ಆತ್ಮಾವಲೋಕನದಲ್ಲಿ ಮನದಾಳದ ಮಾತು
ಬೇರೆಯವರ ಡಿಪ್ರೆಷನ್‌ಗೆ ಕಳುಹಿಸುವೆ ಲೋಕಸಭೆ ಚುನಾವಣೆಯಲ್ಲೂ ತಕ್ಕ ಪಾಠ
ಹುಬ್ಬಳ್ಳಿ : ಸೆಂಟ್ರಲ್ ಕ್ಷೇತ್ರದಲ್ಲಿ ಸೋಲಿನ ಬಳಿಕ ಶೆಟ್ಟರ್ ಖಿನ್ನತೆಗೊಳಗಾಗುತ್ತಾರೆ ಎಂದು ಕೆಲವರು ಭಾವಿಸಿದ್ದರು.ಆದರೆ ನಾನು ಡಿಪ್ರೆಷನ್‌ಗೆ ಹೋಗುವುದಿಲ್ಲ. ಬೇರೆಯವರನ್ನು ಡಿಪ್ರೆಷನ್‌ಗೆ ಕಳಿಸುತ್ತೇನೆ. ನಾನು ವೈಯಕ್ತಿಕವಾಗಿ ಚುನಾವಣೆಯಲ್ಲಿ ಸೋತಿರಲಿಲ್ಲ. ನಮ್ಮ ಕುಟುಂಬದಲ್ಲಿ ಸೋತಂತಹ ಅನುಭವ ಇದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.
ಕೇಶ್ವಾಪುರದಲ್ಲಿ ನಡೆದ ಹು.ಧಾ.ಸೆಂಟ್ರಲ್ ಕ್ಷೇತ್ರದ ಸೋಲಿನ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದ ಅವರು, ಈ ಕ್ಷೇತ್ರದಲ್ಲಿ ನಾನು ಸೋತಿರಬಹುದು. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದಿದೆ. ಇದರಿಂದಾಗಿ ದೆಹಲಿಯಲ್ಲಿರುವ ಬಿಜೆಪಿ ನಾಯಕರು ಈ ಫಲಿತಾಂಶದಿಂದ ಶಾಕ್ ಆಗಿದ್ದಾರೆ ಎಂದರು.
ದೆಹಲಿ ನಾಯಕರು ಇಂತಹ ಫಲಿತಾಂಶ ಬರುತ್ತೆ ಅಂತ ನಿರೀಕ್ಷಿಸಿರಲಿಲ್ಲ. 135 ಸೀಟುಗಳಲ್ಲಿ ಗೆದ್ದಿದ್ದೇವೆ. ರಾಷ್ಟ್ರ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ ಎಂದರು.
ಯಡಿಯೂರಪ್ಪ, ಈಶ್ವರಪ್ಪ, ದೇವೇಗೌಡ ಸೇರಿದಂತೆ ಹಲವಾರು ನಾಯಕರು ಅಲ್ಲದೇ, ಸಿದ್ಧರಾಮಯ್ಯ ಅವರೂ ಸೋತೇ ಮುಂದೆ ಬಂದಿದ್ದಾರೆ. ಸಿದ್ಧರಾಮಯ್ಯ ಸೋತ ನಂತರ ಎರಡು ಬಾರಿ ಸಿಎಂ ಆಗಿದ್ದಾರೆ ಎಂದರು.
ಮುಂದೆ ಬಹಳಷ್ಟು ಚುನಾವಣೆಗಳು ಬರಲಿವೆ. ಗ್ರಾಮೀಣ ಮಟ್ಟದಲ್ಲಿ ಕಾಂಗ್ರೆಸ್ ಬಲಿಷ್ಠವಾಗಿವೆ. ಚುನಾವಣೆ ಘೋಷಣೆಯಾದರೆ, ಬಹುತೇಕ ಜಿಲ್ಲಾ, ತಾಲೂಕು ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಲೋಕಸಭಾ ಚುನಾವಣೆ ಬಗ್ಗೆ ಗಂಭೀರ ವಾಗಿ ಆಲೋಚಿಸಬೇಕಾಗಿದೆ. ಕಳೆದ ಬಾರಿ ರಾಜ್ಯದ 25ಸೀಟುಗಳಲ್ಲಿ ಬಿಜೆಪಿ ಗೆದ್ದಿತ್ತು. ಮುಂದಿನ ಚುನಾವಣೆಯಲ್ಲಿ ಅದು ಉಲ್ಟಾ ಆಗಲಿದೆ. ರಾಜ್ಯ ವಿಧಾನಸಭೆ ಚುನಾವಣೆ ಲೋಕಸಭಾ ಚುನಾವಣೆಯ ದಿಕ್ಸೂಚಿಯಾಗಲಿದೆ ಎಂದರು.
