ಹುಬ್ಬಳ್ಳಿ-ಧಾರವಾಡ ಸುದ್ದಿ

ಮಂತ್ರಿಗಿರಿ ಮೇಲೆ ಬೊಮ್ಮಾಯಿ ಕಣ್ಣು: ಜೋಶಿಯವರಿಗೆ ’ಪ್ರೀತಿಯ ಖೆಡ್ಡಾ’!

ಮಾಜಿ ಸಿಎಂನಿಂದ ’ಮುಂದಾಲೋಚನೆ ಬಾಣ’

ಹಾವೇರಿ ಗೆದ್ದರೆ ಶಿಗ್ಗಾಂವಿಯಿಂದ ಮಗನ ಕಣಕ್ಕಿಳಿಸುವ ಲೆಕ್ಕಾಚಾರ

ಹುಬ್ಬಳ್ಳಿ : ಲೋಕಸಭಾ ಫಲಿತಾಂಶದ ದಿನಗಣನೆ ಆರಂಭವಾಗಿದ್ದು ಆಡಳಿತಾರೂಢ ಕಾಂಗ್ರೆಸ್ ಮತ್ತು ಕಳೆದ ಬಾರಿ ಕಾಲು ಶತಕ ಹೊಡೆದಿದ್ದ ಬಿಜೆಪಿ ಎರಡೂ ಪಕ್ಷಗಳೂ ತಮ್ಮದೇ ಪಕ್ಷದ ಆಂತರಿಕ ಸಮೀಕ್ಷೆ, ಗುಪ್ತದಳದ ಮಾಹಿತಿಗಳ ಮೇಲೆ 15ಕ್ಕೂ ಹೆಚ್ಚು ಸ್ಥಾನಗಳು ತಮ್ಮ ಬುಟ್ಟಿಗೆ ಎಂಬ ವಿಶ್ವಾಸದಲ್ಲಿವೆ.
ತೀವ್ರ ಕುತೂಹಲ ಕೆರಳಿಸಿದ್ದ ಅಲ್ಲದೇ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಪುತ್ರನಿಗೆ ಕಾಗೆ ಹಾರಿಸಿದ ಹಾವೇರಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪರವಾದ ವಾತಾವರಣ ಇಲ್ಲ ಎಂಬುದು ಮತದಾನದ ನಂತರ ಕೇಳಿ ಬರುತ್ತಿರುವ ಮಾತಾಗಿದ್ದರೂ, ಅವರು ಮತದಾನಕ್ಕೂ ಮೊದಲೇ ಕೇಂದ್ರ ಮಂತ್ರಿಗಿರಿಯ ಮೇಲೆ ಕಣ್ಣಿಟ್ಟು ಅದಕ್ಕನುಗುಣವಾಗಿ ತಂತ್ರಗಾರಿಕೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.


ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನ ವಿಜಯೇಂದ್ರ ಪಾಲಾಗಿ, ಆರ್.ಅಶೋಕ್‌ಗೆ ವಿಪಕ್ಷ ನಾಯಕ ಪಟ್ಟ ಕಟ್ಟಿದ ನಂತರ ಇನ್ನು ಮುಂದೆ ರಾಜ್ಯದಲ್ಲಿ ತನಗೆ ಭವಿಷ್ಯ ಇಲ್ಲ ಎಂದು ಗೊತ್ತಾಗಿ ವಿಲ ವಿಲ ಒದ್ದಾಡಿದ್ದ ಬೊಮ್ಮಾಯಿ ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ ಸರ್ಕಾರ ಗ್ಯಾರಂಟಿ. ಮಾಜಿ ಸಿಎಂ ಲೆಕ್ಕಾಚಾರದಲ್ಲಿ ಕೇಂದ್ರ ಸಂಪುಟದಲ್ಲೂ ಗೂಟದ ಕಾರು ನಿಶ್ಚಿತ ಎಂಬ ಲೆಕ್ಕಾಚಾರದಲ್ಲೇ ’ಪೇಮೆಂಟ್ ಸೀಟ್’ ತೆಗೆದುಕೊಂಡು ಬಂದಿದ್ದು ಎಂಬುದು ಬಿಜೆಪಿ ಪಾಳೆಯದಲ್ಲಿನ ಮೇಲಸ್ತರದ ಎಲ್ಲ ನಾಯಕರಿಗೂ ಗೊತ್ತಿರುವ ಸಂಗತಿ.
ಹಾವೇರಿಯಲ್ಲಿ ಕಾಂಗ್ರೆಸ್‌ನ ಆನಂದ ಗಡ್ಡದೇವರಮಠ ಎದುರು ಸೆಣಸಾಟ ನಡೆಸಿದ ಹುಬ್ಬಳ್ಳಿ ಆದರ್ಶ ನಗರದ ವೀರಪುತ್ರನಿಗೆ ಗದಗ ಜಿಲ್ಲೆಯ ಗದಗ, ರೋಣ ಮತ್ತು ಶಿರಹಟ್ಟಿ ಒಳಗೊಂಡ ಹಾವೇರಿ ಕ್ಷೇತ್ರದಲ್ಲಿ ಹೋದ ಕಡೆಯಲ್ಲೆಲ್ಲಾ ಪಕ್ಷದ ಕಾರ್ಯಕರ್ತರ ಅಸಮಾಧಾನ, ಬಂಡಾಯದ ಬಿಸಿ ತಟ್ಟಿದ್ದರೂ ಹಣ ಬಲದಿಂದ ಗೆಲ್ಲುವ ತಮ್ಮ ಸ್ವಕ್ಷೇತ್ರ ಶಿಗ್ಗಾಂವಿ ಚಾಳಿಯಲ್ಲೇ ಚುನಾವಣೆ ನಡೆಸಿದ್ದಾರೆ. ಹಾವೇರಿ ಕ್ಷೇತ್ರ ವ್ಯಾಪ್ತಿಯ ೮ ವಿಧಾನಸಭಾ ಕ್ಷೇತ್ರಗಳಲ್ಲಿ ಏಳರಲ್ಲಿ ಕಾಂಗ್ರೆಸ್ ಶಾಸಕರಿದ್ದು, ಶಿರಹಟ್ಟಿ ಮಾತ್ರ ಬಿಜೆಪಿ ವಶದಲ್ಲಿದೆ. ಶಿರಹಟ್ಟಿ ಸಹ ಕಾಂಗ್ರೆಸ್ ಅಭ್ಯರ್ಥಿ ಆನಂದ ಅವರ ತಂದೆ ಸಜ್ಜನ ರಾಜಕಾರಣಿ ಮಾಜಿ ಶಾಸಕ ಎಸ್.ಜಿ.ಗಡ್ಡದೇವರಮಠ ಪ್ರತಿನಿಧಿಸಿದ ಕ್ಷೇತ್ರವಾಗಿದೆ. ಸಚಿವ ಎಚ್.ಕೆ.ಪಾಟೀಲ ಉಸ್ತುವಾರಿ, ಹಾನಗಲ್ ಶಾಸಕ ಶ್ರೀನಿವಾಸ ತಂತ್ರಗಾರಿಕೆ ಸಹಿತ ಎಲ್ಲ ಕಾಂಗ್ರೆಸ್ ಶಾಸಕರ ಶ್ರಮ ಮೊದಲ ಬಾರಿಗೆ ಕೈ ಪಾಳೆಯಕ್ಕೆ ಆಶಾದಾಯಕ ಎಂಬ ಮಾತುಗಳು ಎಲ್ಲ ವಲಯಗಳಲ್ಲಿ ಕೇಳಿ ಬರುತ್ತಿವೆ. ಅಲ್ಲದೇ ಒಂದಷ್ಟು ಗ್ಯಾರಂಟಿಯೂ ಪ್ಲಸ್ ಆಗಿದೆ ಎಂಬ ಮಾಹಿತಿಯಿದೆ.


