ಭದ್ರತಾ ಲೋಪಕ್ಕೆ ಎಡಿಜಿಪಿ ತರಾಟೆ
ಹುಬ್ಬಳ್ಳಿ: ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಹತ್ಯೆ ನಡೆದ ಉಣಕಲ್ ಶ್ರೀನಗರ ಕ್ರಾಸ್ ಬಳಿಯ ಪ್ರೆಸಿಡೆಂಟ್ ಹೊಟೆಲ್‌ಗೆ ರಾಜ್ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ಎಡಿಜಿಪಿ) ಅಲೋಕ್ ಕುಮಾರ್ ಇಂದು ಭೇಟಿ ನೀಡಿ ಪರಿಶೀಲಿಸಿದರು.
ಹತ್ಯೆಯ ಬಗ್ಗೆ ಮಾಹಿತಿ ಪಡೆದ ಅಲೋಕ್ ಕುಮಾರ್, ಉದ್ಯಮಿಗಳು ಸೇರಿದಂತೆ ದೊಡ್ಡ ದೊಡ್ಡ ವ್ಯಕ್ತಿಗಳು ಭೇಟಿ ನೀಡುವ ಹೋಟೆಲ್‌ನ ಪ್ರವೇಶದ್ವಾರದಲ್ಲಿ ಮೆಟಲ್ ಡಿಟೆಕ್ಟರ್ ವ್ಯವಸ್ಥೆ ಹಾಗೂ ವ್ಯಕ್ತಿಗಳ ತಪಾಸಣೆ ಮಾಡದೆ ಹಾಗೆಯೇ ಬಿಡುವುದರ ಕುರಿತು ಹೋಟೆಲ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ಪ್ರತಿಷ್ಠಿತ ಹೊಟೆಲಿನ ಭದ್ರತಾ ಲೋಪದ ಬಗ್ಗೆ ಗರಂ ಆದ ಅವರು, ಹೋಟೆಲ್ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಳ್ಳುವ ಜೊತೆಗೆ ಪೊಲೀಸ್ ಅಧಿಕಾರಿಗಳಿಂದಲೂ ಹೆಚ್ಚಿನ ವಿವರ ಪಡೆದಿದ್ದಾರೆ.
ಹತ್ಯೆ ನಡೆದ ಸ್ಥಳದಿಂದ ಡೆನಿಸನ್ಸ್ ಹೊಟೆಲ್, ನವೀನ ಹೊಟೆಲ್ ಗಳಂಥ ದೊಡ್ಡ ಹೊಟೆಲ್‌ಗಳಿಗೆ ಭೇಟಿ ನೀಡಿ ಭದ್ರತೆ ಬಗ್ಗೆ ಪರಿಶೀಲನೆ ನಡೆಸಿದರು.
ನಂತರ ವಿದ್ಯಾನಗರ ಠಾಣೆಗೆ ಬಂದ ಅವರು, ಪ್ರಕರಣದ ತನಿಖೆಯ ಬೆಳವಣಿಗೆ ಕುರಿತು ಮಾಹಿತಿ ಪಡೆದರು.
ಪೊಲೀಸ್ ಆಯುಕ್ತ ಲಾಭೂರಾಮ್, ಡಿಸಿಪಿಗಳಾದ ಗೋಪಾಲ ಬ್ಯಾಕೋಡ, ಸಾಹಿಲ್ ಬಾಗ್ಲಾ, ಎಸಿಪಿ ವಿನೋದ ಮುಕ್ತೇದಾರ ಹಾಗೂ ಇನ್ಸ್‌ಪೆಕ್ಟರ್‌ಗಳು ಇದ್ದರು.
ಹಂತಕರನ್ನು ಮತ್ತೆ ೬ ದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ಮುಂದುವರಿಸಿದ್ದು ಚಂದ್ರಶೇಖರ ಅಂಗಡಿಯವರ ಆಸ್ತಿಗಳ ಕುರಿತು ಸಾಕಷ್ಟು ವಿವರ ಅಲ್ಲದೇ ಇನ್ನಿತರ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಅಂದು ಕೊಲೆ ಮಾಡಿ ಪರಾರಿಯಾಗಲು ಸಹಕರಿಸಿದವರ ಬಗ್ಗೆ ಕೂಡ ತನಿಖೆ ನಡೆಯುತ್ತಿದೆ ಎನ್ನಲಾಗಿದೆ.