ಹುಬ್ಬಳ್ಳಿ-ಧಾರವಾಡ ಸುದ್ದಿ
ಚೆಟ್ಟಿ ವಿರುದ್ಧ ಸೊಲ್ಲೆತ್ತಿದವರಿಗೆ ಎತ್ತಂಗಡಿ ಭಾಗ್ಯ;  ಬಿಸಿಲಿನ ಬೇಗೆಯಲ್ಲೇ ಕೃಷಿ ಮೇಳಕ್ಕೆ ಮುಹೂರ್ತ

ಚೆಟ್ಟಿ ವಿರುದ್ಧ ಸೊಲ್ಲೆತ್ತಿದವರಿಗೆ ಎತ್ತಂಗಡಿ ಭಾಗ್ಯ; ಬಿಸಿಲಿನ ಬೇಗೆಯಲ್ಲೇ ಕೃಷಿ ಮೇಳಕ್ಕೆ ಮುಹೂರ್ತ

‘ಸಚಿವ’ರ ಪಾಲಿಗೆ ಹಿಂಡುವ ಎಮ್ಮೆಯಾದ ವಿವಿ

ಧಾರವಾಡ: ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಶಿಕ್ಷಕರ ಕಲ್ಯಾಣ ಸಂಘದ ಪದಾಧಿಕಾರಿಗಳನ್ನು ಕುಲಪತಿ ಡಾ.ಮಹಾದೇವ ಚೆಟ್ಟಿ ಅವರು ವರ್ಗಾವಣೆ ಮಾಡಿದ್ದಾರೆ. ಈ ಮೂಲಕ ಮೂಲಕ ಕೃಷಿ ವಿಶ್ವವಿದ್ಯಾಲಯದಲ್ಲಿ ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುವರನ್ನು ನಿಯಂತ್ರಿಸಲು ಮುಂದಾಗಿದ್ದಾರೆ.


ಶಿಕ್ಷಕರ ಕಲ್ಯಾಣ ಸಂಘದ ಅಧ್ಯಕ್ಷ ಸುನೀಲ್ ಕರಿಕಟ್ಟಿ, ಉಪಾಧ್ಯಕ್ಷ ಡಾ.ಆರ್.ಎಚ್.ಪಾಟೀಲ, ಕಾರ್ಯದರ್ಶಿ ಡಾ.ಮಹಾಂತೇಶ ನಾಯಕ, ಕಾರ್ಯಕಾರಿ ಮಂಡಳಿ ಸದಸ್ಯರಾದ ಡಾ.ರಾಮನಗೌಡ ಪಾಟೀಲ, ಪ್ರೊ.ಮಂಜುಳಾ ಎನ್. ಮತ್ತು ನಾಗಪ್ಪ ಗೋವನಕೊಪ್ಪ ಅವರನ್ನು ಎತ್ತಂಗಡಿ ಮಾಡಿದ್ದಾರೆ.
ಬಡ್ತಿ, ಜೇಷ್ಠತಾ ಪಟ್ಟಿ, ಪಿಂಚಣಿ, ಇತರೆ ವಿಶ್ವವಿದ್ಯಾಲಯಗಳಲ್ಲಿ ಸಲ್ಲಿಸಿದ ಸೇವೆ ಪರಿಗಣನೆ, ನಿವೃತ್ತಿ ವಯೋಮಿತಿ ಏರಿಕೆ, ಜ್ಯೋತಿ ಸಂಜೀವಿನಿ ಯೋಜನೆ ವ್ಯಾಪ್ತಿಗೆ ಒಳಪಡಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಳೆದ ಅಕ್ಟೋಬರ್‌ನಲ್ಲಿ ಶಿಕ್ಷಕರ ಕಲ್ಯಾಣ ಸಂಘದ ನೇತೃತ್ವದಲ್ಲಿ ಮುಷ್ಕರ ನಡೆಸಿದ್ದರು.
ಆದರೆ, ಕುಲಪತಿ ಡಾ.ಮಹಾದೇವ ಚೆಟ್ಟಿ ಅವರು ಸಕಾರಾತ್ಮಕವಾಗಿ ಸ್ಪಂದಿಸದ ಕಾರಣ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರನ್ನು ಸಂಘದ ಪದಾಧಿಕಾರಿಗಳು ಭೇಟಿ ತಮ್ಮ ಅಹವಾಲು ಸಲ್ಲಿಸಿದ್ದರು. ಇದು ಡಾ.ಮಹಾದೇವ ಚೆಟ್ಟಿ ಅವರನ್ನು ಕೆರಳುವಂತೆ ಮಾಡಿತ್ತು.


