ಹುಬ್ಬಳ್ಳಿ-ಧಾರವಾಡ ಸುದ್ದಿ

ಕೃಷಿ ವಿವಿ: ವೇತನಕ್ಕಾಗಿ ನಿರಂತರ ಉಪವಾಸ ಆರಂಭ

ಸೇಡು ತೀರಿಸಿಕೊಳ್ಳುವ ಪ್ರವೃತ್ತಿ ಮುಂದುವರೆಸಿದ ಡಾ.ಮಹಾದೇವ ಚೆಟ್ಟಿ

ಧಾರವಾಡ: ವೇತನ ನೀಡದಿರುವ ಕಾರಣ ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಶಿಕ್ಷಕರು ಆಡಳಿತ ಭವನದ ಎದುರು ಇಂದು ನಿರಂತರ ಉಪವಾಸ ಆರಂಭಿಸಿದರು.
ಕೃಷಿ ವಿಶ್ವವಿದ್ಯಾಲಯದ ಶಿಕ್ಷಕರ ಕಲ್ಯಾಣ ಸಂಘದ ಅಧ್ಯಕ್ಷ ಸುನೀಲ ಕರೀಕಟ್ಟಿ ಮತ್ತು ಕಾರ್ಯದರ್ಶಿ ಡಾ.ಮಹಾಂತೇಶ ನಾಯಕ ಇಂದಿನಿಂದ ಧರಣಿ ಆರಂಭಿಸಿ, ವೇತನ ನೀಡುವ ತನಕ ಹೋರಾಟ ನಿಲ್ಲಿಸುವುದಿಲ್ಲ ಎಂದಿದ್ದಾರೆ.


ಕಳೆದ ಐದು ತಿಂಗಳಿಂದ ಶಿಕ್ಷಕರ ಕಲ್ಯಾಣ ಸಂಘದ ಅಧ್ಯಕ್ಷ ಸುನೀಲ ಕರೀಕಟ್ಟಿ, ಉಪಾಧ್ಯಕ್ಷ ಡಾ.ಆರ್.ಎಚ್.ಪಾಟೀಲ, ಕಾರ್ಯದರ್ಶಿ ಡಾ.ಮಹಾಂತೇಶ ನಾಯಕ, ಸದಸ್ಯರಾದ ಪ್ರೊ.ಮಂಜುಳಾ ಎನ್. ಮತ್ತು ನಾಗಪ್ಪ ಗೋವನಕೊಪ್ಪ ಅವರ ವೇತನವನ್ನು ಕೃವಿವಿ ಆಡಳಿತ ನೀಡಿಲ್ಲ. ಇದರಿಂದ ತಮ್ಮ ಬದುಕಿಗೆ ತೀವ್ರ ಅಡಚಣಿಯಾಗುತ್ತಿದೆ. ಈ ಬಗ್ಗೆ ಕಳೆದ ಜೂನ್ ೯ ರಂದು ಕುಲಸಚಿವರಿಗೆ ಮತ್ತು ಜುಲೈ ೪ ರಂದು ಹಣಕಾಸು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಧರಣಿ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.


ಈ ಬಗ್ಗೆ ಕುಲಸಚಿವ ಶಿವಾನಂದ ಕರಾಳೆ ಅವರು ತಮಗೆ ನ್ಯಾಯಯುತವಾಗಿ ಸಿಗಬೇಕಾದ ವೇತನ ಲಭಿಸುವಲ್ಲಿ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ.ಅಲ್ಲದೇ ಇದು ನ್ಯಾಯಾಂಗ ನಿಂದನೆ ಕೂಡ ಆಗಲಿದೆ ಎಂಬುದು ಶಿಕ್ಷಕರ ವಾದ. ತಮಗೆ ವೇತನ ನೀಡುವ ತನಕ ಉಪವಾಸ ಸ್ಥಗಿತಗೊಳಿಸುವುದಿಲ್ಲ ಎಂದು ಶಿಕ್ಷಕರು ತಿಳಿಸಿದ್ದಾರೆ.

