ಬಹಿರಂಗ ಚರ್ಚೆಗೆ ಹೊರಟ್ಟಿ ಸವಾಲು
ಧಾರವಾಡ: ಕಳೆದ 42 ವರ್ಷಗಳಿಂದ ಶೈಕ್ಷಣಿಕ ಕ್ಷೇತ್ರ ಸುಧಾರಣೆಗೆ ನಾನು ಮಾಡಿದ ಸೇವೆ ಹಾಗೂ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ನಾನು ಮಾಡಿದ ಹೋರಾಟಗಳ ಕುರಿತು ನನ್ನ ಪ್ರತಿಸ್ಪರ್ಧಿಗಳು ಇಚ್ಛಿಸಿದರೆ ಒಂದೇ ವೇದಿಕೆಯಲ್ಲಿ ಬಹಿರಂಗ ಚರ್ಚೆಗೆ ನಾನು ಸಿದ್ಧನಿದ್ದೇನೆ. ಇದಕ್ಕೆ ಅವರು ದಿನಾಂಕ ನಿಗದಿಪಡಿಸಲಿ. ಮಾಧ್ಯಮದವರ ಮುಂದೆಯೇ ದಾಖಲೆಗಳ ಸಮೇತ ವಿವರಣೆ ನೀಡುವೆ ಎಂದು ಪರಿಷತ್ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಕರ ಮತ್ತು ಶೈಕ್ಷಣಿಕ ವಲಯದ ಸುಧಾರಣೆಗೆ ಶಕ್ತಿ ಮೀರಿ ಪ್ರಯತ್ನಿಸಿದ್ದೇನೆ. ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವಾಗ ಯಾರಿಂದಲೂ ಒಂದು ರೂಪಾಯಿ ಪಡೆದಿಲ್ಲ. ನಾನು ಪಡೆದಿದ್ದನ್ನು ಸಾಬೀತುಪಡಿಸಿದರೆ ಇಂದೇ ಚುನಾವಣೆಯಿಂದಲೇ ಹಿಂದೆ ಸರಿಯುವುದಾಗಿ ಸವಾಲು ಹಾಕಿದರು.
ಇವೆಲ್ಲ ರಾಜಕಾರಣಕ್ಕೆ ಮಾಡುತ್ತಿರುವ ಆರೋಪಗಳು ಎಂದರಲ್ಲದೇ ಏಳು ಬಾರಿ ಕ್ಷೇತ್ರ ಆಳಿದವರು ಶಿಕ್ಷಕರಿಗೆ ಏನು ಮಾಡಿದ್ದಾರೆ ಎಂದು ಕಾಂಗ್ರೆಸ್‌ನವರು ಕೇಳಿರುವ ಪ್ರಶ್ನೆ ಬಾಲಿಶವಾಗಿದೆ. ನಾನು ಏನು ಮಾಡಿದ್ದೇನೆಂಬುದು ರಾಜ್ಯದ ಸಮಸ್ತ ಶಿಕ್ಷಕ ಸಮುದಾಯಕ್ಕೆ ಗೊತ್ತಿದೆ. ಏಳು ಬಾರಿ ನನ್ನನ್ನು ತಮ್ಮ ಪ್ರತಿನಿಧಿಯನ್ನಾಗಿ ಆಯ್ಕೆ ಮಾಡಿರುವ ಶಿಕ್ಷಕರು ಸಂಪೂರ್ಣ ಜ್ಞಾನ ಹೊಂದಿದ್ದು ನನ್ನ ಕಾರ್ಯ ವೈಖರಿ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿದ್ದಾರೆ. ಅವರೆಲ್ಲರೂ ಪ್ರಜ್ಞಾವಂತರಾಗಿದ್ದು ತಮ್ಮ ಜನಪ್ರತಿನಿಧಿಯನ್ನು ಚುನಾಯಿಸುವ ಪರಿಜ್ಞಾನ ಹೊಂದಿದ್ದಾರೆ ಎಂಬುದನ್ನು ಆರೋಪ ಮಾಡುವ ಮೊದಲು ಸ್ವಲ್ಪ ಆಲೋಚಿಸಬೇಕಾಗಿತ್ತು ಎಂದರು.
ಶಿಕ್ಷಣ ಸಮಸ್ಯೆಗಳಿಗೆ ಪರಿಹಾರ ಹಾಗೂ ಶಿಕ್ಷಕರ ಪ್ರತಿನಿಧಿಯಾಗಿ ಹಾಗೂ ಶಿಕ್ಷಣ ಸಚಿವನಾಗಿ ಕೆಲಸ ಮಾಡಿದ ಸಂದರ್ಭದಲ್ಲಿ ಶಿಕ್ಷಕರ ಸಮಸ್ಯೆಗಳ ಸರಕಾರದಿಂದ ಶೈಕ್ಷಣಿಕ ಕ್ಷೇತ್ರದ ಸುಧಾರಣೆಗಾಗಿ ಹೊರಡಿಸಲಾಗಿರುವ ಎಲ್ಲ ಸರಕಾರಿ ಆದೇಶಗಳ ಪ್ರತಿಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವದರ ಮೂಲಕ ಆಯ್ಕೆಯಾಗುವ ದೇಶದ ಏಕೈಕ ಜನಪ್ರತಿನಿಧಿ ಎಂಬ ಹೆಗ್ಗಳಿಕೆ ನನ್ನದಾಗಿದೆ ಎಂದು ಹೆಮ್ಮೆಯಿಂದ ಹೇಳಬಯಸುತ್ತೇನೆ.
ಕಾನೂನು ಮತ್ತು ಸಂಸದೀಯ ವ್ಯವಹಾರ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ್ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಚಿವ ನಾಗಿಯೂ ಜನಮನದಲ್ಲಿ ಉಳಿಯುವ ಕೆಲಸಗಳನ್ನು ಮಾಡಿರುವೆ. ನನ್ನ ಕಾರ್ಯವೈಖರಿ, ಬದ್ಧತೆ, ಶಿಕ್ಷಕರ ಕಾಳಜಿ ಇಇನ್ನಿತರ ಕಾರಣಗಳಿಂದ ಈ ಬಾರಿ ಅತ್ಯಧಿಕ ಮತಗಳಿಂದ ಆಯ್ಕೆಯಾಗುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ಹು-ಧಾ ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜಯ ಕಪಟಕರ, ಮೇಯರ ಈರೇಶ ಅಂಚಟಗೇರಿ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಶ್ಯಾಮ ಮಲ್ಲನಗೌಡರ, ಜಿ.ಆರ್.ಭಟ್, ಮೋಹನ ರಾಮದುರ್ಗ ಮತ್ತಿತರರಿದ್ದರು.