ಕುಂದಗೋಳದಲ್ಲಿ ಪಕ್ಷಕ್ಕೆ ದ್ರೋಹ ಮಾಡುವವರಿಗೆ ತಕ್ಕ ಪಾಠ ಕಲಿಸುತ್ತೇನೆ
ಹುಬ್ಬಳ್ಳಿ: ಬಿಜೆಪಿ ವರಿಷ್ಠರು ಅಂತಿಮ ಕ್ಷಣದಲ್ಲಿ ಬೆನ್ನಿಗೆ ಚೂರಿ ಹಾಕಿದ್ದು ಕುಂದಗೋಳ ಕ್ಷೇತ್ರದಿಂದ ಬಂಡಾಯದ ಬಾವುಟ ಹಾರಿಸಲು ಮಾಜಿ ಶಾಸಕ ಅಲ್ಲದೇ ಯಡಿಯೂರಪ್ಪ ಅವರ ಬೀಗರಾದ ಎಸ್.ಐ.ಚಿಕ್ಕನಗೌಡ್ರ ಮುಂದಾಗಿದ್ದಾರೆ.
ನಿನ್ನೆ ತಮ್ಮ ಸ್ವಗ್ರಾಮ ಅದರಗುಂಚಿಯಲ್ಲಿ ಪಕ್ಷಾತೀತವಾಗಿ ನಡೆದ ಸಹಸ್ರಾರು ಬೆಂಬಲಿಗರ ಸಭೆ ನಡೆಸಿದ ನಂತರ ಬೆಂಗಳೂರಿಗೆ ತೆರಳಿದ್ದು ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅಲ್ಲದೇ ಇಂದು ಬೆಳಿಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿಯಾಗಿದ್ದಾರೆ.
ಕಾಂಗ್ರೆಸ್ ಸೇರ್ಪಡೆಯಾಗುವರೋ ಅಥವಾ ಪಕ್ಷೇತರರಾಗಿ ಕಣಕ್ಕಿಳಿಯುವರೋ ಎಂಬುದು ಇನ್ನೂ ಖಚಿತವಾಗಿಲ್ಲವಾಗಿದ್ದು ಕುಂದಗೋಳದಲ್ಲಿ ಪಕ್ಷಕ್ಕೆ ದ್ರೋಹ ಮಾಡುವವರಿಗೆ ತಕ್ಕ ಪಾಠ ಕಲಿಸುತ್ತೇನೆ ಎಂದು ಸ್ಪಷ್ಟವಾಗಿ ಹೇಳಿದ್ದು ಚಿಕ್ಕನಗೌಡ್ರ ಕಣಕ್ಕಿಳಿಯುವುದು ಖಚಿತವಾಗಿದೆ.
ಈಗಾಗಲೇ ಬಿಜೆಪಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಪ್ತ ಎಂ.ಆರ್.ಪಾಟೀಲರಿಗೆ ಮಣೆ ಹಾಕಿದೆ. ನಾಳೆ ಬೆಂಗಳೂರಿನಿಂದ ಮರಳಲಿರುವ ಚಿಕ್ಕನಗೌಡ್ರ ಮುಂದಿನ ನಡೆ ಪ್ರಕಟಿಸಲಿದ್ದಾರೆ. ಕಲಘಟಗಿ ಹಾಗೂ ಧಾರವಾಡ ಗ್ರಾಮೀಣದಲ್ಲೂ ಬಿಜೆಪಿಗೆ ಬಂಡಾಯ ತಲೆನೋವಾಗಿ ಪರಿಣಮಿಸಿದ್ದು ಬಹುತೇಕ ಈಗಾಗಲೇ ಪಕ್ಷಕ್ಕೆ ರಾಜೀನಾಮೆ ನೀಡಿರುವ ಎಲ್ಲ ಸಮುದಾಯಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ತವನಪ್ಪ ಅಷ್ಟಗಿ ಪಕ್ಷೇತರರಾಗಿ ಕಣಕ್ಕಿಳಿಯುವರೆನ್ನಲಾಗಿದೆ.