ಧಾರವಾಡ: ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಖಂಡಿಸಿ ಶಿಕ್ಷಕರ ಕಲ್ಯಾಣ ಸಂಘದ ಆಶ್ರಯದಲ್ಲಿ ಶಿಕ್ಷಕರು ನಡೆಸುತ್ತಿರುವ ಅನಿರ್ಧಿಷ್ಠಾವಧಿ ಧರಣಿ ಇಂದು ಒಂಬತ್ತನೆ ದಿನಕ್ಕೆ ಕಾಲಿಟ್ಟಿದೆ.
ತಮ್ಮ ಹಲವಾರು ವರ್ಷಗಳ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಶಿಕ್ಷಕರ ಕಲ್ಯಾಣ ಸಂಘದ ಆಶ್ರಯದಲ್ಲಿ ಶಿಕ್ಷಕರು ಧರಣಿ ನಡೆಸುತ್ತಿರುವ ಕೃವಿವಿ ಆಡಳಿತ ಭನವನದ ಎದುರಿನ ಸ್ಥಳಕ್ಕೆ ಶ್ರೀರಾಮ ಸೇನೆ ಮುಖಂಡ ಪ್ರಮೋದ ಮುತಾಲಿಕ ಭೇಟಿ ನೀಡಿ ಬೆಂಬಲವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಮೋದ ಮುತಾಲಿಕ ಅವರು, ಕೃಷಿ ವಿಶ್ವ ವಿದ್ಯಾಲಯ ಇತ್ತೀಚೆಗೆ ತನ್ನ ಘನತೆ ಕಳೆದುಕೊಳ್ಳುವ ಹಂತ ತಲುಪುತ್ತಿದೆ. ಐಡಿಪಿ ಯೋಜನೆಯಲ್ಲಿ ಅಪಾರ ಪ್ರಮಾಣದ ಭ್ರಷ್ಟಾಚಾರ ನಡೆದಿದೆ. ಈ ಬಗ್ಗೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ದಾಖಲೆ ಸಹಿತ ಗಮನಕ್ಕೆ ತಂದರೂ ಕುಲಪತಿಗಳಿಂದ
ಇದುವರೆಗೂ ಯಾವುದೇ ಕ್ರಮ ಜರುಗಿಸಲು ಸಾಧ್ಯವಾಗಿಲ್ಲ. ಇತ್ತೀಚೆಗೆ ಇಬ್ಬರು ಮಹಿಳಾ ಗುತ್ತಿಗೆ ನೌಕರರು ಅಪಘಾತದಲ್ಲಿ ಸಾವನ್ನಪ್ಪಿದ ಪ್ರಕರಣ ನಡೆದರೂ ತಪ್ಪಿತಸ್ಥರಿಗೆ ಶಿಕ್ಷೆ ಆಗಿಲ್ಲ. ಆರೋಪಿಗಳನ್ನು ಕುಲಪತಿಗಳೇ ರಕ್ಷಣೆ ಮಾಡುವ ಮೂಲಕ ವ್ಯವಸ್ಥೆಗೆ ದ್ರೋಹ ಬಗೆಯುತ್ತಿದ್ದಾರೆ.
ಅಲ್ಲದೇ ಶಿಕ್ಷಕರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಕುಲಪತಿಗಳು ಆಸಕ್ತಿ ತೋರಿಸುತ್ತಿಲ್ಲ. ಇದು ಕುಲಪತಿ ಡಾ.ಮಹಾದೇವ ಚೆಟ್ಟಿ ಅವರ ಶಿಕ್ಷಕ ವಿರೋಧಿ ಧೋರಣೆಗೆ ನಿರ್ದಶನವಾಗಿದೆ. ಇದೇ ವರ್ತನೆಯನ್ನು ಕುಲಪತಿ ಡಾ.ಮಹಾದೇವ ಚೆಟ್ಟಿ ಮುಂದುವರೆಸಿದರೆ ರಾಜ್ಯಾದ್ಯಂತ ಶ್ರೀರಾಮಸೇನೆ ವತಿಯಿಂದ ಹೋರಾಟ ನಡೆಸಲಾಗುವುದು ಎಂದು ಮುತಾಲಿಕ ಎಚ್ಚರಿಸಿದರು.
ಸಂಘದ ಅಧ್ಯಕ್ಷ ಡಾ.ಐ.ಕೆ.ಕಾಳಪ್ಪನವರ, ಪ್ರಧಾನ ಕಾರ್ಯದರ್ಶಿ ಡಾ.ಮಹಾಂತೇಶ ನಾಯಕ, ಡಾ.ರಾಮನಗೌಡ ಪಾಟೀಲ, ಡಾ. ಸಾಧನಾ ಕಲ್ಲೊಳ್ಳಿ, ಡಾ.ಬಿ.ಎಲ್.ಪಾಟೀಲ,ಡಾ.ಉಮೇಶ ಮುಕ್ತಾಮಠ,
ಡಾ. ಸುನೀತಾ, ಡಾ.ಲತಾ ಪೂಜಾರ, ಡಾ.ಪುನೀತಾ, ಡಾ.ಸುಮಾ ಬಿರಾದಾರ, ವೀಣಾ ಜಾಧವ, ಡಾ.ಮಂಜುಳಾ, ಡಾ.ಮಂಜುಳಾ ಮರಳಪ್ಪನವರ, ಡಾ.ಶೋಭಾ ಇಮ್ಮಡಿ, ಡಾ.ಎಂ.ಪಿ.ಶರ್ಮಾ, ಡಾ. ವಿ.ಎಸ್.ಕುಬಸದ ಮತ್ತಿತರರು ಧರಣಿಯಲ್ಲಿ ಭಾಗವಹಿಸಿದ್ದರು.