ಈ ವಿಷಯದಲ್ಲಿ ಇರುಸುಮುರುಸು ಅನುಭವಿಸಿದ್ದ ಡಾ.ಚೆಟ್ಟಿ ಅವರು, ಸಂಘದ ಪಾಧಿಕಾರಿಗಳ ಮಧ್ಯೆ ಒಡಕು ಮೂಡಿಸುವ ಕೆಲಸವನ್ನು ಕೂಡ ಮಾಡಿದ್ದರು. ಆದರೆ, ಇದಕ್ಕೆ ಪದಾಧಿಕಾರಿಗಳು ಮಣಿಯದ ಹಿನ್ನೆಲೆಯಲ್ಲಿ ಅವರನ್ನು ಎತ್ತಂಗಡಿ ಮಾಡುವ ಮುಖಾಂತರ ನಿಯಂತ್ರಿಸಲು ಮುಂದಾಗಿದ್ದಾರೆ.
ಪ್ರತಿವರ್ಷ ಸೆಪ್ಟಂಬರ ತಿಂಗಳಲ್ಲಿ ಏರ್ಪಡಿಸಲಾಗುತ್ತಿದ್ದ ಕೃಷಿ ಮೇಳವನ್ನು ಮೇ 27 ರಿಂದ 29 ವರೆಗೆ ನಡೆಸಲು ಕುಲಪತಿಗಳು ತೀರ್ಮಾನಿಸಿದ್ದು ಅನುಮಾನ ಸೃಷ್ಠಿಗೆ ಕಾರಣವಾಗಿದೆ. ಇದೇ ವೇಳೆ ಕೃಷಿ ವಿಶ್ವವಿದ್ಯಾಲಯ ದಲ್ಲಿನ ಶಿಕ್ಷಕೇತರ ಸಿಬ್ಬಂದಿ ನೇಮಕಾತಿಯಲ್ಲಿ ಅಭ್ಯರ್ಥಿಗಳಿಗೆ ಇತ್ತೀಚೆಗೆ ನಡೆಸಿದ ಲಿಖಿತ ಪರೀಕ್ಷೆಯಲ್ಲಿ ನಿಯಮಾವಳಿಗಳನ್ನು ಉಲ್ಲಂಘಿಸಿದ ಆರೋಪ ಸಹ ಕೇಳಿ ಬಂದಿದೆ.
ಶಿಕ್ಷಕೇತರ ಸಿಬ್ಬಂದಿ ನೇಮಕದಲ್ಲಿ ಡಾ.ಚೆಟ್ಟಿ ಅವರು ಸ್ವಜನಪಕ್ಷಪಾತ, ಭ್ರಷ್ಟಾಚಾರ ಎಸಗುವ ಎಲ್ಲ ಸಾಧ್ಯತೆಗಳೂ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.
ಇನ್ನು ಕೆಲವೇ ತಿಂಗಳುಗಳಲ್ಲಿ ತಮ್ಮ ಅವಧಿ ಪೂರ್ಣಗೊಳಿಸಲಿರುವ ಕುಲಪತಿ ಡಾ.ಚೆಟ್ಟಿ ಅವರ ಈ ಎಲ್ಲ ನಡೆಗಳ ಬಗ್ಗೆ ಅನುಮಾನ ಮೂಡು ವಂತಾಗಿದೆ. ಅಲ್ಲದೇ ಕೃಷಿ ಸಚಿವರಾದ ’ಕೌರವ’ನ ಪಾಲಿಗಂತೂ ವಿಶ್ವವಿದ್ಯಾಲಯ ಹಿಂಡುವ ಎಮ್ಮೆಯಾಗಿದೆ ಎಂಬ ಮಾತಿನಲ್ಲಿ ಸತ್ಯಾಂಶ ಇರುವಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ. ಆಡಳಿತ ಮಂಡಳಿ ಸದಸ್ಯರಾಗಲಿ, ಜನಪ್ರತಿನಿಧಿಗಳಾಗಲಿ ಈ ಬಗ್ಗೆ ಗಮನ ಹರಿಸದಿರುವುದು ಮತ್ತಷ್ಟು ಸಂಶಯಕ್ಕೆ ಕಾರಣವಾಗಿದೆ.

administrator

Related Articles

Leave a Reply

Your email address will not be published. Required fields are marked *