ಧಾರವಾಡ: ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ತಾವು ಸೋಲುತ್ತೇವೆ ಎಂಬ ಭಯ ಬಿಜೆಪಿಗರನ್ನು ಕಾಡುತ್ತಿದೆ. ಹೀಗಾಗಿಯೇ ವಿನಯ್ ಕುಲಕರ್ಣಿ ಅವರ ಬೆಂಬಲಿಗರ ಮೇಲೆ ಬಿಜೆಪಿ ಐಟಿ ಅಸ್ತ್ರ ಬಳಕೆ ಮಾಡುತ್ತಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಧಾರವಾಡ ತಾಲೂಕಿನ ತಡಕೋಡ, ಖಾನಾಪುರ, ಜೀರಿಗವಾಡ, ಕೊಟಬಾಗಿ ಹಾಗೂ ಕಲ್ಲೂರು ಗ್ರಾಮದಲ್ಲಿ ಬೃಹತ್ ರೋಡ್ ಶೋ ವೇಳೆ ಅವರು ಮಾತನಾಡಿದರು.
ವಿನಯ್ ಕುಲಕರ್ಣಿ ಅವರನ್ನು ಷಡ್ಯಂತ್ರದಿಂದ ಕ್ಷೇತ್ರದ ಹೊರಗಿಟ್ಟಿದ್ದರೂ ಕ್ಷೇತ್ರದ ಒಳಗೆ ಅವರ ಅಭಿಮಾನಿಗಳು ಅವರ ಮೇಲಿಟ್ಟ ಪ್ರೀತಿ, ವಿಶ್ವಾಸವನ್ನು ನೋಡಿ ಬಿಜೆಪಿಯವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ಅಲ್ಲದೇ ನಮ್ಮ ಬೆಂಬಲಿಗರ ಮನೆ ಮೇಲೆ ಐಟಿ ದಾಳಿ ನಡೆಸುವ ಮೂಲಕ ಹೊಟ್ಟೆಕಿಚ್ಚಿನ ರಾಜಕಾರಣ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ನಮ್ಮ ಕಾರ್ಯಕರ್ತರು ಯಾವುದಕ್ಕೂ ಹೆದರುವುದು ಬೇಡ. ಅವರ ಹಿಂದೆ ನಾವಿದ್ದೇವೆ. ನಾವು ಯಾವುದಕ್ಕೂ ಹೆದರುವುದಿಲ್ಲ. ಬಿಜೆಪಿಯ ಈ ಕುತಂತ್ರಿ ರಾಜಕಾರಣಕ್ಕೆ ಜನರೇ ಉತ್ತರ ಕೊಡಬೇಕು. ಇವಿಎಂ ಮಶಿನ್‌ನಲ್ಲಿರುವ ನಂಬರ್ 3 ರ ನೀಲಿ ಬಟನ್ ಒತ್ತುವ ಮೂಲಕ ವಿನಯ್ ಕುಲಕರ್ಣಿಗೆ ಮತ ನೀಡಿ ಕಾಂಗ್ರೆಸ್‌ನ್ನು 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಇತ್ತ ವಿನಯ್ ಕುಲಕರ್ಣಿ ಅವರ ಪುತ್ರ ಹೇಮಂತ ಕುಲಕರ್ಣಿ ಹಾಗೂ ಕಾಂಗ್ರೆಸ್ ಮುಖಂಡ ತವನಪ್ಪ ಅಷ್ಟಗಿ ಅವರು ಧಾರವಾಡ ತಾಲೂಕಿನ ಬೋಗೂರಿನಲ್ಲಿ ಚಕ್ಕಡಿ ಮೇಲೆ ರೋಡ್ ಶೋ ನಡೆಸುವ ಮೂಲಕ ಭರ್ಜರಿ ಮತಬೇಟೆ ನಡೆಸಿದರು.
ಈಶ್ವರ ಶಿವಳ್ಳಿ,ಭೀಮಪ್ಪ ಕಾಸಾಯಿ,ಮಡಿವಾಳಪ್ಪ ಅಂದೂರ,ಬಾಳಪ್ಪ ಅಬ್ಬಾರ,ಬಸಯ್ಯ ಮೇಟಿ,ವಿಜಯ ಕುರಕುರಿ,ಮುದಕಪ್ಪ ಮೋಜೂನವರ,ಸುಭಾಸ ದೊಡಮನಿ,ಮೈಲಾರ ದೇವಲಾಪೂರ,ಕಾರ್ತಿಕ ಗೋಕಾಕ,ಸಂಪತ್ತ ಹಂದೂರ ಇದ್ದರು.