ನಡೆದ ಸಭೆಯಲ್ಲಿ ಆಡಿದ ಮಾತುಗಳ ಸುದ್ದಿ ವೈರಲ್ ಆಗಿದ್ದು ವೀರಶೈವ ಲಿಂಗಾಯತ ಸಮುದಾಯದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ.
ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದು ಇದು ಸ್ವತಃ ಕೇಸರಿ ಪಾಳೆಯದಲ್ಲಿಯೇ ಸಂಚಲನ ಸೃಷ್ಟಿಸಿದೆ. ಯಡಿಯೂರಪ್ಪ ಇಲ್ಲದಿದ್ದರೂ ಪಕ್ಷ ನಡೆಯುತ್ತದೆ. .ಅವರನ್ನು ನೆಚ್ಚಿಕೊಂಡು ಪಕ್ಷವಿಲ್ಲ. ಬಿಜೆಪಿ ಹಿಂದುತ್ವದ ಮೇಲೆ ಸ್ಥಾಪಿತವಾಗಿರುವ ಪಕ್ಷವೇ ಹೊರತು ವ್ಯಕ್ತಿ ನಂಬಿಕೊಂಡಂತದ್ದಲ್ಲ ,ನಾವು ಹಿಂದುತ್ವದಲ್ಲಿ ಮುಂದುವರೆಯುತ್ತೇವೆ.ಬಿಜೆಪಿ ನಂಬಿಕೆ ಇಟ್ಟಿರುವುದೇ ಹಿಂದುತ್ವದಲ್ಲಿಯೇ ಹೊರತು ಯಾವುದೇ ಜಾತಿ ಮೇಲಲ್ಲ.ಹಾಗೂ ವ್ಯಕ್ತಿ ಮೇಲಲ್ಲ.ಲಿಂಗಾಯಿತರ ಮತಗಳು ಕೈ ತಪ್ಪಿ ಹೋದರೆ ನಮಗೇನೂ ತೊಂದರೆಯಿಲ್ಲ.ಬಿಜೆಪಿಗೆ ಲಿಂಗಾಯಿತರ ಅಗತ್ಯವಿಲ್ಲ. ಇಲ್ಲಿ ಯಾರೂ ಚಿರಂಜೀವಿಗಳಲ್ಲ. ಇಬ್ಬರು ಮಕ್ಕಳನ್ನು ಬೆಳೆಸಿದರೆ ಒಂದು ಸಮುದಾಯ ಬೆಳೆಯುತ್ತದೆಯೇ ಹೊರತು ಪಕ್ಷ ಬೆಳೆಯುವುದಿಲ್ಲ ಎಂದು ಹೇಳುವ ಮೂಲಕ ಯಡಿಯೂರಪ್ಪರಿಗೆ ಬಿ.ಎಲ್ ಸಂತೋಷ್ ಅಪಮಾನ ಮಾಡಿದ್ದಾರೆಂದು ಅವರ ಹೇಳಿಕೆಗೆ ಪಕ್ಷದೊಳಗೇ ವ್ಯಾಪಕ ಆಕ್ರೋಶ-ಅಸಮಾಧಾನ ವ್ಯಕ್ತವಾಗುತ್ತಿದೆ.
ಸಿಎಂ ಸ್ಥಾನದಿಂದ ಕೆಳಗಿಳಿಸಿದ ನಂತರ ಎಲ್ಲಾ ಮುನಿಸು ಮರೆತು ಪಕ್ಷ ಸಂಘಟನೆ ಮತ್ತು ಪ್ರಚಾರದಲ್ಲಿ ತೊಡಗಿದ್ದ ಯಡಿಯೂರಪ್ಪ ಮತ್ತೆ ತಟಸ್ಥರಾಗುವರೋ ಎಂಬಂತಹ ಸನ್ನಿವೇಶ ನಿರ್ಮಾಣವಾಗಿದೆ. ಇತ್ತೀಚೆಗೆ ಪಕ್ಷದಿಂದ ಹೊರಬಂದಿರುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತಮಗೆ ಟಿಕೆಟ್ ತಪ್ಪಲು ಸಂತೋಷ ಕಾರಣ.ಪಕ್ಷ ಕೆಲವರ ಕೈಯಲ್ಲಿದೆ ಎಂಬ ಹೇಳಿಕೆಯ ಬೆನ್ನ ಹಿಂದೆಯೇ ಸಂತೋಷ ಜಿ ಹೇಳಿಕೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು ಬಿಜೆಪಿಗೆ ದೊಡ್ಡ ಮಟ್ಟದ ಪೆಟ್ಟು ನಿಶ್ಚಿತ ಎನ್ನಲಾಗತ್ತಿದೆ.
