ಹುಬ್ಬಳ್ಳಿ: ನಗರದಲ್ಲಿ ನಡೆದ ಎರಡು ದಿನಗಳ ಅತ್ಯಂತ ಮಹತ್ವದ ರಾಜ್ಯ ಬಿಜೆಪಿ ಕಾರ್ಯಕಾರಿಣಿಗೆ ಇಂದು ಮಧ್ಯಾಹ್ನ ತೆರೆ ಬಿದ್ದಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಬೂಸ್ಟರ್ ಡೋಸ್ ನೀಡಿದೆಯಲ್ಲದೇ, ನಾಯಕತ್ವ ಬದಲಾವಣೆ,ಪಕ್ಷ ಸರಕಾರದ ಬಗ್ಗೆ ಊಹಾಪೋಹ ಸೃಷ್ಟಿಸುವವರ ವಿರುದ್ದ ಕ್ರಮ ಕೈಗೊಳ್ಳುವ ಸ್ಪಷ್ಟ ಸಂದೇಶ ರವಾನಿಸಿದೆ.
ಮಿಷನ್ 150 ಟಾರ್ಗೆಟ್ ಹೊಂದುವ ಮೂಲಕ ಮುಂದಿನ ಚುನಾವಣೆಯಲ್ಲೇ ಗೆಲ್ಲಲೇಬೇಕೆಂಬ ಸ್ಪಷ್ಟ ಸೂಚನೆಯೊಂದಿಗೆ ಸಂಘಟನೆಗೆ ಸಪ್ತಸೂತ್ರದ ಸಂದೇಶ ರವಾನಿಸಿದೆ.
ಮುಖ್ಯಮಂತ್ರಿ ಬೊಮ್ಮಾಯಿಯವರ ಸುಮಾರು ೧೫೦ ದಿನಗಳ ಸರ್ಕಾರದ ಆಳ್ವಿಕೆಗೆ ಬಹುಪರಾಕ್ ಎನ್ನುವ ಮೂಲಕ 2023ರ ಚುನಾವಣೆಗೆ ಅವರ ನೇತೃತ್ವದಲ್ಲೇ ಹೋಗಲಾಗುವುದೆಂಬ ಸಂದೇಶವನ್ನು ಸ್ವತಃ ಉಸ್ತುವಾಗಿ ಅರುಣಸಿಂಗ್ ರವಾನಿಸಿದ್ದು ಎಲ್ಲ ಅನಿಶ್ಚಿತತೆಗಳಿಗೆ ತೆರೆ ಬಿದ್ದಂತಾಗಿದೆ.
ನಾಯಕತ್ವ ಬಗ್ಗೆ ವದಂತಿ ಹಬ್ಬಿಸುವವರಿಗೆ ಖಡಕ್ ಸಂದೇಶವಲ್ಲದೇ ಸಚಿವರಾದ ಕೆ.ಎಸ್.ಈಶ್ವರಪ್ಪ ಮತ್ತು ಮುರುಗೇಶ ನಿರಾಣಿಯವರ ಕಿವಿ ಹಿಂಡಲಾಗಿದ್ದು, ಯಾವುದೇ ಅಹವಾಲಿದ್ದರೆ ರಾಜ್ಯಾಧ್ಯಕ್ಷರು ಮತ್ತು ಉಸ್ತುವಾರಿ ಗಮನಕ್ಕ ತನ್ನಿ ಎನ್ನಲಾಗಿದೆ. ಬೊಮ್ಮಾಯಿ ನೇತೃತ್ವದ ಸರ್ಕಾರದ ಸಾಧನೆಗಳಿಗೆ ಅಭಿನಂದನಾ ನಿರ್ಣಯವನ್ನೂ ಕೈಗೊಳ್ಳಲಾಗಿದ್ದು, ಒಟ್ಟಿನಲ್ಲಿ ತವರಿನಲ್ಲಿ ನಡೆದ ಕಾರ್ಯಕಾರಿಣಿ ಹುಬ್ಬಳ್ಳಿಯ ಸುಪುತ್ರನ ಪಾಲಿಗೆ ಹೊಸವರ್ಷದ ಹೊಸ್ತಿಲಲ್ಲೇ ಬೆಲ್ಲದ ಸಿಹಿ ನೀಡಿದೆಯಲ್ಲದೇ ಹೊಸ ಹುಮ್ಮಸ್ಸಿಗೆ ಕಾರಣವಾಗಿದೆ.
