ಬೆಳಗಿನ ಜಾವದಿಂದಲೇ ಕಾರ್ಯಾಚರಣೆ -ಡಿಸಿ ಸಹಿತ ಹಿರಿಯ ಅಧಿಕಾರಿಗಳು ಮೊಕ್ಕಾಂ
ಹುಬ್ಬಳ್ಳಿ: ಇಲ್ಲಿಯ ಭೈರಿದೇವರಕೊಪ್ಪದ ಸಾರ್ವಜನಿಕ ಸ್ಥಳದಲ್ಲಿರುವ ಹಜರತ್ ಸೈಯದ್ ಮಹಮ್ಮುದ್ ಶಾ ಖಾದ್ರಿ ದರ್ಗಾ ಹಾಗೂ ಸುತ್ತಲಿನ ವಾಣಿಜ್ಯ ಮಳಿಗೆಗಳ ತೆರವು ಕಾರ್ಯಚರಣೆ ಇಂದು ಬೆಳಿಗ್ಗೆಯಿಂದ ಆರಂಭವಾಗಿದ್ದು ಸಾಯಂಕಾಲದವರೆಗೂ ಮುಂದುವರಿಯುವ ಸಾಧ್ಯತೆಗಳಿವೆ.
ಪೊಲೀಸ್ ಸರ್ಪಗಾವಲಿನಲ್ಲಿ ದರ್ಗಾ ತೆರವು ಕಾರ್ಯಾಚರಣೆ ಆರಂಭಿಸಲಾಗಿದ್ದು, ದರ್ಗಾ ಸುತ್ತಲೂ ಅಂತರ್ ಜಿಲ್ಲಾ ಪೊಲೀಸರು ಸೇರಿ ಶಸ್ತ್ರ ಸಜ್ಜಿತರಾದ ಆರ್‌ಎಎಫ್ ವಿಶೇಷ ಪೊಲೀಸ್ ತುಕಡಿಯನ್ನು ಕೂಡಾ ನಿಯೋಜನೆ ಮಾಡಲಾಗಿದೆ. ಪೊಲೀಸರು ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಿದ್ದಾರೆ. ದರ್ಗಾ ಸುತ್ತ ತಗಡು ಜೋಡಿಸಿ ತೆರವು ಕಾರ್ಯಾಚರಣೆ ಮಾಡಲಾಗುತ್ತಿದ್ದು, ಭದ್ರತೆಗೆ ವಿಶೇಷ ಪಡೆಯನ್ನು ನಿಯೋಜಿಸಲಾಗಿದೆ.
ಹುಬ್ಬಳ್ಳಿ-ಧಾರವಾಡ ಮುಖ್ಯರಸ್ತೆಯನ್ನು ಹುಬ್ಬಳ್ಳಿ ಕಡೆಯಿಂದ ಬೈರಿದೇವರಕೊಪ್ಪ ಮತ್ತು ಧಾರವಾಡ ಕಡೆಯಿಂದ ಎಪಿಎಂಸಿ ಮೊದಲ ಗೇಟ್ ಬಳಿ ಬಂದ್ ಮಾಡಲಾಗಿದ್ದು ಒಳ ರಸ್ತೆಗಳ ಮೂಲಕವೇ ಚಿಗರಿ ಸಹಿತ ಎಲ್ಲ ವಾಹನಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.
ರಸ್ತೆ ಅಗಲೀಕರಣ ಹಿನ್ನೆಲೆಯಲ್ಲಿ ಭೈರಿದೇವರಕೊಪ್ಪದಲ್ಲಿರುವ ದರ್ಗಾವನ್ನು ತೆರವುಗೊಳಿಸುವಂತೆ ಹೈಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಇಂದು ಕಾರ್ಯಾಚರಣೆ ನಡೆದಿದೆ.
