ಹುಬ್ಬಳ್ಳಿ: ಇದುವರೆಗೆ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಲ್ಲಿ ಉಳಿದ ಪಕ್ಷಗಳ ಮುಖಂಡರು ಬಿಜೆಪಿಯತ್ತ ಮುಖ ಮಾಡುವುದು ಸಾಮಾನ್ಯವಾಗಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್ನ ಘಟಾನುಘಟಿ ಮುಖಂಡರು, ಚುನಾವಣೆಯಲ್ಲಿ ಸೆಡ್ಡು ಹೊಡೆದವರೆಲ್ಲ ಇಂದು ಆ ಪಕ್ಷದಲ್ಲೇ ಇದ್ದಾರೆ. ಕಳೆದ ಮಹಾನಗರಪಾಲಿಕೆಯ ಚುನಾವಣೆಯಲ್ಲಿ ಸೆಂಟ್ರಲ್ ಕ್ಷೇತ್ರದ 25 ಸ್ಥಾನಗಳ ಪೈಕಿ 8 ಸ್ಥಾನ ಗಳಿಸಿ ಕಾಂಗ್ರೆಸ್ ಕಮಾಲ್ ಮಾಡಿದ್ದು ಈಗ ಪರಿಸ್ಥಿತಿ ಬದಲಾವಣೆಯಾಗಿದೆ.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಪ್ರತಿನಿಧಿಸುವ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದ ಪ್ರಭಾವಿ ಬಿಜೆಪಿ ಮುಖಂಡರು ಕೈ ಪಾಳೆಯದತ್ತ ಮುಖ ಮಾಡಿದ್ದಾರೆ .
ಮಹಾನಗರ ಪಾಲಿಕೆ ಮಾಜಿ ಸದಸ್ಯ ಅಲ್ಲದೇ ಬೆಂಗೇರಿ ಪ್ರದೇಶದ ಪ್ರಭಾವಿ ಮುಖಂಡ ಹೂವಪ್ಪ ದಾಯಗೋಡಿ, ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾಗಿದ್ದ ಗಿರಣಿ ಚಾಳ ಪ್ರದೇಶದ ಗೋಪಾಲ ಎಣ್ಣೆಚವಂಡಿ ತಮ್ಮ ದೊಡ್ಡ ಸಂಖ್ಯೆಯ ಬೆಂಬಲಿಗರೊಂದಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಸೇರ್ಪಡೆಯಾಗಲಿದ್ದಾರೆ.
ಮುಂದಿನ ದಿನಗಳಲ್ಲಿ ಬಿಜೆಪಿಯ ಇನ್ನಷ್ಟು ಪ್ರಮುಖರು ಮಾಜಿ ಪಾಲಿಕೆ ಸದಸ್ಯರು ಕೈ ಹಿಡಿಯುವುದು ನಿಶ್ಚಿತವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.