ಸೋಲಿನ ಭಯದಿಂದ ತಮಗೆ ಬೇಕಾದಂತೆ ಮತಪಟ್ಟಿ
ಹುಬ್ಬಳ್ಳಿ: ಬಿಜೆಪಿ ಮುಂಬರುವ ವಿಧಾನಸಭಾ ಕ್ಷೇತ್ರದಲ್ಲಿ ಸೋಲುವ ಭಯದಲ್ಲಿ, ಸಂವಿಧಾನ ಬಾಹಿರವಾಗಿ ಮತದಾರರ ಪಟ್ಟಿಯನ್ನು ತಮಗೆ ಬೇಕಂತೆ ತಯಾರಿಸು ತ್ತಿದ್ದು, ಈ ಹಿನ್ನೆಲೆಯಲ್ಲಿ ಕೂಡಲೇ ಜಿಲ್ಲಾ ಚುನಾವಣೆ ಅಧಿಕಾರಿಗಳು ನ.10 ರಂದು ಹೊರಡಿಸಿದ ಅಂತಿಮ ಮತದಾರರ ಪಟ್ಟಿಯನ್ನು, ಪುನರ್ ಪರಿಶೀಲನೆ ನಡೆಸ ಬೇಕೆಂದು ಕೆಪಿಸಿಸಿ ರಾಜ್ಯ ಮಾಧ್ಯಮ ವಕ್ತಾರ ಪಿ.ಎಚ್.ನೀರಲಕೇರಿ ಒತ್ತಾಯಿಸಿದರು.
ಪತ್ರಿಕಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಆಯೋಗ ಮತಯಾದಿ ಯನ್ನು ಪರಿಷ್ಕರಣೆ ಮಾಡುವ ಅಧಿಕಾರ ಹೊಂದಿದೆ. ಆದರೆ ಬಿಜೆಪಿ ಸರ್ಕಾರ ಖಾಸಗಿ ಏಜೆನ್ಸಿಗಳಿಗೆ ಚುನಾವಣೆ ಪಟ್ಟಿ ತಯಾರಿಸಲು ಅನುಮತಿ ಕೊಟ್ಟು, ಕಾನೂನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಹು-ಧಾ ಪಶ್ಚಿಮ ಕ್ಷೇತ್ರದಲ್ಲಿ ಈ ಹಿಂದೆ 22 ಸಾವಿರ ಜನರನ್ನು ಹೊರ ರಾಜ್ಯದ ಜನರನ್ನು ಸೇರಿಸುವ ಪ್ರಯತ್ನ ಮಾಡಿದರು. ಇದೀಗ ಮತದಾರರ ಯಾದಿಯಲ್ಲಿ 18,500 ಮತಗಳನ್ನು ತೆಗೆದು ಹಾಕುವ ಹುನ್ನಾರ ಮಾಡಿದೆ. ಈ ಬಗ್ಗೆ ಜನರು ಪ್ರಶ್ನೆ ಮಾಡಿದರು ಅಧಿಕಾರಿಗಳಿಂದ ಯಾವುದೇ ಸ್ಪಂದನೆ ದೊರೆಯುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನರ ಅಭಿವೃದ್ಧಿ ಮಾಡುವಲ್ಲಿ ವಿಫಲವಾಗಿವೆ. ಹೀಗಾಗಿ ಸೋಲುವ ಭಯ ಹೆಚ್ಚಾಗಿದ್ದು, ಹೀಗಾಗಿ ಬಿಜೆಪಿಯ ಐಟಿ ವಿಭಾಗ ತಂತ್ರಜ್ಞಾನ ಮೂಲಕ ಮೋಸದ ಜಾಲ ರೂಪಿಸಿದೆ. ಬಿಜೆಪಿಗೆ ಮತಹಾಕದ ಜನರನ್ನು ಟಾರ್ಗೆಟ್ ಮಾಡಿ ಅವರನ್ನು ತೆಗೆದುಹಾಕುವ ಕೆಲಸ ಆಗುತ್ತಿದೆ. ಇದು ಪ್ರಜಾಪ್ರಭುತ್ವದ ಮೂಲ ಆಶಯಕ್ಕೆ ದಕ್ಕೆ ತರುವ ಕೆಲಸ ಆಗಿದೆ. ರಾಜ್ಯದಲ್ಲಿ 1.40 ಲಕ್ಷ ಮತದಾರರನ್ನು ಟಿಲಿಟ್ ಮಾಡಲಾಗಿದ್ದರೇ, ಜಿಲ್ಲೆಯಲ್ಲಿ 27 ಲಕ್ಷ ಮತದಾರರ ಹೆಸರನ್ನು ತೆಗೆದು ಹಾಕಲಾಗಿದೆ. ಕೂಡಲೇ ಚುನಾವಣೆ ಅಧಿಕಾರಿಗಳು ರಾಜಕೀಯ ಪಕ್ಷಗಳ ಹಸ್ತಕ್ಷೇಪವಿಲ್ಲದೇ ಪಾರದರ್ಶಕವಾಗಿ ಮತದಾರರ ಪಟ್ಟಿ ತಯಾರಿಸಬೇಕೆಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಮಾಜಿ ಸಂಸದ ಐ.ಜಿ.ಸನದಿ, ಮುಖಂಡರಾದ ಡಿ.ಎಮ್.ದೊಡ್ಡಮನಿ, ವಿ.ಜಿ.ಕೊಂಗವಾಡ ಪಾಲ್ಗೊಂಡಿದ್ದರು.