ಮೂರು ಜೆಸಿಬಿ ಕಾರ್ಯಚರಣೆ ನಡೆಸಿದ್ದು, ದರ್ಗಾದ ಸುತ್ತಮುತ್ತಲಿನ ವಾಣಿಜ್ಯ ಮಳಿಗೆ ಹಾಗೂ ವಸ್ತುಗಳನ್ನು ಎಂಟು ಗಂಟೆಯ ಒಳಗೆ ತೆರವುಗೊಳಿಸಲಾಗಿದೆ. ಅಂತಿಮ ವಿಧಿ-ವಿಧಾನ ಸಲ್ಲಿಸಿದ ಬಳಿಕ ಗೋರಿ ತೆರವುಗೊಳಿಸಲು ಅವಕಾಶ ನೀಡಬೇಕೆಂದು ಧರ್ಮಗುರುಗಳು,ದರ್ಗಾ ಸಮಿತಿ ಮತ್ತು ಅಂಜುಮನ್ ಸಂಸ್ಥೆ ಮುಖಂಡರು ಜಿಲ್ಲಾಧಿಕಾರಿ ಗುರುದತ್ ಹೆಗಡೆ,ಬಿಆರ್ ಟಿಎಸ್ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಮಾಡಿದ್ದು ಅವರ ಮನವಿಗೆ ಸ್ಪಂದಿಸಿ ಸಾಯಂಕಾಲದವರೆಗೆ ಅವಕಾಶ ನೀಡುವುದಾಗಿ ಹೇಳಿದರು.
’ನೂತನ ತಂತ್ರಜ್ಞಾನ ಬಳಸಿ ಸಮಾದಿ ತೆರವುಗೊಳಿಸಲು೧೫ ದಿನಗಳ ಕಾಲಾವಕಾಶ ನೀಡಿ, ಸಮಾಜದ ಮುಖಂಡರು ಸಹ ಅದಕ್ಕೆ ಸಹಕಾರ ನೀಡಲು ಸಿದ್ಧರಿದ್ದಾರೆ. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನಾವು ಸ್ಥಳಾಂತರಿಸುತ್ತೇವೆ ಎಂದು ಸ್ಥಳೀಯಾಡಳಿತ ಸ್ಪಂದಿಸುತ್ತಿಲ್ಲ’ ಎಂದು ಸ್ಥಳದಲ್ಲಿದ್ದ ಅನೇಕ ಮುಸ್ಲಿಂ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಗುರದತ್ತ ಹೆಗಡೆ, ಬಿಆರ್ ಟಿಎಸ್ ವ್ಯವಸ್ಥಾಪಕ ನಿರ್ದೇಶಕ ಎಸ್.ಭರತ್, ಪೊಲೀಸ್ ಆಯುಕ್ತ ಲಾಭೂರಾಮ್, ಡಿಸಿಪಿಗಳಾದ ಸಾಹಿಲ್ ಬಾಗ್ಲಾ, ಗೋಪಾಲಕೃಷ್ಣ ಬ್ಯಾಕೋಡ್ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.ಅನೇಕ ಮುಸ್ಲಿಂ ಧರ್ಮಗುರುಗಳು, ಅಂಜುಮನ್ ಸಂಸ್ಥೆಯ ಅಧ್ಯಕ್ಷ ಯೂಸುಫ್ ಸವಣೂರ, ಅಲ್ತಾಫ್ ಹಳ್ಳೂರ, ಮಾಜಿ ಸಚಿವ ಎ.ಎಂ.ಹಿಂಡಸಗೇರಿ, ಇಮ್ರಾನ್ ಯಲಿಗಾರ, ಶಾಜಮಾನ ಮುಜಾಹಿದ ಸೇರಿದಂತೆ ಪಾಲಿಕೆ ಸದಸ್ಯರು,ಅನೇಕ ಸ್ಥಳೀಯ ಮುಖಂಡರು ಸೇರಿದಂತೆ ಐವತ್ತಕ್ಕೂಹೆಚ್ಚು ಪ್ರಮುಖರಿದ್ದರು.
