ಧಾರವಾಡ : ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿನ ಶಿಕ್ಷಕೇತರ ಸಿಬ್ಬಂದಿ ನೇಮಕಕ್ಕೆ ಸಂಬಂಧಿಸಿದ ಲಿಖಿತ ಪರೀಕ್ಷೆಯಲ್ಲಿ ನಿಯಮಾವಳಿಗಳನ್ನು ಉಲ್ಲಂಘಿಸಿದ ಆರೋಪ ಕೇಳಿ ಬಂದಿದೆ.ಭಾನುವಾರ ಸಹಾಯಕ, ಸಹಾಯಕ ಕಂ. ಕಂಪ್ಯೂಟರ್ ಆಪರೇಟರ್ ಹುದ್ದೆಗಳಿಗೆ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಕ್ರಮ ನಡೆಸಿದ ಶಂಕೆ ವ್ಯಕ್ತವಾಗಿದೆ.ಬೆಳಿಗ್ಗೆ 11 ರಿಂದ ಮಧ್ಯಾಹ್ನ 12.30ರ ವರೆಗೆ ನಡೆದ ಆಪ್ಟಿಟ್ಯೂಡ್/ಸಾಮಾನ್ಯ ಜ್ಞಾನ ಪ್ರಶ್ನೆ ಪತ್ರಿಕೆಯನ್ನು ಕೃಷಿ ವಿಶ್ವವಿದ್ಯಾಲಯದಲ್ಲೇ ಟೈಪ್ ಮಾಡಿದ್ದು, ಅಲ್ಲದೇ, ಕಾಯಂ ಹುದ್ದೆಗಳ ಭರ್ತಿಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಯನ್ನು ಪರೀಕ್ಷಾ ಪ್ರಾಧಿಕಾರ ನಡೆಸುವ ಬದಲು ಕೃಷಿ ವಿಶ್ವವಿದ್ಯಾಲಯವೇ ಆಂತರಿಕವಾಗಿ ನಡೆಸಿದ್ದು ಹಲವು ಗುಮಾನಿಗಳಿಗೆ ಕಾರಣವಾಗಿದೆ.ಪ್ರಶ್ನೆಪತ್ರಿಕೆ ಸ್ಥಳೀಯವಾಗಿ ಟೈಪಿಂಗ್ ಮಾಡಿಸಿದಂತಿದೆ. ಅಲ್ಲದೇ ಮೊದಲೇ ನೀಡಲಾಗಿದ್ದ ಪಠ್ಯಕ್ರಮ ಹೊರತುಪಡಿಸಿ ಪ್ರಶ್ನೆಪತ್ರಿಕೆ ಸಿದ್ಧಪಡಿಸಲಾಗಿದೆ.
ಪರೀಕ್ಷಾ ಕೇಂದ್ರಕ್ಕೆ ಪ್ರಶ್ನೆಪತ್ರಿಕೆಯ ಬಂಡಲ್ ತಂದು 2-3 ವಿದ್ಯಾರ್ಥಿಗಳ ಸಹಿ ಪಡೆದು ಬಂಡಲ್ ತೆರೆಯಬೇಕು. ಆದರೆ ಈ ಪ್ರಕ್ರಿಯೆ ನಡೆದಿಲ್ಲ. ಪ್ರತಿಯೊಂದು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಓಎಂಆರ್ ಶೀಟ್ ನೀಡಿ ಪರೀಕ್ಷೆ ಮುಗಿದ ನಂತರ ವಿದ್ಯಾರ್ಥಿಗಳಿಗೆ ಓಎಂಆರ್‌ನ ಒಂದು ಪ್ರತಿ ನೀಡಬೇಕು. ಆದರೆ ಪರೀಕ್ಷೆ ನಂತರ ನಕಲು ಪ್ರತಿ ನೀಡದಿರುವುದು ಅರ್ಹ ಮತ್ತು ಪ್ರಾಮಾಣಿಕ ಪರೀಕ್ಷಾರ್ಥಿಗಳನ್ನು ಆತಂಕಕ್ಕೆ ನೂಕಿದೆ.
2015 ರಿಂದ ಸಹಾಯಕ, ಸಹಾಯಕ ಕಂ. ಕಂಪ್ಯೂಟರ್ ಆಪರೇಟರ್ ಸೇರಿ ಒಟ್ಟು 60 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭವಾಗಿ ಸ್ಥಗಿತಗೊಂಡಿತ್ತು. ನಂತರ 2018 ರಲ್ಲಿ ಮತ್ತೇ ಅರ್ಜಿ ಆಹ್ವಾನಿಸಲಾಗಿದೆ. ಭಾನುವಾರ ನಡೆದ ಪರೀಕ್ಷೆಯಲ್ಲಿ 2018 ರಿಂದ 22 ವರೆಗೆ ಅರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ಅವಕಾಶ ಸಿಗಲಾರದಂತೆ ಮಾಡುವ ಹುನ್ನಾರ ನಡೆದಿದೆ.ಈ ಮೂಲಕ ಸ್ವಜನಪಕ್ಷಪಾತ, ಭ್ರಷ್ಟಾಚಾರ ಎಸಗುವ ಎಲ್ಲ ಸಾಧ್ಯತೆಗಳೂ ಹೆಚ್ಚಿದೆ.
ಇನ್ನು ಕೆಲವೇ ತಿಂಗಳುಗಳಲ್ಲಿ ತಮ್ಮ ಅವಧಿ ಪೂರ್ಣಗೊಳಿಸಲಿರುವ ಕುಲಪತಿ ಡಾ.ಮಹದೇವ ಚೆಟ್ಟಿ ಅವರ ಈ ನಡೆ ಇನ್ನಷ್ಟು ಅನುಮಾನ ಸೃಷ್ಠಿಸಿದೆ.ಹೀಗಾಗಿ ಈ ನೇಮಕಾತಿಯಲ್ಲಿ ಅರ್ಹರಿಗೆ ಅನ್ಯಾಯ ಆಗದಂತೆ ನಿಗಾವಹಿಸಬೇಕಿದೆ.
ನಿಯಮ ಉಲ್ಲಂಘಿಸಿಲ್ಲ
ಕೃಷಿ ವಿಶ್ವವಿದ್ಯಾಲಯದಲ್ಲಿನ ’ಸಿ’ ಗ್ರುಪ್ ಸಿಬ್ಬಂದಿ ನೇಮಕಕ್ಕೆ ಸಂಬಂಧಿಸಿದಂತೆ ನಡೆಸಿದ ಲಿಖಿತ ಪರೀಕ್ಷೆಯಲ್ಲಿ ಅಕ್ರಮ ನಡೆದಿಲ್ಲ. ನೇಮಕಾತಿಯ ಯಾವುದೇ ಹಂತದಲ್ಲಿಯೂ ನಿಯಮಗಳ ಉಲ್ಲಂಘನೆಗೆ ಅವಕಾಶ ಇರುವುದಿಲ್ಲ. ಎಲ್ಲ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲಾಗುವುದು. ಮತ್ತು ನಿಯಮಾವಳಿಗಳ ಪಾಲನೆ ಮಾಡಲಾಗುವುದು.
ಶಿವಾನಂದ ಕರಾಳೆ
ಕುಲಸಚಿವರು.