ಹಾವೇರಿಯಲ್ಲಿ ತಾನು ಗೆದ್ದು ಕೇಂದ್ರದಲ್ಲಿ ಎನ್ ಡಿಎ ಅಧಿಕಾರಕ್ಕೆ ಬಂದಲ್ಲಿ ಮಂತ್ರಿಯಾಗಲೇಬೇಕೆಂದು ಪಣ ತೊಟ್ಟಿರುವ ಬೊಮ್ಮಾಯಿ ಆ ನಿಟ್ಟಿನಲ್ಲಿ ತನಗೆ ಯಾರೂ ಅಡ್ಡಿಯಾಗಬಾರದೆಂಬ ’ಮುಂದಾಲೋಚನೆ ಬಾಣ’ವನ್ನೂ ಈಗಾಗಲೇ ಪ್ರಯೋಗಿಸಿದ್ದಾರೆಂಬುದು ಬೆಳಕಿಗೆ ಬಂದಿದೆ.
ಗುಪ್ತ ಸಂದೇಶ: ತಮ್ಮ ಮುಖ್ಯಮಂತ್ರಿಗಿರಿಗೆ ಬೆಂಗಾವಲಾಗಿದ್ದ ಅಲ್ಲದೇ ಹಾವೇರಿ ಟಿಕೆಟ್ ದೊರೆಯಲೂ ಕಾರಣೀಕರ್ತರಾದ ಕೇಂದ್ರದ ಪ್ರಭಾವಿ ಸಚಿವ ಪ್ರಹ್ಲಾದ ಜೋಶಿಯವರಿಗೂ ಬೊಮ್ಮಾಯಿ ಕೈ ಕೊಟ್ಟಿರುವರೆಂಬ ಗುಸು ಗುಸು ಕೇಳಿ ಬರುತ್ತಿದೆ. ಜೋಶಿ ಆಯ್ಕೆಯಾದರೆ ನೆರೆಯ ಜಿಲ್ಲೆಯವರಾದ ತಮಗೆ ಕೇಂದ್ರ ಸಂಪುಟದಲ್ಲಿ ಮಣೆ ಹಾಕುವ ಸಾಧ್ಯತೆ ಕಡಿಮೆ ಎಂಬ ಸಾಧ್ಯತೆಯಿರುವುದರಿಂದ ತಮ್ಮ ಸಮುದಾಯದವರಿಗೆ ಜೋಶಿ ಬೆಂಬಲಿಸದಂತೆ ಸ್ಪಷ್ಟವಾದ ಗುಪ್ತ ಸಂದೇಶವನ್ನು ರವಾನಿಸಿ ಖೆಡ್ಡಾ ತೋಡಿದ್ದಾರೆಂಬ ಮಾತು ದಟ್ಟವಾಗಿ ಕೇಳಿ ಬರುತ್ತಿದೆ.
ಮಗನಿಗೆ ಪಟ್ಟಕ್ಕೆ ಸಿದ್ಧ್ದತೆ: ಮುಖ್ಯಮಂತ್ರಿ ಹುದ್ದೆಯಂತಹ ದೊಡ್ಡ ಪಟ್ಟಕ್ಕೇರಿದರೂ ಇನ್ನೂ ಸಣ್ಣತನದ ಚಾಳಿಯನ್ನು ಬಿಡದೆ ಉಳಿಸಿಕೊಂಡಿರುವ ರಾಜ್ಯದ ಏಕೈಕ ರಾಜಕಾರಣಿಯಾಗಿರುವ ಬೊಮ್ಮಾಯಿ ತನ್ನ ಕಷ್ಟದ ದಿನಗಳಲ್ಲಿ ನೆರವಾದವರು, ಮಹದಾಯಿ ಹೋರಾಟಕ್ಕೆ ಕಾಲ್ನಡಿಗೆಯಲ್ಲಿ ಹೆಜ್ಜೆ ಹಾಕಿದವರು, ಆದರ್ಶ ನಗರದ ಮನೆ ಬಾಗಿಲನ್ನು ಹಗಲೂ ರಾತ್ರಿ ಕಾದವರು, ಹೊತ್ತಲ್ಲದ ಹೊತ್ತಲ್ಲಿ ಅಗತ್ಯ ಪೂರೈಸಿದವರು, ಬೆಳಗಿನ ಜಾವ ರಾಣಿ ಚೆನ್ನಮ್ಮ ರೈಲಿಗೆ ಬಂದಾಗ ನಿದ್ದೆಗಣ್ಣಲ್ಲಿ ಬಂದು ಸೂಟ್‌ಕೇಸ್ ಹಿಡಿದವರೆಲ್ಲವರ ರಾಜಕೀಯ ಜೀವನ ಅಕ್ಷರಶಃ ಬೀದಿ ಪಾಲು ಮಾಡಿದ್ದು ಇವರೇ. ಅವರೆಲ್ಲರೂ ಇಂದು ಜಗದೀಶ ಶೆಟ್ಟರ್, ಪ್ರಹ್ಲಾದ ಜೋಶಿಯವರ ಮುಂತಾದವರ ನೆರಳಲ್ಲಿ ಎದ್ದು ನಿಂತಿದ್ದಾರೆ.