ಬಿಜೆಪಿ ಷಡ್ಯಂತ್ರ : ಹಳ್ಳೂರ
ಹುಬ್ಬಳ್ಳಿ: ‘ಬಿ.ಆರ್.ಟಿ.ಎಸ್. ಸಂಸ್ಥೆ ಹೆಸರಲ್ಲಿ ಬಿಜೆಪಿ ಷಡ್ಯಂತ್ರ ನಡೆಸಿ ಬೈರಿದೇವರಕೊಪ್ಪದಲ್ಲಿರುವ ಹಜರತ್ ಸೈಯದ್ ಮಹ್ಮದ್ ಶಾ ಖಾದ್ರಿ ದರ್ಗಾವನ್ನು ತೆರವು ಮಾಡುತ್ತಿದೆ’ ಎಂದು ಸಮಾಜದ ಮುಖಂಡ ಅಲ್ತಾಫ್ ಹಳ್ಳೂರು ಆರೋಪಿಸಿದ್ದಾರೆ.
ಕಾರ್ಯಾಚರಣೆ ಸ್ಥಳದಲ್ಲೇ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ’ಜೀವಂತ ಸಮಾಧಿಯಾದ ಧರ್ಮದ ಮುಖಂಡರ ದರ್ಗಾ ತೆರವು ಮಾಡುತ್ತಿರುವುದು ಖಂಡನೀಯ. ಇದರ ಹಿಂದಿರುವ ವ್ಯಕ್ತಿಗಳಿಗೆ ಶಾಪ ತಟ್ಟದೇ ಇರದು’ ಎಂದು ಆಕ್ರೋಶ ವ್ಯಕ್ತಪಡಿಸಿದರು.
’ಬಿ.ಆರ್.ಟಿ.ಎಸ್. ಮಾರ್ಗ ಕೆಲವೆಡೆ 18 ಮೀ, 20 ಮೀ, 37 ಮೀ ವಿಸ್ತೀರ್ಣವಿದೆ. ತೆರವು ಮಾಡುತ್ತಿರುವ ಬೈರಿದೇವರಕೊಪ್ಪದ ದರ್ಗಾ ಬಳಿ 45 ಮೀ. ವಿಸ್ತೀರ್ಣದ ಮಾರ್ಗವಿದ್ದರೂ, ತೆರವು ಯಾಕೆ. ಶಾಸಕ ಅರವಿಂದ ಬೆಲ್ಲದ ಅವರಿಗೆ ಸಂಬಂಧಿಸಿದ ಜಾಗ ಉಳಿಸಲು ಪೂರ್ವನಿಯೋಜಿತವಾಗಿ ನಡೆಸಿದ ಕಾರ್ಯವಿದು. ಅಲ್ಲದೆ, ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ಹಿಂದೂ-ಮುಸ್ಲಿಮರ ನಡುವೆ ವೈಷಮ್ಯ ಹುಟ್ಟಿಸುತ್ತ ಬಂದಿದೆ’ ಎಂದು ಆರೋಪಿಸಿದರು.
’ನೂತನ ತಂತ್ರಜ್ಞಾನ ಬಳಸಿ ದರ್ಗಾ ತೆರವುಗೊಳಿಸಲು ನಾವು ಕಾಲಾವಕಾಶ ಕೇಳಿದ್ದೇವೆ. ಸಮಾಜದ ಮುಖಂಡರು ಸಹ ಅದಕ್ಕೆ ಸಹಕಾರ ನೀಡಲು ಸಿದ್ಧರಿದ್ದಾರೆ. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನಾವು ಸ್ಥಳಾಂತರಿಸುತ್ತೇವೆ ಎಂದರೂ, ಅದಕ್ಕೆ ಸ್ಥಳೀಯಾಡಳಿತ ಸ್ಪಂದಿಸುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಗಳ ಹಚ್ಚುವ ಹುನ್ನಾರ: ಅಬ್ಬಯ್ಯ
ಹುಬ್ಬಳ್ಳಿ: ’ಇಲ್ಲಿನ ಬೈರಿದೇವರಕೊಪ್ಪದ ಬಳಿಯಿರುವ ದರ್ಗಾ ತೆರವು ಹಿಂದೆ ಹಿಂದೂ-ಮುಸ್ಲಿಮರ ನಡುವೆ ಜಗಳ ಹಚ್ಚುವ ಹುನ್ನಾರ ಅಡಗಿದೆ’ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ’ಇಲ್ಲಿರುವ ದರ್ಗಾದಿಂದ ವಾಹನಗಳ ಸಂಚಾರಕ್ಕಾಗಲಿ, ಸಾರ್ವಜನಿಕರ ಓಡಾಟಕ್ಕಾಗಲಿ ಯಾವುದೇ ಸಮಸ್ಯೆ ಇರಲಿಲ್ಲ.ರಾಜಕೀಯ ಪ್ರೇರಿತವಾಗಿ, ಚುನಾವಣೆ ಹಿನ್ನೆಲೆಯಲ್ಲಿ ತೆರವು ಮಾಡಲಾಗುತ್ತಿದೆ. ಈ ಕುರಿತು ಬೆಳಗಾವಿ ಅಧಿವೇಶನದಲ್ಲಿ ವಿಷಯ ಪ್ರಸ್ತಾವ ಮಾಡುವುದಾಗಿ ಹೇಳಿದರು.
