’ಸಂತೋಷ’ ದಿಂದ ಕುಣಿದಾಡಿದ ಯುವಕರು
ಧಾರವಾಡ: ಸ್ವಾತಂತ್ರೋತ್ಸವದ ಅಂಗವಾಗಿ ಸಂತೋಷ ಲಾಡ್ ಫೌಂಡೇಶನ್ ವತಿಯಿಂದ ನಗರದ ಕರ್ನಾಟಕ ಕಾಲೇಜು ಮೈದಾನದಲ್ಲಿ ರವಿವಾರ ಸಂಜೆ ಆಯೋಜಿಸಿದ್ದ ವಿಶೇಷ ಲೇಸರ್ ಶೋ ಹಾಗೂ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಧಾರವಾಡದ ಹಿರಿಯ ಸಾಹಿತಿಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಈ ವೇಳೆ ಸಾಹಿತ್ಯ, ಆರೋಗ್ಯ, ಶಿಕ್ಷಣ, ಕಲೆ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಹಾಗೂ ನಿವೃತ್ತ ಯೋಧರಿಗೆ ಸನ್ಮಾನ ಮಾಡಲಾಯಿತು.
ಬಳಿಕ ಪರಂಪರೆಯನ್ನು ಪ್ರತಿಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಈ ಸಂದರ್ಭದಲ್ಲಿ ಸಾಹಿತಿ ಡಾ. ವಿ. ನಾಗೇಂದ್ರ ಪ್ರಸಾದ್, ಗಾಯಕಿ ಎಂ.ಡಿ. ಪಲ್ಲವಿ, ಇಂಡಿಯನ್ ಐಡಲ್- 18ರ ವಿಜೇತ ಗಾಯಕ ಸಲ್ಮಾನ್ ಅಲಿ ಅವರಿಂದ ಜರುಗಿದ ಸಂಗೀತ ಕಾರ್ಯಕ್ರಮ ಪ್ರೇಕ್ಷಕರನ್ನು ರಂಜಿಸಿತು. ಜೊತೆಗೆ ಫ್ಯಾಷನ್ ಗುರು ಪ್ರಸಾದ್ ಬಿದ್ದಪ್ಪ ಅವರ ತಂಡದಿಂದ ಸಂಸ್ಕೃತಿ ಹಾಗೂ ಪರಂಪರೆಯನ್ನು ಪ್ರತಿಬಿಂಬಿಸುವ ಫ್ಯಾಷನ್ ಶೋದಲ್ಲಿ 15ಕ್ಕೂ ಹೆಚ್ಚು ಮಿಸ್ ಇಂಡಿಯಾ ಸ್ಪರ್ಧಾಳುಗಳು ಭಾಗವಹಿಸಿ, ಇಳಕಲ್, ಮೊಳಕಾಲ್ಮೂರು, ಮೈಸೂರು ಸೀರೆಗಳನ್ನುಟ್ಟು ಹೆಜ್ಜೆ ಹಾಕಿದರು.
ಮಳೆಯಲ್ಲಿ ವೀಕ್ಷಣೆ
ಕರ್ನಾಟಕ ಕಾಲೇಜು ಮೈದಾನದಲ್ಲಿ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಲು ಸಾವಿರಾರು ಜನರು ಜಮಾಯಿಸಿದ್ದರು. ಆದರೆ, ಆಗಾಗ ಮಳೆ ಬಂದರೂ ಪ್ರೇಕ್ಷಕರು ಮಾತ್ರ ಖುರ್ಚಿಗಳನ್ನು ತಲೆ ಮೇಲೆ ಎತ್ತಿ ಹಿಡಿದುಕೊಂಡೆ ಕಾರ್ಯಕ್ರಮ ವೀಕ್ಷಿಸಿ ದರು.