ಹುಬ್ಬಳ್ಳಿ-ಧಾರವಾಡ ಸುದ್ದಿ
ಪ್ರತಿಭಟನಾಕಾರರಿಗೆ ಧಾರವಾಡಿಗರ ಬಿಸಿ

ಪ್ರತಿಭಟನಾಕಾರರಿಗೆ ಧಾರವಾಡಿಗರ ಬಿಸಿ

ಪ್ರತಿಭಟನೆಗೆ ಅನುಮತಿ ಬೇಡ: ಪೊಲೀಸರಿಗೆ ನಾಗರಿಕರ ಮನವಿ
ಧಾರವಾಡ: ನಗರದಲ್ಲಿ ಯಾರ್‍ಯಾರೋ ಹೊರಗಿನವರು ಬಂದು ಪ್ರತಿಭಟನೆ ನೆಪದಲ್ಲಿ ನಗರದ ಶಾಂತ ವಾತಾವರಣವನ್ನು ಕದಡುತ್ತಿದ್ದಾರೆ. ಈ ರೀತಿಯ ಪ್ರತಿಭಟನೆ, ಮೆರವಣಿಗೆಗಳಿಗೆ ಸ್ಥಳೀಯ ಸಂಘಟನೆಗಳ ಬೆಂಬಲವಿಲ್ಲದಿದ್ದರೂ ವಿದ್ಯಾರ್ಥಿಗಳನ್ನು ಪ್ರಚೋದನೆಗೊಳಪಡಿಸಿ ಗಲಾಟೆ ಎಬ್ಬಿಸಲು ಪ್ರಯತ್ನಿಸುತ್ತಿದ್ದು ಯಾವುದೇ ಕಾರಣಕ್ಕೂ ಇಂತಹ ಪ್ರಚೋದನಾತ್ಮಕ ಪ್ರತಿಭಟನೆಗಳಿಗೆ ಅನುಮತಿ ನೀಡಬಾರದು ಎಂದು ಭಾನುವಾರ ನಗರದ ಹಲವಾರು ಸಂಘಟನೆಗಳ ಮುಖಂಡರು ಉಪನಗರ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿ ಆಗ್ರಹಿಸಿದರು.


ಶನಿವಾರ ಸಂಜೆ-ದರ್ಪಣ ಪತ್ರಿಕೆಯಲ್ಲಿ ’ವಿದ್ಯಾಕಾಶಿ’ ಹೋರಾಟ ರಾಜಕೀಯ ಶೀರ್ಷಿಕೆಯಡಿ ಪ್ರಕಟಗೊಂಡ ಪ್ರಧಾನ ಸುದ್ದಿಯನ್ನು ಈ ವೇಳೆ ನಗರದ ಸಂಘಟನೆಗಳವರು ಶ್ಲಾಘಿಸಿದ್ದು, ಪತ್ರಿಕೆಯನ್ನು ಹಿಡಿದುಕೊಂಡು ಪೊಲೀಸ್ ಠಾಣೆಗೆ ಆಗಮಿಸಿದ್ದು ಗಮನ ಸೆಳೆಯಿತು.


ಸಂಘಟನೆಗಳಾದ ಸಮತಾ ಸೇನಾ ಕರ್ನಾಟಕದ ಜಿಲ್ಲಾ ಸಮಿತಿ, ಭೀಮ ಶಕ್ತಿ, ಜಯ ಕರ್ನಾಟಕ ಸೇರಿದಂತೆ ಹಲವಾರು ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು, ಸದಸ್ಯರು ಈ ಕುರಿತು ಪೊಲೀಸ್ ಠಾಣೆಗೆ ಸಲ್ಲಿಸಿದ ಮನವಿಯಲ್ಲಿ, ಶಾಂತಿಪ್ರಿಯ ನಗರ ಧಾರವಾಡದ ಸಾರ್ವಜನಿಕ ಸ್ಥಳಗಳಲ್ಲಿ ಇತ್ತೀಚೆಗೆ ನಡೆಯುತ್ತಿರುವ ಪ್ರತಿಭಟನೆಗಳಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಇಲ್ಲಿ ಹಲವು ವಿಶ್ವವಿದ್ಯಾಲಯಗಳು, ಐಐಟಿ, ಐಐಐಟಿಯಂತ ಉನ್ನತ ಶಿಕ್ಷಣ ಕೇಂದ್ರಗಳು, ಹೈಕೋರ್ಟ್ ಸೇರಿದಂತೆ ಮಹತ್ವದ ಸಂಸ್ಥೆಗಳಿಗೆ ನಿತ್ಯವೂ ಸಾವಿರಾರು ಜನ ವಿದ್ಯಾರ್ಥಿಗಳು, ನೌಕರರು ಸಂಚರಿಸುತ್ತಾರೆ. ನೂರಾರು ಕೈಗಾರಿಕೆಗಳಿದ್ದು ಅಧಿಕಾರಿಗಳು, ಕಾರ್ಮಿಕರು ನಿತ್ಯ ಕೆಲಸಕ್ಕೆ ಹೋಗುತ್ತಾರೆ.