ಧರ್ಮ ಗುರುವನ್ನು ಜೀವಂತ ಸಮಾಧಿ ಮಾಡಿರುವ ಸ್ಥಳ. ಹಾಗೆಲ್ಲ ತೆರವು ಮಾಡಬಾರದು. ಇದು ರಾಜಕೀಯ ಹುನ್ನಾರ ಎನ್ನುವುದು ಜನರಿಗೆ ಅರಿವಾಗುತ್ತಿದೆ. ಸಂಬಂಧಿಸಿದ ವ್ಯಕ್ತಿಗಳು ಮುಂದಿನ ದಿನಗಳಲ್ಲಿ ಅದರ ಫಲ ಅನುಭವಿಸುತ್ತಾರೆ’ ಎಂದರು.
ತೆರವು ಕಾರ್ಯಾಚರಣೆ ಖಂಡನೀಯ
ಹುಬ್ಬಳ್ಳಿ: ಭೈರಿದೇವರಕೊಪ್ಪದ ದರ್ಗಾವನ್ನು ಸ್ಥಳಾಂತರ ಮಾಡುವ ಕುರಿತು ಸ್ಥಳೀಯ ಆಡಳಿತ ಮತ್ತು ಸಚಿವರಿಗೆ ಮನವಿ ಮಾಡಿದರು ಸ್ಪಂದಸದೆ ತೆರವು ಕಾರ್ಯಾಚರಣೆ ಕೈಗೊಂಡಿರುವುದು ಖಂಡನೀಯ ಎಂದು ಮಾಜಿ ಸಚಿವ ಎ.ಎಮ್.ಹಿಂಡಸಗೇರಿ ಹೇಳಿದರು.
ಭೇಟಿಯಾದ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿ.ಆರ್.ಟಿ.ಎಸ್ ಯೋಜನೆ ಸಂಪೂರ್ಣಗೊಂಡರೂ ಸಹ ಬಿಡದೆ ನೂರಾರು ವರ್ಷದ ಹಳೆಯ ದರ್ಗಾವನ್ನು ಕೆಡವಲು ಆದೇಶ ಕೊಟ್ಟಿದ್ದಾರೆಂದು ಬೇಸರಿಸಿದರು.ಹು-ಧಾ ಅವಳಿನಗರ ಶಾಂತಿ, ಸೌಹಾರ್ದತೆಯಿಂದ ಇದೆ. ಇದಕ್ಕೆ ಅಡ್ಡಿ ಉಂಟು ಮಾಡುವ ಕೆಲಸವನ್ನು ಕೆಲವು ಕಾಣದ ಕೈಗಳು ಮಾಡುತ್ತಿವೆ ಎಂದು ಆರೋಪಿಸಿದರು.