ಚೆಟ್ಟಿ ನೆರಳು

ಶಿಕ್ಷಕರಿಗೆ ಬಡ್ತಿ, ಜೇಷ್ಠತಾ ಪಟ್ಟಿ, ಪಿಂಚಣಿ, ಇತರೆ ವಿಶ್ವವಿದ್ಯಾಲಯಗಳಲ್ಲಿ ಸಲ್ಲಿಸಿದ ಸೇವೆ ಪರಿಗಣನೆ, ನಿವೃತ್ತಿ ವಯೋಮಿತಿ ಏರಿಕೆ, ಜ್ಯೋತಿ ಸಂಜೀವಿನಿ ಯೋಜನೆ ವ್ಯಾಪ್ತಿಗೆ ಒಳಪಡಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಳೆದ ಅಕ್ಟೋಬರ್‌ನಲ್ಲಿ ಶಿಕ್ಷಕರ ಕಲ್ಯಾಣ ಸಂಘದ ವತಿಯಿಂದ ಮುಷ್ಕರ ನಡೆಸಲಾಗಿತ್ತು.
ಆಗ ಕುಲಪತಿಯಾಗಿದ್ದ ಡಾ.ಮಹಾದೇವ ಚೆಟ್ಟಿ ಅವರು ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ ಎಂಬ ಕಾರಣದಿಂದ ಶಿಕ್ಷಕರು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರನ್ನು ಭೇಟಿ ತಮ್ಮ ಅಹವಾಲು ಸಲ್ಲಿಸಿದ್ದರು. ಇದು ಡಾ.ಮಹಾದೇವ ಚೆಟ್ಟಿ ಅವರನ್ನು ಕೆರಳಿಸಿತ್ತು.


ಈ ವಿಷಯದಲ್ಲಿ ಇರುಸು ಮುರುಸು ಅನುಭವಿಸಿದ್ದ ಡಾ.ಚೆಟ್ಟಿ ಅವರು, ಸಂಘದ ಪಾಧಿಕಾರಿಗಳ ಮಧ್ಯೆ ಒಡಕು ಮೂಡಿಸುವ ಕೆಲಸವನ್ನು ಕೂಡ ಮಾಡಿದ್ದರು. ಆದರೆ, ಇದಕ್ಕೆ ಪದಾಧಿಕಾರಿಗಳು ಮಣಿಯದ ಹಿನ್ನೆಲೆಯಲ್ಲಿ ಶಿಕ್ಷಕರ ಕಲ್ಯಾಣ ಸಂಘದ ಆರು ಪದಾಧಿಕಾರಿಗಳನ್ನು ಎತ್ತಂಗಡಿ ಕೂಡ ಮಾಡಿದ್ದರು.
ಬಳಿಕ ತಮ್ಮ ವರ್ಗಾವಣೆ ಪ್ರಶ್ನಿಸಿ ಪದಾಧಿಕಾರಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದರು. ಆಗ ನ್ಯಾಯಾಲಯವು ಸಂಘದ ಪದಾಧಿಕಾರಿಗಳ ವರ್ಗಾವಣೆಯು ದುರುದ್ದೇಶಪೂರಿತ ಮತ್ತು ವೈರತ್ವದ್ದು ಎಂದು ವಗಾವಣೆಗೆ ತಡೆಯಾಜ್ಞೆ ನೀಡಿತ್ತು. ಹೀಗಾಗಿ ಪದಾಧಿಕಾರಿಗಳು ತಮ್ಮ ಮೂಲ ಸ್ಥಾನಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ, ಈ ಪದಾಧಿಕಾರಿಗಳ ವೇತನ ನೀಡದೇ ಅವರ ವಿರುದ್ಧ ಸೇಡು ತೀರಿಸಿಕೊಳ್ಳುವ ಪ್ರಯತ್ನ ಮುಂದುವರೆದಿದೆ.
ಈ ಮೂಲಕ ಕಳೆದ ಜೂನ್‌ನಲ್ಲಿ ಸೇವೆಯಿಂದ ನಿವೃತ್ತಿ ಹೊಂದಿರುವ ಡಾ.ಮಹಾದೇವ ಚೆಟ್ಟಿ ಅವರು ಸೇಡು ತೀರಿಸಿಕೊಳ್ಳುವ ತಮ್ಮ ಪ್ರವೃತ್ತಿಯನ್ನು ಮುಂದುವರೆಸಿದ್ದಾರೆ ಎನ್ನಲಾಗುತ್ತಿದೆ.

administrator

Related Articles

Leave a Reply

Your email address will not be published. Required fields are marked *