ಎರಡನೇ ದಿನವಾದ ಇಂದಿನ ಕಾರ್ಯಕಾರಿಣಿಯಲ್ಲಿ ಸಿಎಂ ಸೇರಿದಂತೆ ಸಂಪುಟ ಸದಸ್ಯರು, ಶಾಸಕರು ಹಾಗೂ ಪಕ್ಷದ ಪ್ರಮುಖರು ಪಾಲ್ಗೊಂಡಿದ್ದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ದುಬೈ ಪ್ರವಾಸದ ಹಿನ್ನೆಲೆಯಲ್ಲಿ ದೂರವುಳಿದರೆ, ಅಲ್ಲದೇ ಅಂತಿಮ ಕ್ಷಣದಲ್ಲಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಗೈರಾಗಿದ್ದರಿಂದ ಇಂದಿನ ಕೋರ್ ಕಮೀಟಿಯೇ ರದ್ದುಗೊಂಡಿತು.ಅಲ್ಲದೇ ಎರಡು ದಿನಗಳ ನಿರ್ಣಾಯಕ ಕಾರ್ಯಕಾರಿಣಿಗೆ ರಮೇಶ ಜಾರಕಿಹೊಳಿ ಸಹೋದರರು ಹಾಜರಾಗದೇ ಇರುವುದು ಸಹ ಅನೇಕ ಗುಸು ಗುಸುಗಳಿಗೆ ಕಾರಣವಾಗಿದೆ.
ಇನ್ನೊಂದೆಡೆ ಸರ್ಕಾರ ಹೊರ ತಂದ ಹೊಸ ಮಾರ್ಗಸೂಚಿಯಿಂದ ತಪ್ಪು ಸಂದೇಶ ರವಾನೆಯಾಗುವ ಹಿನ್ನೆಲೆಯಲ್ಲಿ ಪಾಲ್ಗೊಳ್ಳುವವರ ಸಂಖ್ಯೆಯನ್ನೂ ಕಡಿತಗೊಳಿಸಲಾಯಿತು.
ದಶಕದ ನಂತರ ನಡೆದ ಕಾರ್ಯಕಾರಿಣಿಯನ್ನು ಮಾಜಿ ಸಿಎಂ ಜಗದೀಶ ಶೆಟ್ಟರ್, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ,ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ವಿಭಾಗೀಯ ಪ್ರಭಾರಿ ಲಿಂಗರಾಜ ಪಾಟೀಲ ತಂಡ ಕಾರ್ಯಕರ್ತರ ಪಡೆಯೊಂದಿಗೆ ಅಕ್ಷರಶಃ ಯಶಸ್ವಿಗೊಳಿಸಿದೆ.
ವೈದ್ಯ ಯಾರು ಎಂಬುದೇ ಗೊತ್ತಿಲ್ಲ
ಹುಬ್ಬಳ್ಳಿ : ತಮ್ಮ ಮಂಡಿ ನೋವಿಗೆ ಚಿಕಿತ್ಸೆ ನೀಡಿದವರು ಯಾರು ಎಂಬುದೇ ಗೊತ್ತಿರಲಿಲ್ಲ. ಸ್ನೇಹಿತರೊಬ್ಬರು ಹೇಳಿದೆ ಎಂದು ಚಿಕಿತ್ಸೆ ಪಡೆದಿದ್ದೇನೆ .ಅದು ದೊಡ್ಡ ವಿಚಾರವಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮಾಧ್ಯಮದವರು ತಮಗೆ ಚಿಕಿತ್ಸೆ ನೀಡಿದವರು ನಕಲಿ ವೈದ್ಯನಂತೆ ಎಂದು ಪ್ರಶ್ನಿಸಿದಾಗ ತಮಗೆ ಅವರು ಯಾರು ಅಂತಲೇ ನನಗೆ ಗೊತ್ತಿರಲಿಲ್ಲ ಎಂದರು.
