ಹುಬ್ಬಳ್ಳಿ: ’ಚುನಾವಣೆಯಲ್ಲಿ ಬಿಜೆಪಿ ಗೆಲ್ಲದಿದ್ದರೆ ಮೋದಿ ಆಶೀರ್ವಾದ ಸಿಗುವುದಿಲ್ಲ ಎಂದು ರಾಜಾರೋಷವಾಗಿ ಬೆದರಿಕೆ ಹಾಕುತ್ತಿರುವ ಬಿಜೆಪಿ ಸರ್ಕಾರವನ್ನು ಹೊರದಬ್ಬಬೇಕೆಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಕರೆ ನೀಡಿದರು.
ಗಂಗಾಧರ ನಗರದ ಯಂಗಸ್ಟಾರ್ ಮೈದಾನದಲ್ಲಿ ಪೂರ್ವದ ಅಭ್ಯರ್ಥಿ ಪ್ರಸಾದ ಅಬ್ಬಯ್ಯ ಹಾಗೂ ಇತರ ಅಭ್ಯರ್ಥಿಗಳ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ನಿರಂಕುಶ ಅಧಿಕಾರದ ನಡವಳಿಕೆ ಹೊಂದಿರುವ ಸರ್ಕಾರವನ್ನು ಕಿತ್ತೊಗೆಯಲು ಕರೆ ನೀಡಿದರಲ್ಲದೇ ಜನತೆಯ ಯಾವ ಪ್ರಶ್ನೆಗಳಿಗೂ, ಪತ್ರಗಳಿಗೂ ಉತ್ತರಿಸುತ್ತಿಲ್ಲ. ಸಾಂವಿಧಾನಿಕ ಸಂಸ್ಥೆಗಳು ತಮ್ಮ ಜೇಬಿನಲ್ಲಿವೆ ಅಂದುಕೊಂಡಿದ್ದಾರೆ ಇಂತಹ ಭೃಷ್ಟ ಸರ್ಕಾರ ಹೊರ ಹೋಗಲೇ ಬೇಕಾಗಿದೆ ಎಂದರು.
’2018ರಲ್ಲಿ ಇವರಿಗೆ ನೀವು ಅಧಿಕಾರ ನೀಡಿರಲಿಲ್ಲ. ಆದರೆ, ಇವರು ಆಕ್ರಮಣದಿಂದ ಸರ್ಕಾರವನ್ನು ವಶಪಡಿಸಿಕೊಂಡರು. ನಂತರ ಬಂದ ಅವರ ಶೇ 40 ಕಮಿಷನ್ ಸರ್ಕಾರ, ನಿಮ್ಮನ್ನು ಲೂಟಿ ಮಾಡಲು ಇಳಿಯಿತು’ ಎಂದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ ನಾ ಖಾವೂಂಗಾ ನಾ ಖಾನೆ ದೂಂಗಾ ಎನ್ನುವ ಪ್ರಧಾನಿ ಮೋದಿ ಭ್ರಷ್ಟಾಚಾರ ಮಾಡುವವರನ್ನು ಪಕ್ಕದಲ್ಲಿ ಕೂಡ್ರಿಸಿಕೊಂಡುಶೇ.40ರಷ್ಟು ಕಮೀಶನ್ ಪಡೆಯಲಾಗುತ್ತಿದೆ ಎಂದರು.
ನಾವೂ ಕೂಡ ಜೈ ಭಜರಂಗ ಬಲಿ ಎನ್ನುತ್ತೇವೆ ಅದೇ ವೇಳೆ ತೋಡ ದೇ ಭೃಷ್ಟಾಚಾರ ಕಿ ನಲಿ ಎಂದು ಹೇಳಿದರಲ್ಲದೇ ಬಿಜೆಪಿಯವರಿಗೆ ಸುಳ್ಳೇ ಮನೆ ದೇವರು ಎಂದು ವಾಗ್ದಾಳಿ ನಡೆಸಿದರು.
ಮಾಜಿ ಸಿಎಂ ಜಗದೀಶ ಶೆಟ್ಟರ್ ಪಕ್ಷದ ಪ್ರಣಾಳಿಕೆ ನಿಜವಾದ ಬಡವರ ಬಗೆಗಿನ ಕಾಳಜಿಯ ಧ್ಯೋತಕವಾಗಿದೆ.ಶೆಟ್ಟರ್ ಸೋಲಿಸುವಂತೆ ಬಿಜೆಪಿಯ ದೊಡ್ಡ ದೊಡ್ಡ ನಾಯಕರು ಹೇಳುತ್ತಿದ್ದಾರೆ. ಇದು ಕರ್ನಾಟಕ ಗುಜರಾತ್ ಅಲ್ಲ ಎಂದು ಟಾಂಗ ನೀಡಿದರಲ್ಲದೇ ಹುಬ್ಬಳ್ಳಿಗರು ನನ್ನ ಪರವಾಗಿದ್ದು ಯಾರಿಂದಲೂ ಸೋಲಿಸಲಾಗದು ಎಂದರು.
ನಾಯಕರಾದ ರಾಹುಲ್ ಗಾಂಧಿ,ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ,ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ, ಕಾರ್ಯಾಧ್ಯಕ್ಷ ಸಲೀಂ ಅಹ್ಮದ ಇನ್ನಿತರರಿದ್ದರು