ಐದೂವರೆ ವರ್ಷದ ನಂತರ ಬಹಿರಂಗ ಪಡಿಸಿದ ಮೂರುಸಾವಿರ ಮಠದ ಸ್ವಾಮೀಜಿ
ಹಾವೇರಿ: ಬಾದಾಮಿಯ ಕಾಂಗ್ರೆಸ್ ಧುರೀಣ ಮುಚಕಂಡಯ್ಯ ಹಂಗರಗಿಯವರಿಗೆ 2018ರ ಚುನಾವಣೆಯಲ್ಲಿ ಬಾದಾಮಿಕ್ಷೇತ್ರದಲ್ಲಿ ಸಿದ್ದರಾಮಯ್ಯನವರ ಬೆಂಬಲಿಸುವಂತೆ ಸಲಹೆ ನೀಡಿದ್ದಾಗಿ ಹುಬ್ಬಳ್ಳಿ ಮೂರುಸಾವಿರ ಮಠದ ಶ್ರೀ ಗುರುಸಿದ್ಧರಾಜಯೋಗಿಂದ್ರ ಸ್ವಾಮೀಜಿ ಬಹಿರಂಗ ಪಡಿಸಿದ್ದಾರೆ.
ಹಾವೇರಿಯಲ್ಲಿ ನಡೆದ ಭಾವೈಕ್ಯ ಸಮಾವೇಶದಲ್ಲಿ ಮಾತನಾಡಿದ ಸ್ವಾಮೀಜಿ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲಿಯವರೆಗೂ ಜೀವಂತವಿರುವರೋ ಅಲ್ಲಿಯವರೆಗೆ ಮುಖ್ಯಮಂತ್ರಿಯಾಗಿರಲಿ ಎಂದು ಆಶೀರ್ವದಿಸಿದ್ದು ಗಮನ ಸೆಳೆಯಿತು.
ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧಿಸಿದಾಗಲೂ ಅವರನ್ನು ಬೆಂಬಲಿಸಿದ್ದ ಸಂಗತಿಯನ್ನು ಇದೇ ಮೊದಲ ಬಾರಿಗೆ ಸಾರ್ವಜನಿಕರೆದುರು ಹೇಳಿಕೊಂಡಿರುವ ಸ್ವಾಮೀಜಿ, ಆಗಿನ ಸನ್ನಿವೇಶವನ್ನು ನೆನಪಿಸಿಕೊಂಡರು. ಆ ಸಂದರ್ಭದಲ್ಲಿ ಕಾಂಗ್ರೆಸ್ ಧುರೀಣ ತಾಪಂ ಮಾಜಿ ಅಧ್ಯಕ್ಷ, ಜಿಪಂ ಸದಸ್ಯ ಹಾಗೂ ಸಿದ್ದರಾಮಯ್ಯ ಬೆಂಬಲಿಗ ಮುಚಕಂಡಯ್ಯ ಹಂಗರಗಿ ಅವರನ್ನು ಬಿಜೆಪಿಗೆ ಸೆಳೆಯಲು ಎಲ್ಲ ರೀತಿಯಿಂದಲೂ ಯತ್ನಿಸಿದ ಆ ಪಕ್ಷದ ಮುಖಂಡರು, ಲಿಂಗಾಯತ ನಾಯಕರ ಒತ್ತಡಕ್ಕೆ ಒಳಗಾಗಿ ತಮ್ಮ ಸಲಹೆ ಕೇಳಿದ ಮುಚಕಂಡಯ್ಯಗೆ ಯಾವುದೇ ಕಾರಣಕ್ಕೂ ಬಿಜೆಪಿಗೆ ಹೋಗಬೇಡ. ನೀನು ಕಾಂಗ್ರೆಸ್ನಲ್ಲೇ ಇರಬೇಕು. ಬಾದಾಮಿಯಲ್ಲಿ ಸಿದ್ದರಾಮಯ್ಯ ಗೆಲ್ಲಬೇಕು. ಸಿದ್ದರಾಮಯ್ಯನಂಥ ಸಮಾಜವಾದಿ ನಾಯಕ ಆಯ್ಕೆಯಾಗಿ ವಿಧಾನ ಸೌಧಕ್ಕೆ ಹೋಗಬೇಕೆಂದು ಮುಚಕಂಡಯ್ಯಗೆ ಹೇಳಿದ್ದಾಗಿ ವಿವರಿಸಿದರು.
ಆಗ ಮುಚಕಂಡಯ್ಯ ಹಂಗರಗಿ ಕಾಂಗ್ರೆಸ್ನಲ್ಲೇ ಉಳಿದರು. ಆಗ ಸಿದ್ದರಾಮಯ್ಯ ಆಯ್ಕೆ ಆಗಿ ವಿರೋಧ ಪಕ್ಷದ ನಾಯಕರೂ ಆದರು. ಮತ್ತೀಗ ಮುಖ್ಯಮಂತ್ರಿ ಆಗಿದ್ದು ಅವರೊಬ್ಬ ಸಮಾಜವಾದಿ, ಮುತ್ಸದ್ಧಿ ರಾಜಕಾರಣಿಯಾಗಿದ್ದಾರೆ ಎಂದರು. ಭಾವೈಕ್ಯತೆಯನ್ನು ಬಿಂಬಿಸುವ ಭರದಲ್ಲಿ ಸಿದ್ದರಾಮಯ್ಯನವರ ಕಟ್ಟಾ ಬೆಂಬಲಿಗರಂತೆ ಮಾತನಾಡಿದ ಗುರುಸಿದ್ಧ ಶ್ರೀಗಳು, ನಾನೂ ಜಂಗಮ-ಮುಚಕಂಡಯ್ಯನು ಜಂಗಮ-ಸಿದ್ದರಾಮಯ್ಯ ಕುರುಬರು. ಇದೇ ಭಾವೈಕ್ಯ ಎಂದು ಪ್ರತಿಪಾದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಾದಾಮಿ ಕ್ಷೇತ್ರದ ಚುನಾವಣೆ ವೇಳೆ ಮುಚಕಂಡಯ್ಯ ಹಂಗರಗಿಯವರ ಮೂಲಕ ತಮ್ಮನ್ನು ಬೆಂಬಲಿಸಿದ ಮೂರುಸಾವಿರ ಮಠದ ಸ್ವಾಮೀಜಿಯವರಿಗೆ ಮನಃಪೂರ್ವಕವಾಗಿ ನಮಿಸಿದರು.