ಧಾರವಾಡ: ಹುಬ್ಬಳ್ಳಿ-ಧಾರವಾಡ ಅವಳಿನಗರವನ್ನೇ ಬೆಚ್ಚಿ ಬೀಳಿಸಿದ್ದ ಕಮಲಾಪೂರ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಹತ್ಯೆಗೆ ಬಂದೂಕು ಸರಬರಾಜು ಮಾಡಿದ್ದ ಆರೋಪದ ಮೇಲೆ ಉಪನಗರ ಪೊಲೀಸ್ ಠಾಣೆಯ ರೌಡಿಶೀಟರ್ ಮಂಜು ಸಾವಂತ ಎಂಬಾತನನ್ನು ಬಂಧಿಸಿ ನ್ಯಾಯಾಂಗದ ವಶಕ್ಕೆ ಒಪ್ಪಿಸಿದ್ದಾರೆ.
ಕುಖ್ಯಾತ ರೌಡಿಶೀಟರ್ ಫ್ರೂಟ್ ಇರ್ಫಾನ್ ಅಲಿಯಾಸ್ ಸೈಯದ್ ಹಂಚಿನಾಳ ಹೆಸರಿನಲ್ಲಿ ಗಳಿಸಿದ್ದ ಎನ್ನಲಾದ ಕೋಟ್ಯಾಂತರ ರೂಪಾಯಿ ಆಸ್ತಿಯನ್ನು ಬಿಟ್ಟು ಕೊಡದೆ ಪೀಡಿಸುತ್ತಿದ್ದ ಮಹ್ಮದ್ ಕುಡಚಿಯನ್ನು ಕೊಲೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಇನ್ನೋರ್ವ ಗಣೇಶ ಎಂಬಾತನನ್ನು ಹತ್ಯೆ ಮಾಡಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಫ್ರೂಟ್ ಇರ್ಫಾನ್ ಪುತ್ರ ಅರ್ಬಾಜ್ ಬಳಿ ಕೊಲೆ ಮಾಡಲು ಬಳಸಲಾಗಿದ್ದ ಕಂಟ್ರಿ ಪಿಸ್ತೂಲ್ ಎಲ್ಲಿಂದ ಬಂತು ಎಂದು ಪೊಲೀಸರು .ವಿಚಾರಣೆ ನಡೆಸಿದ್ದರು.
ವಿಚಾರಣೆ ಬಳಿಕ ಬಂದೂಕು ನೀಡಿದ್ದ ಆರೋಪದ ಮೇಲೆ ಉಪ ನಗರ ಠಾಣೆಯ ಸಿಪಿಐ ಶಂಕರಗೌಡ ಬಸನಗೌಡರ ಮತ್ತು ಸಿಬ್ಬದಿ ರೌಡಿಶೀಟರ್ ಮಂಜು ಸಾವಂತ ಎಂಬಾತನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಈ ಮಂಜು ಸಾವಂತ ಅರ್ಬಾಜ್ ತಂದೆ ಫ್ರೂಟ್ ಇರ್ಫಾನ್ನ ಸಹಚರನಾಗಿದ್ದು, ಜಿದ್ದಿ ಮಲ್ಲಿಕ್, ಜಾವೀದ್ ತಂಬೋಲಿ ಹಾಗೂ ಮಹ್ಮದ್ ಬಿಜಾಪೂರಿ ಮರ್ಡರ್ ಕೇಸ್ನಲ್ಲಿ ಮೂರನೇ ಆರೋಪಿಯಾಗಿದ್ದ.
ನಗರದ ಎಸಿಪಿ ವಿಜಯಕುಮಾರ್ ತಳವಾರ, ಸಿಪಿಐಗಳಾದ ಶಂಕರಗೌಡ ಪಾಟೀಲ, ಸಂಗಮೇಶ ದಿಡಿಗನಾಳ ಮತ್ತು ಸಿಬ್ಬಂದಿ ಸಮಾಜ ಘಾತುಕ ಶಕ್ತಿಗಳ ಹೆಡೆಮುರಿ ಕಟ್ಟುತ್ತಿದ್ದಾರೆ.