ಹುಬ್ಬಳ್ಳಿ: ಮಹಾನಗರದ ನಿಷ್ಟಾವಂತ ಬಿಜೆಪಿ ದಲಿತ ಕಾರ್ಯಕರ್ತರ ಹತ್ತಿಕ್ಕುತ್ತಿರುವ ಕೃತ್ಯ ಖಂಡಿಸಲು ದಿ.28ರಂದು ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಲು ಹಲವರು ಮುಂದಾಗಿದ್ದು ಈ ಬಗ್ಗೆ ಚರ್ಚಿಸಲು ದಿ.27ರಂದು ಸಂಜೆ ನಾಲ್ಕು ಗಂಟೆಗೆ ಕೃಷ್ಣ ಭವನದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ.
ಸಭೆಯ ಅಧ್ಯಕ್ಷತೆಯನ್ನು ಹಿರಿಯ ಕಾರ್ಯಕರ್ತ ಲಕ್ಷಣ ಬೀಳಗಿ ವಹಿಸಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಅಪೇಕ್ಷಿತರು ಆಗಮಿಸಬೇಕೆಂದು ಹಿರಿಯ ನಿಷ್ಟಾವಂತ ಕಾರ್ಯಕರ್ತ ಹನುಮಂತಪ್ಪ ಚಲವಾದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇತ್ತೀಚಿನ ಪಾಲಿಕೆ ಚುನಾವಣೆ ವೇಳೆ ಸಹಿತ ವಿವಿಧ ಸಂದರ್ಭದಲ್ಲಿ ಪಕ್ಷದಲ್ಲಿ ಅನೇಕ ವರ್ಷಗಳಿಂದ ಪಕ್ಷದಲ್ಲಿ ಇರುವ ದಲಿತ ಮುಖಂಡರನ್ನು ನಿರ್ಲಕ್ಷಿಸಲಾಗುತ್ತಿರುವುದು ಅನೇಕ ನಿಷ್ಟಾವಂತರಿಗೆ ಇರಿಸು ಮುರಿಸು ತಂದಿದ್ದು ಈ ಹಿನ್ನೆಲೆಯಲ್ಲಿ ದಿ.28,29ರಂದು ನಗರದಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ನಡೆಯಲಿದ್ದು ಆ ವೇಳೆಯಲ್ಲೇ ಸಾಂಕೇತಿಕ ಧರಣಿ ನಡೆಸುವ ಮೂಲಕ ಗಮನ ಸೆಳೆಯಲು ಮುಂದಾಗಿದ್ದಾರೆ.
ಒಂದೆಡೆ ಹಾನಗಲ್ ಸೋಲು, ಅಲ್ಲದೇ ಇತ್ತೀಚಿನ ಪರಿಷತ್ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸೋದರ ಪ್ರದೀಪ ಶೆಟ್ಟರ್ ದ್ವಿತೀಯ ಸ್ಥಾನಿಯಾಗಿ ಆಯ್ಕೆಯಾಗಿರುವುದರಿಂದ ಕೇಸರಿ ಪಾಳೆಯದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದು ಜಗಜ್ಜಾಹೀರಾಗಿದ್ದು ಈಗ ದಲಿತರ ಆಕ್ರೋಶವು ಸ್ಪೋಟಗೊಂಡಿರುವುದಲ್ಲದೇ ಪ್ರತಿಭಟನೆಗೆ ಮುಂದಾಗಿದ್ದು ಪಕ್ಷದ ಪ್ರಮುಖರು ಯಾವ ನಿಲುವು ತಳೆಯಲಿದ್ದಾರೆಂಬುದು ಕುತೂಹಲ ಕೆರಳಿಸಿದೆ.
ಪಾಲಿಕೆ ಚುನಾವಣೆ ಸಂದರ್ಭದಲ್ಲಿ ಆಯಾ ಪ್ರದೇಶದ ಅನೇಕ ಪ್ರಮುಖರನ್ನು ಕಮಲ ಪಡೆ ನಿರ್ಲಕ್ಷಿಸಿದ ಪರಿಣಾಮ ಹಲವು ಕಡೆ ಸೋಲುಣ್ಣುವಂತಾಯಿಲ್ಲದೇ ಗೋಕುಲ ರಸ್ತೆಯ ಎಡ ಭಾಗದಲ್ಲಿರುವ ಮೂರು ವಾರ್ಡುಗಳಲ್ಲಿ ‘ಬಿಜೆಪಿಯ ಸ್ವಚ್ಛತಾ ಅಭಿಯಾನ’ವಾಗಿತ್ತಲ್ಲದೇ ನಾಯಕರ ಮಧ್ಯದ ಹೊಂದಾಣಿಕೆ ಕೊರತೆಯಿಂದ ಟಾರ್ಗೆಟ್ 50 ಎನ್ನುತ್ತಿದ್ದವರು ಅಂತಿಮವಾಗಿ ಬಹುಮತಕ್ಕೆ ಪರದಾಡುವಂತಾಗಿತ್ತು.
bjp neglect dalit leaders/25-12-2021