ಹುಬ್ಬಳ್ಳಿ : ವಿಧಾನಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದ್ದು ಕಳೆದ ಅವಧಿಯಲ್ಲಿ ಸಿದ್ದರಾಮಯ್ಯ ತುಳಿದ ಹಾದಿಯಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರೂ ಈ ಬಾರಿ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವ ಚಿಂತನೆ ನಡೆಸಿದ್ದು ಬೆಣ್ಣೆನಗರಿ ದಾವಣಗೆರೆಯತ್ತ ಮುಖ ಮಾಡಿದ್ದಾರೆ ಎನ್ನಲಾಗುತ್ತಿದೆ.
ಬೊಮ್ಮಾಯಿ ಶಿಗ್ಗಾವಿ ಕ್ಷೇತ್ರದಿಂದ ಆಯ್ಕೆಯಾಗಿ ಸಿಎಂ ಗದ್ದುಗೆಗೇರಿದ್ದರೂ ಪ್ರತಿ ಸಲವೂ ಪ್ರಯಾಸದ ಗೆಲುವನ್ನೇ ಖಂಡಿದ್ದಾರಲ್ಲದೇ ಇತ್ತೀಚಿಗೆ ಹಾನಗಲ್ ಉಪಚುನಾವಣೆ ಅಲ್ಲದೇ ಸ್ಥಳೀಯ ಸಂಸ್ಥೆಗಳಲ್ಲಿ ತವರಿನ ಸೋಲು ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವ ಸಾಧ್ಯತೆ ಹೆಚ್ಚಿಸಿದೆ ಎನ್ನಲಾಗಿದೆ.
ಅಲ್ಲದೇ ಪಂಚಮಸಾಲಿ ಸಮುದಾಯದ ಮತಗಳು ನಿರ್ಣಾಯಕವಾಗಿರುವ ಹಿನ್ನೆಲೆಯಲ್ಲಿ ಬೊಮ್ಮಾಯಿ ಅವರಿಗೆ ಶಿಗ್ಗಾವಿ ಸುಲಭ ತುತ್ತಲ್ಲ ಎಂಬ ಮಾತು ಕೇಳಿ ಬರುತ್ತಿದ್ದು, ತಮ್ಮದೇ ಸಮುದಾಯದ ಪ್ರಾಬಲ್ಯವಿರುವ (ಸಾದರ ಲಿಂಗಾಯತರು) ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಸ್ಪರ್ಧಿಸುವ ಬಗೆಗೆ ಉತ್ಸುಕರಾಗಿದ್ದು, ಈಗಾಗಲೇ ಈ ವಿಚಾರವಾಗಿ ಎರಡು ಸುತ್ತಿನ ಮಾತುಕತೆ ಸಹ ನಡೆದಿದೆ ಎನ್ನಲಾಗಿದೆ.
ದಾವಣಗೆರೆ ಉತ್ತರ ಬಿಜೆಪಿ ಶಾಸಕ ರವೀಂದ್ರನಾಥ ಈಗಾಗಲೇ ತಾವು ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದು ಈ ಹಿನ್ನೆಲೆಯಲ್ಲಿ
ಸಂಸದ ಜಿಎಂ ಸಿದ್ದೇಶ್ವರ್, ರವೀಂದ್ರನಾಥ್ ಗೆ ಚುನಾವಣೆಯ ಜವಾಬ್ದಾರಿಯನ್ನು ವಹಿಸಲಾಗಿದೆ ಎನ್ನುವ ಮಾತುಗಳು ಕೇಳಿ ಬಂದಿವೆ.
ಪ್ರಚಾರ ಇನ್ನಿತರ ಕಾರಣಗಳಿಂದಾಗಿ ಸುರಕ್ಷಿತ ಕ್ಷೇತ್ರದತ್ತ ಬೊಮ್ಮಾಯಿ ಕಣ್ಣು ಇಟ್ಟಿದ್ದು ಇದಕ್ಕೆ ಪುಷ್ಠಿ ನೀಡುವಂತೆ ಹಾಲಿ ಶಾಸಕ ರವೀಂದ್ರನಾಥ ಹೇಳಿಕೆ ನೀಡಿದ್ದಾರೆ.
ಕಳೆದ 3-4 ತಿಂಗಳ ಅವಧಿಯಲ್ಲಿ ತಮ್ಮ ಕ್ಷೇತ್ರಕ್ಕಿಂತ ಹೆಚ್ಚು ಬಾರಿ ದಾವಣಗೆರೆಗೆ ಸಿಎಂ ಭೇಟಿ ನೀಡಿದ್ದಲ್ಲದೇ ತಮ್ಮದೇ ಸಮುದಾಯದ ಶೇ.60ರಷ್ಟು ಮತದಾರರು ಇಲ್ಲಿರುವುದು ಪ್ರಮುಖ ಕಾರಣವಾಗಿದೆ ಎನ್ನಲಾಗುತ್ತಿದೆ.
2018ರಲ್ಲಿ ಸಹ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಹಾಗೂ ಬಾದಾಮಿಯಿಂದ ಸ್ಪರ್ಧಿಸಿದ್ದನ್ನು ಸ್ಮರಿಸಬಹುದಾಗಿದೆ.
“ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. ಯಾರೇ ಬಂದರೂ ನಾವು ಅವರ ಗೆಲುವಿಗೆ ಶ್ರಮಿಸುತ್ತೇವೆ. ಬಸವರಾಜ ಬೊಮ್ಮಾಯಿ ಈಗಾಗಲೇ ಎರಡು ಬಾರಿ ಮಾತುಕತೆ ನಡೆಸಿದ್ದಾರೆ. ಇದುವರೆಗೆ ಯಾವುದೇ ಚರ್ಚೆ ಪಕ್ಷದ ವೇದಿಕೆಯಲ್ಲಿ ಆಗಿಲ್ಲ. ಅಂತಿಮವಾಗಿ ಪಕ್ಷದ ಹೈಕಮಾಂಡ್ ಸ್ಪರ್ಧೆ ಬಗ್ಗೆ ನಿರ್ಧರಿಸಲಿದೆ. ಎಸ್.ಎ.ರವೀಂದ್ರನಾಥ ಶಾಸಕ