ಹಣದ ಪ್ರಭಾವದಿಂದ ಬಿಜೆಪಿ ಚುನಾವಣೆಯಲ್ಲಿ ಗೆದ್ದಿತು. ನಾನು ಯಾವುದೇ ಸಂದರ್ಭದಲ್ಲಿ ಹಣ ಹಂಚಿದ್ದಿಲ್ಲ. ಹಣ ಬಲ ಜೊತೆಗೆ ಒತ್ತಡ ತಂದರು. ಜನ ಬಿಜೆಪಿ ಮೈಂಡ್ ಸೆಟ್‌ನಿಂದ ಹೊರ ಬರೋಕೆ ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ. ಒಂದೆರಡು ತಿಂಗಳಲ್ಲಿ ಜನರ ಮೈಂಡ್ ಸೆಟ್ ಬದಲಾಗಲಿದೆ. ತಪ್ಪುಗಳನ್ನು ಸರಿಮಾಡಿಕೊಂಡು ಹೋದರೆ ಬರುವ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯ
ಎಂದರು.
ಗ್ಯಾರಂಟಿ ಬಗೆಗೆ ಪ್ರತಿಪಕ್ಷಗಳು ಈಗಾಗಲೇ ಕೂಗೆಬ್ಬಿಸಿವೆ. ಐದರ ಪೈಕಿ ಕನಿಷ್ಟ ಮೂರು ಗ್ಯಾರಂಟಿ ಜಾರಿಗೆ ತಂದ್ರೂ ಲೋಕಸಭೆಯಲ್ಲಿ ಗೆಲುವು ಖಚಿತವೆಂದ ಅವರು,ಗ್ಯಾರಂಟಿ ಜಾರಿಗೆ ಸಮಯಾವಕಾಶ ಬೇಕಾಗುತ್ತದೆ. ಸಿಎಂ ಅದನ್ನು ಜಾರಿಗೆ ತರುವರೆಂದರು.
ಮಾಜಿ ಸಂಸದ ಪ್ರೊ.ಐ.ಜಿ.ಸನದಿ, ಮಹಾನಗರ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಗ್ರಾಮೀಣ ಅಧ್ಯಕ್ಷ ಅನಿಲಕುಮಾರ್ ಪಾಟೀಲ್, ಮುಖಂಡರುಗಳಾದ ಮಹೇಂದ್ರ ಸಿಂಘಿ, ರಾಯನಗೌಡ್ರ, ಸತೀಶ್ ಮೆಹರವಾಡೆ, ನಾಗೇಶ ಕಲಬುರ್ಗಿ, ಮಲ್ಲಿಕಾರ್ಜುನ ಸಾಹುಕಾರ್, ಸದಾನಂದ ಡಂಗನವರ, ಅಲ್ತಾಫ್ ಕಿತ್ತೂರ,ದೊರೆರಾಜ ಮಣಿಕುಂಟ್ಲ, ಪಾರಸಮಲ್ ಜೈನ, ಮಹ್ಮದ ಯೂಸೂಫ್ ಸವಣೂರ,ಮೋಹನ ಹಿರೇಮನಿ,ಶಾಂತಣ್ಣ ಕಡಿವಾಳ,ಹೂವಪ್ಪ ದಾಯಗೋಡಿ, ಸಂತೋಷ ಚಲವಾದಿ,ಎಫ್.ಎಚ್.ಜಕ್ಕಪ್ಪನವರ, ಹು-ಧಾ ಪಾಲಿಕೆಯ ಕಾಂಗ್ರೆಸ್ ಸದಸ್ಯರಾದ ಆರೀಫ್ ಭದ್ರಾಪುರ,ಇಕ್ಬಾಲ್ ನವಲೂರ,ಪ್ರಕಾಶ ಕುರಹಟ್ಟಿ ಸೇರಿದಂತೆ ಇತರ ಸದಸ್ಯರು ಇದ್ದರು.
ಜವಾಬ್ದಾರಿ ನಿಭಾಯಿಸಲು ಸಿದ್ದ
ಪಕ್ಷ ಕೊಡುವ ಜವಾಬ್ದಾರಿ ನಿಭಾಯಿಸುವುದಾಗಿ ಪುನರುಚ್ಛರಿಸಿದ ಶೆಟ್ಟರ್ ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಸಂಘಟನೆಗೆ ಸಿದ್ದವಿರುವುದಾಗಿ ಜಗದೀಶ ಶೆಟ್ಟರ್ ಹೇಳಿದರು.