ಏಕಪಕ್ಷೀಯ ನಿರ್ಧಾರ ಖಂಡಿಸಿ ಅಂಜುಮನ್ ಚುನಾವಣೆಗೆ ಬಹಿಷ್ಕಾರ
ಹುಬ್ಬಳ್ಳಿ : ಭೈರಿದೇವರಕೊಪ್ಪ ದರ್ಗಾ ತೆರವುಗೊಳಿಸುವ ಕುರಿತು ಬಿಆರ್‌ಟಿಎಸ್ ಆಡಳಿತ ಮಂಡಳಿಗೆ ಯಾವುದೇ ನೋಟಿಸ್ ಸಹ ನೀಡದೇ ಏಕಪಕ್ಷೀಯವಾಗಿ ತೆರವುಗೊಳಿಸಲು ಮುಂದಾಗಿರುವ ಕ್ರಮದಿಂದಾಗಿ ಅಂಜುಮನ್ ಇಸ್ಲಾಂ ಚುನಾವಣೆ ಬಹಿಷ್ಕರಿಸಲು ಮುಸ್ಲಿಂ ಮುಖಂಡರು ಮುಂದಾಗಿದ್ದಾರೆ.
ಸುಪ್ರೀಂ ಕೋರ್ಟ ನಿರ್ದೇಶನದ ಹಿನ್ನೆಲೆಯಲ್ಲಿ ನಿಗದಿಯಾಗಿರುವ ಹುಬ್ಬಳ್ಳಿ ಮುಸ್ಲಿಂ ಸಮುದಾಯದ ಪ್ರಾತಿನಿಧಿಕ ಸಂಸ್ಥೆ ಅಂಜುಮನ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದ್ದು ಎಲ್ಲ ಗುಂಪುಗಳು ದರ್ಗಾ ತೆರವು ಕಾರ್ಯಾಚರಣೆ ಖಂಡಿಸಿ ಬಹಿಷ್ಕರಿಸುವ ನಿರ್ಧಾರಕ್ಕೆ ಬಂದಿದ್ದಾರೆ.
ಹಾಲಿ ಅಧಿಕಾರದಲ್ಲಿರುವ ಮಹ್ಮದ ಯೂಸೂಪ್ ಸವಣೂರ ಗುಂಪು, ಹಿಂಡಸಗೇರಿ ಗುಂಪು,ದಿ. ಹೊನ್ನಳ್ಳಿ ಬಣ, ಮಜಹರಖಾನ ಬಣ ಸಹಿತ ಎಲ್ಲರೂ ಬಹಿಷ್ಕರಿಸಲಿವೆ. ಇದುವರೆಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.ಈಗಾಗಲೇ ಆಕಾಂಕ್ಷಿಗಳು ೩೦೦ಕ್ಕೂ ಹೆಚ್ಚು ನಾಮಪತ್ರ ಅರ್ಜಿ ಪಡೆದಿದ್ದರೂ ಯಾವುದೇ ಅರ್ಜಿ ಸಲ್ಲಿಕೆಯಾಗಿಲ್ಲ.
ಹಾಲಿ ಅಂಜುಮನ್ ಉಪಾಧ್ಯಕ್ಷ ಅಲ್ತಾಫ್ ಕಿತ್ತೂರ ಸಂಜೆ ದರ್ಪಣದೊಂದಿಗೆ ಮಾತನಾಡಿ ಕೋರ್ಟ ತಡೆಯಾಜ್ಞೆ ತೆರವುಗೊಳಿಸಿದೆಯಷ್ಟೆ.ಆದರೆ ನೋಟಿಸ್ ಸಹ ನೀಡದೇ ಉದ್ದೇಶಪೂರ್ವಕವಾಗಿ ಬಿಆರ್‌ಟಿಎಸ್ ಕ್ರಮಕ್ಕೆ ಮುಂದಾಗಿರುವುದು ಸರಿಯಲ್ಲ. ಅಲ್ಲದೇ ಇಂದು ಇಂತಹ ಸೂಕ್ಷ್ಮ ಸ್ಥಿತಿಯಲ್ಲಿ ಅಂಜುಮನ್ ಚುನಾವಣೆಗೆ ನಾಮಪತ್ರ ಸಲ್ಲಿಸುವುದು ಕೊನೆಯ ದಿನವಾಗಿದ್ದು ಎಲ್ಲ ಮುಖಂಡರು ಒಮ್ಮತದಿಂದ ಚುನಾವಣೆ ಬಹಿಷ್ಕರಿಸಲು ಸಮ್ಮತಿಸಿದ್ದಾರೆಂದು ಹೇಳಿದರು.