150 ಸ್ಥಾನಗಳ ಗೆಲುವಿಗೆ ಸಂಕಲ್ಪ: ಅರುಣ್ ಸಿಂಗ್
ಹುಬ್ಬಳ್ಳಿ: 2023ರ ವಿಧಾನಸಭೆ ಚುನಾವಣೆಯಲ್ಲಿ 150ಸೀಟುಗಳ ಗೆಲುವಿಗೆ ಸಂಕಲ್ಪ ಮಾಡಿದ್ದೇವೆ. ಸಂಕಲ್ಪ ಈಡೇರಿಸಲು ಪ್ರಯತ್ನಿಸಲಿದ್ದೇವೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು.
ನಗರದಲ್ಲಿ ಆಯೋಜನೆಯಾಗಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯ ಎರಡನೇ ದಿನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ಚುನಾವಣೆಗೆ ಹೋಗಲು ನಿರ್ಧರಿಸಿದ್ದು, ೧೫೦ ಸ್ಥಾನಗಳಲ್ಲಿ ಗೆಲ್ಲುವುದರಲ್ಲಿ ಸಂಶಯವಿಲ್ಲ ಎಂದರು.
ಕಾರ್ಯ ಕಾರಿಣಿ ಯಶಸ್ವಿಯಾಗಿ ನಡೆದಿದ್ದು, ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಪಕ್ಷ ಬಲಪಡಿಸುವ ಕುರಿತು ಚರ್ಚಿಸಲಾಗಿದೆ ಎಂದರು. ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವಿದ್ದ ಸಂದರ್ಭದಲ್ಲಿ ನಿರಂತರ ಹಿಂದೂಗಳ ಹತ್ಯೆ ನಡೆದಿದೆ. ಪಿಎಫ್‌ಐಗೆ ಕುಮ್ಮಕ್ಕು ನೀಡಲಾಗಿತ್ತು. ಭ್ರಷ್ಟಾಚಾರದ ಕುರಿತು ಚರ್ಚಿಸಲಾಗಿದೆ ಎಂದರು.
ಎಂಜಿನೀಯರ್ ಗಳ ಸಾಮೂಹಿಕ ವರ್ಗಾವಣೆ ನಡೆಯುತ್ತಿತ್ತು. ಈ ಕುರಿತು ಚರ್ಚಿಸಲಾಗಿದೆ. ಅದನ್ನು ಮರೆಯಲಾಗುವುದಿಲ್ಲ. ಸಿದ್ದರಾಮಯ್ಯ ಅಧಿಕಾರ ಅವಧಿಯಲ್ಲಿ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು ಸೇರಿದಂತೆ ಕಾಂಗ್ರೆಸ್ ದುರಾಡಳಿತವನ್ನು ಜನರಿಗೆ ತಿಳಿಸಲು ನಿರ್ಧರಿಸಲಾಗಿದೆ ಎಂದರು.
ಸಂಪುಟಕ್ಕೆ ಹೊಸಬರು ಬರಲಿ : ರೇಣುಕಾಚಾರ್ಯ
ಹುಬ್ಬಳ್ಳಿ: ರಾಜ್ಯ ಸಚಿವ ಸಂಪುಟದಲ್ಲಿ ಹೊಸಬರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಹಳಬರು ರಾಜೀನಾಮೆ ನೀಡಬೇಕು, ಗುಜರಾತ್ ಮಾದರಿ ಸಂಪುಟ ರಚನೆ ಆಗಬೇಕು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು-ನಾಲ್ಕು ಬಾರಿ ಸಚಿವರಾದವರು ಸ್ವಯಂ ಸ್ಫೂರ್ತಿಯಿಂದ ರಾಜೀನಾಮೆ ನೀಡಬೇಕು. ಈ ಕುರಿತಾಗಿ ಪಕ್ಷದ ವರಿಷ್ಠರು ಹಾಗೂ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.
ರೇಣುಕಾಚಾರ್ಯಾವರು ಮಾಧ್ಯಮದೊಂದಿಗೆ ಮಾತನಾಡುವ ವೇಳೆ ಸಭೆಯಿಂದ ಹೊರಬಂದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಕ್ಯಾ ಚಲ್ ರಹೇ ಹೈ ರೇಣುಕಾಚಾರಿ ಎಂದಾಗ, ಮಾತು ನಿಲ್ಲಿಸಿ ಅವರ ಬಳಿ ಹೋದ ರೇಣುಕಾಚಾರ್ಯ, ನಿಮ್ಮ ಆಶಿರ್ವಾದ ಸರ್, ಎಂದರು.
