ಹುಬ್ಬಳ್ಳಿ: ಆರೋಗ್ಯ ಸಂರಕ್ಷಿಸುವ ವಿನೂತನ ತಳಿಗಳಾದ ಬಕ್ವಿಟ್, ಸೋನಾಮೋತಿ ಗೋಧಿ ಹಾಗೂ ಕಪ್ಪು ಗೋಧಿಯನ್ನು ನರಗುಂದದ ಶಿರೋಳ ಗ್ರಾಮದಲ್ಲಿ ಪರಿಚಯಿಸಿದ್ದು, ರೈತರಿಗೆ ಬಿತ್ತನೆ ಬೀಜ ಕೊಟ್ಟು ಇಳುವರಿ ತೆಗೆಯುವ ವ್ಯವಸ್ಥೆ ಮಾಡಲಾಗುತ್ತಿದೆ. ಇವು ಹಳೆಯ ಕಾಲದ ಗೋಧಿ ಬೆಳೆಯಾಗಿದೆ ಎಂದು ನ್ಯಾಯವಾದಿ, ಪ್ರಗತಿಪರ ರೈತ ಮೃತ್ಯುಂಜಯ ವಸ್ತ್ರದ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಕ್ವಿಟ್ ಗೋಧಿಯನ್ನು ಎಕರೆಗೆ 12 ಕೆಜಿ ಬೀಜ ಬಿತ್ತನೆ ಮಾಡಿದರೆ, 5 ಕ್ವಿಂಟಾಲ್ ಇಳುವರಿ ತೆಗೆಯಬಹುದು. ಸೋನಾಮೋತಿ ಗೋಧಿ ಬೀಜವನ್ನು ಎಕರೆಗೆ 30ಕೆಜಿ ಬಳಸಿದರೆ 3-4 ಕ್ವಿಂಟಾಲ್, ಕಪ್ಪು ಗೋಧಿ ಬೀಜವನ್ನು ಎಕರೆಗೆ 22-25 ಕೆಜಿ ಬಿತ್ತನೆ ಮಾಡಿದರೆ,3-4 ಕ್ವಿಂಟಾಲ್ ಉತ್ಪನ್ನ ತೆಗೆಯಬಹುದು ಎಂದರು.ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಈ ಬಿತ್ತನೆ ಬೀಜಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯಿಸಿಕೊಂಡೆ. ಇದರ ಬಹುಪಯೋಗಿಯನ್ನೂ ಅರಿತಿದ್ದೇನೆ. ಹಾಗಾಗಿ ಇವುಗಳ ಬಿತ್ತನೆಗೆ ಜಾಗೃತಿ ಮೂಡಿಸುತ್ತಿದ್ದೇನೆ ಎಂದು ತಿಳಿಸಿದರು.
ಧಾರವಾಡ ಕೃಷಿ ವಿಶ್ವವಿದ್ಯಾಲಯಕ್ಕೂ ಈ ಕುರಿತು ಮಾಹಿತಿ ನೀಡಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಸ್ಪಂದನೆ ಸಿಕ್ಕಿಲ್ಲ. ಮತ್ತೊಮ್ಮೆ ವಿಶ್ವವಿದ್ಯಾಲಯದ ಗಮನಕ್ಕೆ ತರಲಾಗುವುದು. ಮಾರುಕಟ್ಟೆಗೆ ವ್ಯವಸ್ಥೆ ಮಾಡಲಾಗುವುದು ಎಂದರು.