ಧಾರವಾಡ : ಇಲ್ಲಿನ ಉಳವಿ ಚನ್ನಬಸವೇಶ್ವರ ದೇವಸ್ಥಾನದಲ್ಲಿ ಬ್ಯಾನರ್ ವಿಷಯಕ್ಕೆ ಸಂಬಂಧಿಸಿದಂತೆ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಮಾಜಿ ಸಚಿವ ವಿನಯ ಕುಲಕರ್ಣಿ ಬೆಂಬಲಿಗರ ಮಧ್ಯೆ ಇಂದು ಮಧ್ಯಾಹ್ನ ಗಲಾಟೆ ನಡೆದಿದೆ.
ಇದೇ ದಿ.15ರಂದು ಇಲ್ಲಿನ ಪ್ರಧಾನ ಅಂಚೆ ಕಚೇರಿ ಎದುರು ಚನ್ನ ಬಸವೇಶ್ವರ ಅವರ ಪುತ್ಥಳಿ ಅನಾವರಣ ಕಾರ್ಯಕ್ರಮ ನಡೆಯುತ್ತಿದ್ದು, ಈ ಹಿನ್ನೆಲೆ ಉಳವಿ ಚನ್ನ ಬಸವೇಶ್ವರ ದೇವಸ್ಥಾನ ಧರ್ಮ ಫಂಡ್ ಸಂಸ್ಥೆವತಿಯಿಂದ ಹಾಕಲಾಗಿದ್ದ ಬ್ಯಾನರ್‌ನಲ್ಲಿ ವಿನಯ ಕುಲಕರ್ಣಿಯವರ ಫೋಟೊ ಇಲ್ಲದಿರುವುದು ಗಲಾಟೆಗೆ ಕಾರಣವಾಯಿತು.
ಬ್ಯಾನರ್‌ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕ ಅರವಿಂದ ಬೆಲ್ಲದ ಸೇರಿದಂತೆ ಸ್ಥಳಿಯ ನಾಯಕರ ಫೋಟೊ ಮಾತ್ರ ಹಾಕಲಾಗಿದ್ದು ಸ್ಥಳೀಯ ಪ್ರಭಾವಿ ಲಿಂಗಾಯತ ಮುಖಂಡ ಮಾಜಿ ಸಚಿವ ವಿನಯ ಭಾವಚಿತ್ರ ಇಲ್ಲದಿರುವುದು ಸಮಾಜದ ಹಾಗೂ ವಿನಯ ಬೆಂಬಲಿಗರನ್ನು ಕೆರಳಿಸಿದೆ.
ಆಡಳಿತ ಮಂಡಳಿಯ ಈ ಧೋರಣೆ ಖಂಡಿಸಿ ವಿನಯ ಬೆಂಬಲಿಗರಿಂದ ದೇವಸ್ಥಾನದಲ್ಲಿ ಪ್ರತಿಭಟನೆ ನಡೆಸಿದರಲ್ಲದೇ ಆಕ್ರೋಶ ವ್ಯಕ್ತಪಡಿಸಿ ಆಡಳಿತ ಮಂಡಳಿ ವಿರುದ್ದ ಘೋಷಣೆ ಕೂಗಿದರು.ಈ ಸಂದರ್ಭದಲ್ಲಿ ಎರಡೂ ಕಡೆಯಿಂದ ಮಾತಿನ ಚಕಮಕಿ ನಡೆಯಿತು.