ವರಿಷ್ಠರ ನಿರೀಕ್ಷೆ ಹುಸಿಗೊಳಿಸಲಾರೆ
ಹುಬ್ಬಳ್ಳಿ: ನಮ್ಮ ಸರ್ಕಾರದ ಮೇಲೆ ವಿಶ್ವಾಸವಿಟ್ಟು ನಿರ್ಣಯ ಕೈಗೊಂಡ ಕಾರ್ಯಕಾರಿಣಿ ಸಮಿತಿ ಸದಸ್ಯರಿಗೆ ಧನ್ಯವಾದ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಮ್ಮ ಸರ್ಕಾರದ ಮೇಲೆ ವಿಶ್ವಾಸವಿಟ್ಟು ಮುನ್ನಡೆಯಿರಿ ಎಂದು ಬೆನ್ನುತಟ್ಟಿದ್ದು, ಪಕ್ಷ ಬಲಿಷ್ಠವಾಗಬೇಕೆಂಬ ವರಿಷ್ಠರ ಹಾಗೂ ಎಲ್ಲರ ನಿರೀಕ್ಷೆಯನ್ನು ಹುಸಿಗೊಳಿಸದಂತೆ ಕಾರ್ಯನಿರ್ವಹಿಸುವೆ ಎಂದರು.
ಮುಂಬರುವ ಚುನಾವಣೆ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಾಗಿ ಹೋಗಬೇಕೆಂಬ ನಿರ್ಧಾರವನ್ನು ಕೈಗೊಳ್ಳಲಾಗಿದ್ದು, ಕಾರ್ಯಕಾರಿಣಿಯಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆಯಾಗಿಲ್ಲ ಎಂದರು.
ಅರುಣ್ ಸಿಂಗ್ ಮತ್ತು ಕಟೀಲ್ ನೇತೃತ್ವದಲ್ಲಿ ಕಾರ್ಯಕಾರಿಣಿ ಯಶಸ್ವಿಯಾಗಿ ನಡೆದಿದೆ. ವರಿಷ್ಠರಿಗೆ ಇರೋ ಸ್ಪಷ್ಟತೆಯನ್ನು ಅರುಣ್ ಸಿಂಗ್ ಅವರು ಕಾರ್ಯಕಾರಿಣಿಯಲ್ಲಿ ವ್ಯಕ್ತಪಡಿಸಿದ್ದಾರೆ. ಮೊದಲಿನಿಂದಲೂ ನನ್ನ ಮೇಲೆ ವರಿಷ್ಠರಿಗೆ ವಿಶ್ವಾಸವಿದೆ ಎಂದರು. ರಮೇಶ್ ಜಾರಕಿಹೊಳಿ ದೆಹಲಿ ಪ್ರವಾಸ ವಿಚಾರದ ಬಗ್ಗೆ ಕೇಳಿದಾಗ ಯಾರು ಎಲ್ಲಿಗೆ ಬೇಕಾದ್ರೂ ಹೋಗೋ ಸ್ವಾತಂತ್ರ್ಯವಿದೆ ಎಂದರು.