ಚುನಾವಣೆಯಲ್ಲಿ ಸೋತರೆ ಚಿಂತೆಯಿಲ್ಲ. ಶಿಗ್ಗಾಂವಿ ಶಾಸಕ ಸ್ಥಾನ ಮುಂದುವರಿಯಲಿದ್ದು, ಹಾವೇರಿಯಿಂದ ಆಯ್ಕೆಯಾದಲ್ಲಿ ತೆರವಾಗುವ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಕ್ಕೆ ಈಗಾಗಲೇ ಮಗ ಭರತ ಬೊಮ್ಮಾಯಿಗೆ ಪಟ್ಟ ಕಟ್ಟಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇತ್ತೀಚಿನ ಲೋಕ ಸಮರದ ವೇಳೆ ಬಿಡಿಗಾಸೂ ಸಹ ಈತನಿಂದಲೇ ರವಾನೆಯಾಗಿದ್ದು ಮುಂದಿನ ಮುನ್ಸೂಚನೆಯಾಗಿದೆ. ಇದುವರೆಗೆ ಶಿಗ್ಗಾಂವಿಯಲ್ಲಿ ಬೊಮ್ಮಾಯಿ ಪಲ್ಲಕ್ಕಿ ಹೊತ್ತಿದ್ದ ಅನೇಕರಿಗೆ ಆಕಾಶ ತೋರಿಸಿ ಮಗನಿಗೆ ಪಟ್ಟಕಟ್ಟುವ ದೂರಾಲೋಚನೆಯ ಸುಳಿವು ಸ್ಥಳೀಯ ಮುಖಂಡರಿಗೂ ದೊರೆತಿದೆ.
1994ರಲ್ಲಿ ಹುಬ್ಬಳ್ಳಿ ಗ್ರಾಮೀಣದಲ್ಲಿ ಜಗದೀಶ ಶೆಟ್ಟರ್ ವಿರುದ್ಧ 23,254 ಮತಗಳ ಸೋಲಿನ ರುಚಿಯುಂಡ ಸೇಡನ್ನು ಕಳೆದ ವಿಧಾನಸಭೆ(2023) ಚುನಾವಣೆ ವೇಳೆ ಅವರಿಗೆ ಟಿಕೆಟ್ ನಿರಾಕರಿಸುವಂತೆ ಮಾಡಲು, ಅಲ್ಲದೇ ಪಕ್ಷ ಬಿಟ್ಟು ಹೋಗುವಂತಹ ವಾತಾವರಣ ನಿರ್ಮಿಸುವಲ್ಲಿ ಬೊಮ್ಮಾಯಿ ಕೊಡುಗೆಯೂ ದೊಡ್ಡದಿದೆ ಎಂಬುದು ಪಕ್ಷದಲ್ಲಿ ಎಲ್ಲರಿಗೂ ಗೊತ್ತಿರುವ ವಿಚಾರ. ಈಗ ಕೇಂದ್ರದ ಮಂತ್ರಿಗಿರಿಗಾಗಿ ಧಾರವಾಡ ಕ್ಷೇತ್ರದಲ್ಲಿ ಜೋಶಿಯವರಿಗೂ ತನ್ನ ’ಅಸಲಿಯತ್ತು’ ತೋರಿಸಿದ್ದಾರೆನ್ನುವ ವದಂತಿಯಲ್ಲಿ ಸತ್ಯಾಂಶ ಇರಬಹುದಾಗಿದೆ. ಕುಂದಗೋಳ, ಹುಬ್ಬಳ್ಳಿ, ನವಲಗುಂದ ಮುಂತಾದೆಡೆ ಇವರ ಸಮುದಾಯದ ನಿರ್ಣಾಯಕ ಮತಗಳೂ ಇವೆ ಎಂಬುದು ಅಷ್ಟೆ ಸತ್ಯ.

administrator

Related Articles

Leave a Reply

Your email address will not be published. Required fields are marked *