ನಿಜವಾದ ಸಂಜೆ ದರ್ಪಣದ ಮೀಸಲಾತಿ ಭವಿಷ್ಯ
ಹುಬ್ಬಳ್ಳಿ : ಕೊನೆಗೂ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಮೀಸಲಾತಿಯ ಅಧಿಸೂಚನೆ ಕೊನೆಗೂ ಹೊರ ಬಿದ್ದಿದ್ದು ಗೌನ್ ಧರಿಸುವವರಾರು ಎಂಬ ದಿನಗಣನೆ ಆರಂಭವಾದಂತಾಗಿದೆ.
ಮೇಯರ್ ಹುದ್ದೆ ಸಾಮಾನ್ಯ ಹಾಗೂ ಉಪಮೇಯರ್ ಸಾಮಾನ್ಯ ಮಹಿಳೆಗೆ ನಿಗದಿಯಾಗಿದ್ದು ಎರಡು ತಿಂಗಳ ಹಿಂದೆಯೇ ಸಂಜೆ ದರ್ಪಣ ಪ್ರಕಟಿಸಿದ್ದ ಭವಿಷ್ಯ ಕೊನೆಗೂ ನಿಜವಾಗಿದೆ.
ಮೇಯರ್,ಉಪಮೇಯರ್ 21 ನೇ ಅವಧಿಗೆ ಚುನಾವಣೆ ನಡೆಸುವಂತೆ ಅಧಿಸೂಚನೆಯನ್ನುರಾಜ್ಯ ಸರ್ಕಾರದಿಂದ ಅಧಿಸೂಚನೆ ಪ್ರಕಟವಾಗಿದ್ದು
ಎಲ್ಲ ಗೊಂದಲಕ್ಕೆ ತೆರೆ ಬಿದ್ದಿದೆ. ಚುನಾವಣೆ ದಿನಾಂಕವನ್ನು ಬೆಳಗಾವಿ ಪ್ರಾದೇಶಿಕ ಆಯುಕ್ತರು ಶೀಘ್ರ ಪ್ರಕಟಿಸಿಲಿದ್ದು ಆಕಾಂಕ್ಷಿಗಳ ಅಖಾಡಾ ರಂಗೇರಲಿದೆ.
ಮೇಯರ್ ಹಾಗೂ ಉಪಮೇಯರ್ ಚುನಾವಣೆ ಸುಮಾರು 3 ತಿಂಗಳಾಗಿದ್ದು ಚುನಾವಣೆ ನಡೆಸದಿರುವ ಸರ್ಕಾರದ ಕ್ರಮ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆಗೆ ಇಳಿದ ದಿನವೇ ಮೀಸಲಾತಿ ಪ್ರಕಟವಾಗಿದೆ.
ಈ ಹಿಂದಿನ ಲೆಕ್ಕಾಚಾರದಂತೆ ಮೇಯರ್ ಸ್ಥಾನ ಹಿಂದುಳಿದ ಎ ವರ್ಗಕ್ಕೆ ಹಾಗೂ ಉಪಮೇಯರ್ ಸ್ಥಾನ ಪರಿಶಿಷ್ಠ ಮಹಿಳೆಗೆ ಮೀಸಲಾಗಿತ್ತು. ಮೇಯರ್ ಸ್ಥಾನ ಹಿಂದುಳಿದ ಎ ವರ್ಗಕ್ಕೆ ಮೀಸಲಾಗಿದ್ದ ಸಂದರ್ಭದಲ್ಲಿ ಕೇಂದ್ರ ಸಚಿವರ ಪರಮಾಪ್ತ ಈರೇಶ ಅಂಚಟಗೇರಿ, ತಿಪ್ಪಣ್ಣ ಮಜ್ಜಗಿ, ರಾಮಣ್ಣ ಬಡಿಗೇರ, ಸತೀಶ ಹಾನಗಲ್, ಉಮೇಶ ಕೌಜಗೇರಿ ಮುಂತಾದವರು ಹೆಸರು ಕೇಳಿ ಬಂದಿದ್ದವಲ್ಲದೇ ಉಪ ಮೇಯರ್ ಪಟ್ಟ ಪಕ್ಷಕ್ಕೆ ಮರು ಸೇರ್ಪಡೆಯಾದ ಯುವ ಮುಖಂಡ ಶಶಿ ಬಿಜವಾಡರ ಪತ್ನಿಯೊಬ್ಬಳೆ ಏಕೈಕ ಎಸ್ ಸಿ ಮಹಿಳೆಯಾದ್ದರಿಂದ ಅವರಿಗೇ ನಿಕ್ಕಿಯಾಗಿತ್ತು. ಈಗ ಮೀಸಲಾತಿ ಬದಲಾಗುತ್ತಿದ್ದಂತೆಯೆ ಹೊಸ ಲೆಕ್ಕಾಚಾರಗಳು ಕೇಸರಿ ಪಡೆಯಲ್ಲಿ ಆರಂಭವಾಗಿ ತಿಂಗಳ ಮೇಲಾಗಿದೆ.