ಅಶಿಸ್ತು ತೋರಿದಲ್ಲಿ ಕಟ್ಟುನಿಟ್ಟಿನ ಕ್ರಮ
ಹುಬ್ಬಳ್ಳಿ: ಬಿಜೆಪಿಯಲ್ಲಿ ಎಲ್ಲರೂ ಕಾರ್ಯಕರ್ತರು. ಇಲ್ಲಿ ನಾಯಕತ್ವ ಶಾಶ್ವತವಲ್ಲ. ಅಲ್ಲದೆ ಯಾವುದೇ ಅಶಿಸ್ತನ್ನು ಪಕ್ಷ ಸಹಿಸುವುದಿಲ್ಲ. ಯಾವುದೇ ಕಾರ್ಯಕರ್ತರು ಅಶಿಸ್ತು ತೋರಿದರು ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸ ಲಾಗುತ್ತದೆ ಎನ್ನುವ ಸಂದೇಶವನ್ನು ಈ ಕಾರ್ಯಕಾರಣಿ ರವಾನೆ ಮಾಡಿದೆ ಎಂದು ಬಿಜೆಪಿ ಮುಖ್ಯ ವಕ್ತಾರ ಎನ್.ಮಹೇಶ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಸಾಕಷ್ಟು ಜನಪರ ಕಾರ್ಯವನ್ನು ಮಾಡಿದೆ. ಹಿಂದು ಧರ್ಮವನ್ನು ಪುನಶ್ಚೇತನ ಮಾಡಿದೆ. ಕಾಶಿಯನ್ನು ದಿವ್ಯಕಾಶಿ ಭವ್ಯಕಾಶಿಯನ್ನಾಗಿ ಮಾಡಿದೆ. ಆಧ್ಯಾತ್ಮ ಧರ್ಮ ಮಾತ್ರವಲ್ಲದೆ, ರಾಮ ಮಂದಿರದ ಜೊತೆಗೆ ದೇಶ ಮಂದಿರವನ್ನು ಕಟ್ಟುತ್ತೇವೆ. ಆತ್ಮನಿರ್ಭರತೆಯು ಎಲ್ಲ ರಂಗದಲ್ಲಿಯೂ ಕಾಣಬೇಕು ಎಂಬು ವಂತ ಮಹತ್ವದ ಕನಸು ಮೋದಿಯವರದಾಗಿದೆ ಎಂದರು.
ರಾಜಕೀಯ ಸವಾಲು ಕುರಿತು ಚರ್ಚೆಯಾಗಿದೆ. ಸೈದ್ದಾಂತಿಕ ನೆಲೆಕಟ್ಟನ್ನು ಗಟ್ಟಿಗೊಳಿಸುವ ಕಾರ್ಯವನ್ನು ಕಾರ್ಯಕಾರಣಿ ಮಾಡಿದೆ. ರಾಜಕೀಯ ಬದ್ಧತೆ ಮತ್ತು ಸಿದ್ಧಾಂತಕ್ಕೆ ಎಲ್ಲರೂ ಬೆಲೆ ಕೊಡಬೇಕು. ಮೈಕ್ರೋಸ್ಕೋಪ್ ಕಮೀಟಿಯವರಿಗೂ ಕೂಡ ಸ್ಥಾನಮಾನ ಕೊಡಬೇಕು ಎಂಬುದನ್ನು ಚರ್ಚಿಸ ಲಾಯಿತು. ಜಪಾನ್ ಹಾಗೂ ಇಸ್ರೇಲ್ ಮಾದರಿಯ ಪ್ರೋ ಆಕ್ಟಿವ್ ಜರ್ನಲಿಸಮ್ ಮೂಲಕ ದೇಶವನ್ನು ಕಟ್ಟುವ ಕಾರ್ಯವಾಗಬೇಕಿದೆ ಎಂದು ಅವರು ಹೇಳಿದರು.
ಬೆಲೆ ಏರಿಕೆ ಕುರಿತು ಮಾತನಾಡಿದ ಅವರು, ಇಂಧನ ಬೆಲೆ ಏರಿಕೆ ನೂರು ವರ್ಷಗಳಲ್ಲಿ ಒಮ್ಮೆ ಕೋವಿಡ್ ಅಂತಹ ಸವಾಲುಗಳು ಬರುತ್ತವೆ. ನಿರ್ವಹಣೆ ಹಿನ್ನಲೆಯಲ್ಲಿ ಬೆಲೆ ಏರಿಕೆ ಮಾಡಲಾಗಿದೆ. ತತ್ತಕ್ಷಣವೇ ಸಾಂಕ್ರಾಮಿಕ ನಮ್ಮ ಎದುರಿಗೆ ಬಂದಿದೆ. ನಾವು ೧೭ ರೂಪಾಯಿ ಕಡಿಮೆ ಮಾಡಿದ್ದೇವೆ ಎಂದರು.