ಬಿಜೆಪಿ ಬೆಳವಣಿಗೆಯಲ್ಲಿ ಯಡಿಯೂರಪ್ಪ ಅವರದು ಏನೂ ಪಾತ್ರವಿಲ್ಲ ಎನ್ನುವ ರೀತಿಯಲ್ಲಿ ಮಾತನಾಡಿರುವುದು ರಾಜ್ಯದ ಜನತೆಯನ್ನು ಅಸಮಾಧಾನ ಗೊಳಿಸಿದೆಯಲ್ಲದೇ ಪಕ್ಷಾತೀತವಾಗಿ ಯಡಿಯೂರಪ್ಪ ಅವರನ್ನು ಒಪ್ಪಿಕೊಳ್ಳುವವರಿಗೂ ಬೇಸರ ತರಿಸಿದೆ.ಎಲ್ಲಕ್ಕಿಂತ ಹೆಚ್ಚಾಗಿ ಸಂತೋಷ್ ಅವರ ವಿವಾದಾತ್ಮಕ ಹೇಳಿಕೆ ಈ ಬಾರಿಯ ಚುನಾವಣೆಯಲ್ಲಿ ಭಾರೀ ಅಡ್ಡ ಪರಿಣಾಮ ಉಂಟು ಮಾಡುವ ಆತಂಕವಿದೆ ಸೃಷ್ಟಿಯಾಗಿದೆ.
ಲಿಂಗಾಯಿತರ ಅವಶ್ಯಕತೆಯೇ ನಮಗಿಲ್ಲ.ಯಾರ ಹೆಸರನ್ನೂ ಉಲ್ಲೇಖಿಸದೇ ಯಾರೂ ಚಿರಂಜೀವಿಯಲ್ಲ ಎಂದು ಹಗುರವಾಗಿ ಮಾತನಾಡಿರುವುದರ ಪರಿಣಾಮ ಪಕ್ಷದ ಮೇಲೆ ಎಷ್ಟಾಗುತ್ತದೆ. ಪಕ್ಷವನ್ನು ಕೈ ಹಿಡಿಯುವವರು ಯಾವ್ ಸಮುದಾಯದವರು ಎನ್ನುವುದನ್ನ ಪರೀಕ್ಷಿಸಿಯೇ ಬಿಡೋಣ ಎಂದು ಯಡಿಯೂರಪ್ಪ ಬೆಂಬಲಿಗರು ಪಟ್ಟು ಹಿಡಿದಿದ್ದಾರೆನ್ನಲಾಗಿದೆ.
ಶೆಟ್ಟರ್, ಸವದಿ ಮುಂತಾದವರು ಹೊರ ಹೋಗಿರುವುದು ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಸಾಬೀತಾಗಿದ್ದು, ಸಭೆಯಲ್ಲಿ ರಾಜ್ಯದಲ್ಲಿ ಲಿಂಗಾಯತ ಮತ ಕೈ ತಪ್ಪಿದರೆ ಅಪಾಯ ಎಂದು ಧನಿ ಎತ್ತಿದ ಕಾರ್ಯಕರ್ತರ ಮಾತಿಗೆ ಸಂತೋಷ ಹೇಳಿದ ಮಾತುಗಳು ದೊಡ್ಡ ಮಟ್ಟದ ಡ್ಯಾಮೇಜ್‌ಗೆ ಕಾರಣವಾಗಿದೆ.