ಮುಖ್ಯವಾಗಿ ಜಿಲ್ಲಾಸ್ಪತ್ರೆ, ಎಸ್‌ಡಿಎಂ ಆಸ್ಪತ್ರೆ, ಕೆಎಂಸಿಆರ್‌ಐಗಳಿಗೆ ತುರ್ತುಚಿಕಿತ್ಸೆಗಾಗಿ ರೋಗಿಗಳನ್ನು ಸಾಗಿಸುವ ಆಂಬುಲೆನ್ಸ್‌ಗಳು ಸಂಚರಿಸುತ್ತಿರುತ್ತವೆ. ಈ ಎಲ್ಲರಿಗೂ ಪ್ರತಿಭಟನೆ ಬಿಸಿ ತಟ್ಟುತ್ತದೆ. ನಗರದೆಲ್ಲೆಡೆ ಹೊರಗಿನಿಂದ ಬಂದ ಸಾವಿರಾರು ವಿದ್ಯಾರ್ಥಿಗಳು ತಮ್ಮ ಉತ್ತಮ ಭವಿಷ್ಯಕ್ಕಾಗಿ ಅಧ್ಯಯನ ನಿರತರಾಗಿರುತ್ತಾರೆ. ಇಲ್ಲಿ ಸಾವಿರಾರು ಶಾಲೆ-ಕಾಲೇಜುಗಳು, ಮಠ-ಮಂದಿರ, ಮಸೀದಿ, ಚರ್ಚಗಳು ಇವೆ. ಜನವಸತಿ ಪ್ರದೇಶಗಳಿವೆ. ಹೀಗಿರುವಾಗ ಅನುಮತಿ ಇಲ್ಲದೇ ಯ್ಯಾರ್‍ಯಾರೋ ಪ್ರಚೋದನೆಗೊಳಪಡಿಸಿ ಪ್ರತಿಭಟನೆ, ಮೆರವಣಿಗೆ ಹೆಸರಿನಲ್ಲಿ ಜನಜೀವನಕ್ಕೆ ತೊಂದರೆ ಕೊಡುತ್ತಿದ್ದಾರೆ. ಇಲ್ಲಿನ ಶಾಂತಿಪ್ರಿಯ ವಾತಾವರಣದಿಂದಲೇ ನಗರವು ವಿದ್ಯಾಕಾಶಿ, ಸಾಂಸ್ಕೃತಿಕ ನಗರಿ, ಪೇಢಾನಗರಿ, ಕವಿಗಳ ಊರು ಮುಂತಾದ ಹೆಸರುಗಳಿಂದ ಖ್ಯಾತವಾಗಿದೆ. ಆದ ಕಾರಣ ಈ ಎಲ್ಲ ಸಂಗತಿಗಳನ್ನು ಗಮನಿಸಿ ಪ್ರಚೋದನೆ ನೀಡುವ ಯಾವುದೇ ಪ್ರತಭಟನೆಗಳಿಗೆ ಅವಕಾಶ ನೀಡಬಾರದು, ನಗರದ ಶಾಂತಿ ಸುವ್ಯವಸ್ಥೆ ಹಾಗೇ ಇರುವಂತೆ ನೋಡಿಕೊಳ್ಳಬೇಕು ಎಂದು ಮನವಿಯಲ್ಲಿ ವಿವರಿಸಿದ್ದಾರೆ.
ಸಮತಾ ಸೇನಾ ಧಾರವಾಡ ಜಿಲ್ಲಾ ಅಧ್ಯಕ್ಷ ಹನುಮಂತ ಎಂ.ಮನಗುಂಡಿ, ಭೀಮ ಶಕ್ತಿ ಸಂಘಟನೆಯ ಶಂಕರ ಮುಗಳಿ ಎಂ.ಅರವಿಂದ, ಜಯ ಕರ್ನಾಟಕ ಸುಧೀರ ಮುಧೋಳ ಸೇರಿದಂತೆ ನೂರಾರು ಜನರು ಮನವಿ ಸಲ್ಲಿಸಿದರು.

administrator

Related Articles

Leave a Reply

Your email address will not be published. Required fields are marked *