ಕೃಷಿ ಕಾಯಿದೆ ಬಗ್ಗೆ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಮುಂದಿನ ಅಧಿವೇಶನದ ಒಳಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಗೆಜೆಟ್ ಆದ ನಂತರ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಕೇಂದ್ರದಲ್ಲಿ ಆಗಿರುವ ಬಗ್ಗೆ ರಾಜ್ಯದಲ್ಲಿ ಕೂಡ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದರು.
ಗೋಷ್ಠಿಯಲ್ಲಿ ಗಿರಿಧರ ಉಪಾಧ್ಯ, ಗೋಪಿ ಕಟ್ಟಿ, ನಾಗನಗೌಡರ ಇದ್ದರು.
ಸಚಿವ ಸ್ಥಾನ ಬಿಡಲೂ ಸಿದ್ಧ
ಹುಬ್ಬಳ್ಳಿ: ಪಕ್ಷದ ಹಿರಿಯರು ಸೂಚಿಸಿದಲ್ಲಿ ತಾವು ಧಾರಾಳವಾಗಿ ಸಚಿವ ಸ್ಥಾನ ಬಿಟ್ಟುಕೊಡಲು ತಯಾರುವುದಾಗಿ ಗ್ರಾಮೀಣ ಅಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ನಗರದಲ್ಲಿಂದು ರೇಣುಕಾಚಾರ್ಯ ಹೇಳಿಕೆ ಪ್ರಸ್ತಾಪಿಸಿ ಮಾತನಾಡಿದ ಅವರು, ಕೇಂದ್ರದ ವರಿಷ್ಠರು ಹಿರಿಯರನ್ನು ತೆಗೆಯಬೇಕು ಎಂದು ತೀರ್ಮಾನಿಸಿದರೆ ಪ್ರಥಮವಾಗಿ ಒಪ್ಪಿಕೊಂಡು ಸಂತೋಷದಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುತ್ತೇನೆ ಎಂದು ಹೇಳಿದರು.
ಸ್ವಯಂ ಪ್ರೇರಿತವಾಗಿ ಸಚಿವ ಸ್ಥಾನ ಬಿಟ್ಟುಕೊಡುತ್ತಿರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ರಾಜಕೀಯದಲ್ಲಿ ಸ್ಥಾನಮಾನದ ಬಹಳ ಮಹತ್ವದಾಗಿದೆ. ಅಧಿಕಾರದಲ್ಲಿ ಎಷ್ಟರ ಮಟ್ಟಿಗೆ ಒಳ್ಳೆದು, ಕೆಟ್ಟದ್ದು ಎಂಬುದು ರಾಜಕೀಯದಲ್ಲಿ ಇರುವವರಿಗೆ ಗೊತ್ತು ಎಂದರು.
ಈಗಾಗಲೇ ಸರ್ಕಾರದಿಂದ ಎಂಇಎಸ್ ಪುಂಡರಿಗೆ ಕಠಿಣ ಶಿಕ್ಷೆ ನೀಡಲು ತಿಳಿಸಲಾಗಿದೆ. ಬಂದ್ ಕರೆಗೆ ಮಿಶ್ರ ಪ್ರಕ್ರಿಯೆ ವ್ಯಕ್ತವಾಗುತ್ತಿದ್ದು, ಬಂದ್ ಮಾಡುವುದು ಈ ಪರಿಸ್ಥಿತಿಯಲ್ಲಿ ಒಳ್ಳೆಯದಲ್ಲ. ಎಂಇಎಸ್ ಧೋರಣೆ ಬಗ್ಗೆ ಮಾಹಿತಿ ಕಲೆಹಾಕಿ ಕೇಂದ್ರಕ್ಕೆ ನೀಡಲಾಗಿದ್ದು,ಅವರು ಕ್ರಮಕೈಗೊಳ್ಳುತ್ತಾರೆ ಎಂದರು.
ರಾಜ್ಯ ಅಧ್ಯಕ್ಷರು ಹಿಂದೂಳಿದ ವರ್ಗದ ಸಮಾಜದ ಜವಾಬ್ದಾರಿ ನನಗೆ ನೀಡಿದ್ದಾರೆ. ಆದರಿಂದ ಶಿವಮೊಗ್ಗದಲ್ಲಿ ಜ. ೫ ರಂದು ರಾಜ್ಯ ಕಾರ್ಯಕಾರಿ ಸಮಿತಿಯ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.