ಬಜೆಟ್‌ನಲ್ಲಿ ಎಲ್ಲ ವರ್ಗಗಳ ಅಭಿವೃದ್ಧಿಗೆ ಆದ್ಯತೆ
ರಾಜ್ಯ ಪ್ರಧಾನ ಕಾರ್ಯದರ್ಶಿ ಟೆಂಗಿನಕಾಯಿ ಹೇಳಿಕೆ
ಹುಬ್ಬಳ್ಳಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್, ಸರ್ವಸ್ಪರ್ಶಿಯಾಗಿದೆ. ಎಲ್ಲಾ ವರ್ಗಗಳ ಅಭಿವೃದ್ಧಿಗೆ ಆದ್ಯತೆ ನೀಡಿದೆ. ಯುವಜನರ ಏಳಿಗೆ ಮತ್ತು ಶಿಕ್ಷಣದ ದೂರದೃಷ್ಟಿ ಎದ್ದು ಕಾಣುತ್ತದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯದ ಡಬಲ್ ಎಂಜಿನ್ ಸರ್ಕಾರದ ಎರಡೂ ಬಜೆಟ್‌ಗಳು ಎಲ್ಲಾ ವಲಯ ಗಳ ಅಭಿವೃದ್ಧಿಗೆ ಆದ್ಯತೆ ನೀಡಿವೆ. ನುಡಿದಂತೆ ನಡೆದ ಸರ್ಕಾರ ನಮ್ಮದಾಗಿದೆ ಎಂದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳ ಮಾಡಿ ಬದ್ಧತೆ ಮೆರೆದಿದೆ. ವಿದ್ಯಾನಿಧಿ ಯೋಜನೆಯನ್ನು ನೇಕಾರರು, ಮೀನುಗಾರರು ಹಾಗೂ ಕ್ಯಾಬ್ ಚಾಲಕರಿಗೆ ವಿಸ್ತರಿಸಲಾಗಿದೆ. ಮುಖ್ಯಮಂತ್ರಿ ವಿದ್ಯಾ ಶಕ್ತಿ ಯೋಜನೆಯಿಂದ ಎಂಟು ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಗೃಹಿಣಿಯರಿಗೆ ಮಾಸಾಶನ, ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ 5 ಸಾವಿರ ಕೊಟ್ಟಿರುವುದು ಡಬಲ್ ಎಂಜಿನ್ ಸರ್ಕಾರದ ಸಾಧನೆ. ರೈಲು ಮಾರ್ಗಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ರೈತ ಉತ್ಪನ್ನ ಯೋಜನೆ ಘೋಷಿಸಲಾಗಿದೆ ಎಂದು ಬಣ್ಣಿಸಿದರು.
ಸರ್ಕಾರದ ವಿರುದ್ಧ ಟೀಕಿಸುವ ವಿರೋಧ ಪಕ್ಷಗಳು, ಸದನಕ್ಕೆ ಬಂದು ಚರ್ಚೆ ನಡೆಸದೆ ಪಲಾಯನ ಮಾಡುತ್ತಿವೆ. ಮುಂದಿನ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಕಾಂಗ್ರೆಸ್‌ನ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು, ತಳಬುಡವಿಲ್ಲದ ಟೀಕೆಗಳನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಅವರು, ತಮ್ಮ ಪಕ್ಷದ ಅಂತರಿಕ ಕಲಹವನ್ನು ಮೊದಲು ಬಗೆಹರಿಸಲಿ. ನಂತರ ಸರ್ಕಾರದ ವಿರುದ್ಧ ಟೀಕಿಸಲಿ ಎಂದು ತಿರುಗೇಟು ನೀಡಿದರು.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಇರುವವರೆಗೆ ಸೆಂಟ್ರಲ್ ಕ್ಷೇತ್ರಕ್ಕೆ ಬೇರೆ ಅಭ್ಯರ್ಥಿ ಬರುವ ಪ್ರಶ್ನೆ ಉದ್ಭವಿಸುವುದಿಲ್ಲ. ಅವರು ಇನ್ನೂ ಹತ್ತು ಸಲ ಸ್ಪರ್ಧೆ ಮಾಡಿದರೂ ಗೆಲ್ಲಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ವಕ್ತಾರ ರವಿ ನಾಯಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದತ್ತಮೂರ್ತಿ ಕುಲಕರ್ಣಿ ಗೋಷ್ಠಿಯಲ್ಲಿ ಇದ್ದರು.