ಹುಬ್ಬಳ್ಳಿ: ಸಾಮೂಹಿಕ ಮದುವೆಗಳನ್ನು ಆಯೋಜನೆ ಮಾಡುವದರಿಂದ ಬಡವರ ಕಷ್ಟದ ಸಮಯದಲ್ಲಿ ಸಹಾಯವನ್ನು ಮಾಡಿದಂತಾಗುತ್ತದೆ ಎನ್ನುವ ಸದುದ್ದೇಶದಿಂದ ಬಸವರಾಜ ಅಮ್ಮಿನಭಾವಿ ಗೆಳೆಯರ ಬಳಗದಿಂದ ನಾಡಿದ್ದು ದಿ.25 ಬುಧವಾರ ದಂದು ನಗರದ ಸೆಟ್ಲಮೆಂಟ್ ಮೈದಾನದಲ್ಲಿ ಸಾಮೂಹಿಕ ವಿವಾಹ ಸಮಾರಂಭ ವನ್ನು ಆಯೋಜಿಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿವಾಹೋತ್ಸವದ ಆಯೋಜಕ ಹಾಗೂ ಮಹಾನಗರ ಬಿಜೆಪಿ ಎಸ್ ಸಿ ಮೋರ್ಚಾ ಅಧ್ಯಕ್ಷ ಬಸವರಾಜ ಅಮ್ಮಿನಬಾವಿ , ಸಮಾರಂಭದಲ್ಲಿ 16ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು, ವಧುವಿಗೆ 1 ಗ್ರಾಂ ಬಂಗಾರದ ತಾಳಿ, ಬೆಳ್ಳಿ ಕಾಲುಂಗುರ, ರೇಷ್ಮೆ ಸೀರೆಯನ್ನು ಮತ್ತು ವರನಿಗೆ ಧೋತರ, ಶರ್ಟ್, ಶಲ್ಯವನ್ನು ಕೊಡಲಾಗುತ್ತಿದೆ. ಸಾಮೂಹಿಕ ವಿವಾಹ ಸಂದರ್ಭ ದಲ್ಲಿ ಬಾಲ್ಯ ವಿವಾಹ ಆಗದಂತೆ ಎಲ್ಲ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ ಎಂದರು.
ವಿವಾಹೋತ್ಸವದ ಸಾನ್ನಿಧ್ಯವನ್ನು ಹುಬ್ಬಳ್ಳಿಯ ಮೂರುಸಾವಿರ ಮಠದ ಜಗದ್ಗುರು ಡಾ.ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮೀಜಿ, ಎರಡೆತ್ತಿನಮಠದ ಸಿದ್ದಲಿಂಗ ಸ್ವಾಮೀಜಿ, ಮಣಕವಾಡದ ಶ್ರೀ ಗುರು ಅನ್ನದಾನೀಶ್ವರ ಮಹಾಮಠದ ಅಭಿನವ ಮೃತ್ಯುಂಜಯ ಸ್ವಾಮೀಜಿ, ಸದ್ಗುರು ಸಮರ್ಥ ಡಾ ವಾಲಿ ಮಹಾರಾಜರು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಸ್ವಯಂ ಸಂಘದ ಹಿರಿಯ ಪ್ರಚಾರಕರು, ಕುಟುಂಬ ಪ್ರಮೋದಿನಿ ಮುಖ್ಯಸ್ಥ ಸು.ರಾಮಣ್ಣ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಜವಳಿ ಸಚಿವ ಶಂಕರಪಾಟೀಲ ಮನೇನಕೊಪ್ಪ, ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ರಾಜ್ಯ ಬಿಜೆಪಿ ಪ್ರಧಾನ ಕಾರ್ಯ ದರ್ಶಿ ಮಹೇಶ ಟೆಂಗಿನಕಾಯಿ ಮುಂತಾದವರು ಭಾಗವಹಿಸಲಿದ್ದಾರೆ ಎಂದರು.
ಈಗಾಗಲೇ ವಿವಾಹದ ತಾಳಿಗಳ ಪೂಜೆಯನ್ನು ಧರ್ಮಾಧಿಕಾರಿ ಪೂಜ್ಯ ವಿರೇಂದ್ರ ಹೆಗ್ಗಡೆಯವರ ಆಶೀರ್ವಾದ ಪಡೆದು, ಧರ್ಮಸ್ಥಳ ಮಂಜುನಾಥೇಶ್ವರನ ಸನ್ನಿದಿಯಲ್ಲಿ ಮಾಡಿದ್ದು, ಕರಿಮಣಿ ಪೋಣಿಸುವ ಕಾರ್ಯ, ಅಲ್ಲದೇ ರೊಟ್ಟಿ ತಯಾರಿಕೆ ಸೇರಿದಂತೆ ಎಲ್ಲ ಸಿದ್ದತೆಗಳು ಪೂರ್ಣಗೊಂಡಿವೆ ಎಂದರು.
ಗೋಷ್ಠಿಯಲ್ಲಿ ಪೂರ್ವ ಅಧ್ಯಕ್ಷ ಪ್ರಭು ನವಲಗುಂದಮಠ, ವಿನಯ ಸಜ್ಜನರ, ಜಗದೀಶ್ ಬುಳ್ಳಾನವರ, ಗಂಗಾಧರ ಗುಜಮಾಗಡಿ, ಪರಶುರಾಮ ಪೂಜಾರ, ಗುರುನಾಥ ಕೊರವರ ಇನ್ನಿತರರಿದ್ದರು.