ಸಾಮಾನ್ಯ ಮೀಸಲಾತಿಯನ್ವಯ ಹಿರಿತನದ ಆಧಾರದ ಮೇಲೆ ಈಗಾಗಲೇ ಮೇಯರ್ ಆಗಿ ಅನುಭವವಿರುವ ವೀರಣ್ಣ ಸವಡಿ, (ನಾಲ್ಕನೇ ಬಾರಿಗೆ ಆಯ್ಕೆ) ಅಲ್ಲದೇ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಪ್ರಥಮ ಪ್ರಜೆಯ ಗಾದಿಯ ಆಳ ಅಗಲ ಬಲ್ಲ ಶಿವು ಹಿರೇಮಠ, ಜೆಡಿಎಸ್‌ನಲ್ಲಿದ್ದು ವಿಪಕ್ಷ ನಾಯಕನ ಸ್ಥಾನ ನಿರ್ವಹಿಸಿರುವ ರಾಜಣ್ಣ ಕೊರವಿ, ಮಲ್ಲಿಕಾರ್ಜುನ ಗುಂಡೂರ, ವಿಜಯಾನಂದ ಶೆಟ್ಟಿ, ಉಮೇಶ ಕೌಜಗೇರಿ ಇವರ ಹೆಸರುಗಳು ಮುಂಚೂಣಿಯಲ್ಲಿ ಬರಲಿವೆ.
ಸಾಮಾನ್ಯ ಮೀಸಲಾತಿಯಲ್ಲಿ ಉಳಿದವರಿಗೂ ಮುಕ್ತ ಅವಕಾಶವಿದ್ದು ಈರೇಶ ಅಂಚಟಗೇರಿ, ನಾಲ್ಕನೆ ಬಾರಿ ಗೆಲುವು ಸಾಧಿಸಿರುವ ರಾಮಣ್ಣ ಬಡಿಗೇರ, ತಿಪ್ಪಣ್ಣ ಮಜ್ಜಗಿ ಮುಂತಾದವರು ಸಹ ಪರಿಗಣನೆಗೆ ಬರಬಹುದಾಗಿದ್ದು, ಪ್ರಸಕ್ತ ಬಿಜೆಪಿಯಲ್ಲಿ ಮನೆಯೊಂದು ಮೂರು ಬಾಗಿಲು ಎನ್ನುವಂತಹ ವಾತಾವರಣವಿದ್ದರೂ ಅಂತಿಮವಾಗಿ ಮಾಜಿ ಸಿಎಂ ಜಗದೀಶ ಶೆಟ್ಟರ್ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕೈ ತೋರಿಸಿದವರಿಗೆ ಪಟ್ಟ ಗ್ಯಾರಂಟಿ ಎನ್ನಬಹುದಾಗಿದೆ.
ಹಿಂದಿನ ಲೆಕ್ಕಾಚಾರದಂತೆ ಯಾವುದೇ ಸಣ್ಣ ಆಸ್ಪದವನ್ನೂ ನೀಡದೇ ಉಪಮೇಯರ್ ಸ್ಥಾನಕ್ಕೆ ಯಾರೊಬ್ಬ ಪರಿಶಿಷ್ಠ ಮಹಿಳೆಯರೂ ಬಿಜೆಪಿಯಲ್ಲಿ ಇಲ್ಲದ್ದರಿಂದ ಕೂಡಲೇ ಬಂಡುಕೋರರಾಗಿ ಗೆಲುವು ಸಾಧಿಸಿದ್ದ ಶಶಿ ಬಿಜವಾಡರ ಪತ್ನಿ ದುರ್ಗಮ್ಮಳನ್ನು ಸ್ವಾಗತಿಸಿದರೂ ಈಗ ಸಾಮಾನ್ಯ ಮಹಿಳೆಗೆ ಮೀಸಲಾದ್ದರಿಂದ ಈಗ ಬೇರೊಬ್ಬರ ಪಾಲಾಗುವುದು ನಿಕ್ಕಿ ಎನ್ನುವಂತಾಗಿದೆ.